ಯುವಕರಿಬ್ಬರಿದ್ದ ಸ್ಕೂಟರ್ ವಿದ್ಯುತ್ ಕಂಬಕ್ಕೆ ಢಿಕ್ಕಿ: ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು
ಮುದರಂಗಡಿಯಲ್ಲಿದ್ದ ಪಾರ್ಟಿಯೊಂದರಲ್ಲಿ ಪಾಲ್ಗೊಂಡು ಎರ್ಮಾಳಿಗೆ ಮರಳುತ್ತಿದ್ದ ಯುವಕರಿಬ್ಬರಿದ್ದ ಸ್ಕೂಟರ್ ಅದಮಾರಿನಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಗಂಭೀರ ಸ್ಥಿತಿಯಲ್ಲಿ ಮಣಿಪಾಲದ ಆಸ್ಪತ್ರೆಗೆ ಸೇರಿಸಲಾಗಿದೆ.
ಗಾಯಗೊಂಡವರು ಎರ್ಮಾಳು ಬಡಾ ನಿವಾಸಿಗಳಾದ ಪವನ್ ಹಾಗೂ ತಿಲಕ್ ಎಂದು ತಿಳಿದು ಬಂದಿದೆ. ಇವರು ಗೆಳೆಯರೊಂದಿಗೆ ಪಾರ್ಟಿ ಮುಗಿಸಿ ಮರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಬೇರೆ ವಾಹನದಲ್ಲಿದ್ದ ಇವರ ಗೆಳೆಯರು ಇವರನ್ನು ತಕ್ಷಣ ಪಡುಬಿದ್ರಿಯ ಖಾಸಗಿ ಸಿದ್ದಿವಿನಾಯಕ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆಗಾಗಿ ತಂದಿದ್ದು, ಆಸ್ಪತ್ರೆಯ ಮುಂಭಾಗ ಎಲ್ಲೆಡೆ ರಕ್ತ ಚೆಲ್ಲಿ ಭಯಾನಕ ಸನ್ನಿವೇಶ ಸೃಷ್ಠಿಯಾಗಿದೆ. ಗಾಯಾಳುಗಳ ಸ್ಥಿತಿ ಕಂಡು ಪೂರಕ ವ್ಯವಸ್ಥೆ ಇಲ್ಲದ ಕಾರಣ ನಗರದ ಆಸ್ಪತ್ರೆಗೆ ಸಾಗಿಸಲು ಆಸ್ಪತ್ರೆ ಸಿಬ್ಬಂದಿ ಸಲಹೆ ನೀಡಿದ್ದು, ಆಸ್ಪತ್ರೆಯಲ್ಲಿ ಅಂಬುಲೆನ್ಸ್ ಇದ್ದರೂ ಚಾಲಕ ಇಲ್ಲದ್ದರಿಂದ ಆಕ್ರೋಶಕೊಂಡ ಗಾಯಾಳು ಕರೆತಂದ ವ್ಯಕ್ತಿಯೋರ್ವ ಆಸ್ಪತ್ರೆಯ ಮುಂಭಾಗದ ಗಾಜನ್ನು ಕೈಯಿಂದ ಹೊಡೆದು ತಾನೂ ಗಾಯಾಳುವಾಗಿ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತ್ತಾಗಿದ್ದು ವಿಶೇಷ. ಅಪಘಾತ ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದ್ದು, ಆಸ್ಪತ್ರೆಗೆ ಆದ ನಷ್ಟ ಸಹಿತ ತನ್ನ ಚಿಕಿತ್ಸಾ ವೆಚ್ಚವನ್ನು ಗಾಜು ಹೊಡೆದ ಯುವಕನೇ ಬರಿಸಿದ್ದಾನೆ ಎಂಬುದಾಗಿ ವೈಧ್ಯರು ತಿಳಿಸಿದ್ದಾರೆ. ಆಸ್ಪತ್ರೆಗೆ ಪಡುಬಿದ್ರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.