ರಸ್ತೆಯಲ್ಲಿ ಕೂತು ಅಡುಗೆ ಮಾಡಿದ ಶೋಭಾ ಕರಂದ್ಲಾಜೆ ಈಗ ಎಲ್ಲಿ?: ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಪ್ರಶ್ನೆ

ಕುಂದಾಪುರ: ಹಿಂದೆ ನಾವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಗ್ಯಾಸ್ ಬೆಲೆ 414 ರೂ. ಇದ್ದ ಸಂದರ್ಭದಲ್ಲಿ ರಸ್ತೆಯಲ್ಲಿ ಕೂತು ಅಡುಗೆ ಮಾಡಿ ಕಾಂಗ್ರೆಸ್ ಸರ್ಕಾರದ ವಿರುದ್ದ ಪ್ರತಿಭಟಿಸಿದ ಶೋಭಾ ಕರಂದ್ಲಾಜೆಯವರು ಈಗ ಎಲ್ಲಿಗೆ ಹೋಗಿದ್ದಾರೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಪ್ರಶ್ನಿಸಿದ್ದಾರೆ.

ಅವರು ಸೋಮವಾರ ಬೆಳಿಗ್ಗೆ ತ್ರಾಸಿ ಜಿಲ್ಲಾಪಂಚಾಯತ್ ವ್ಯಾಪ್ತಿಯ ತ್ರಾಸಿ ಪೆಟ್ರೋಲ್ ಬಂಕ್ ಬಳಿಯಲ್ಲಿ ಬಿಜೆಪಿ ಸರ್ಕಾರದ ತೈಲ ಬೆಲೆ ಏರಿಕೆಯನ್ನು ವಿರೋಧಿಸಿ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನಡೆದ ಸಾಂಕೇತಿಕ ಪ್ರತಿಭಟನೆಯಲ್ಲಿ ಮಾತನಾಡಿದರು.

ಕೇಂದ್ರದಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲ ಬೆಲೆ ಏರಿಕೆಯಾದರೂ ಕೂಡ ಜನತೆಗೆ ಹೊರೆಯಾಗದಂತೆ ಪೆಟ್ರೋಲ್ ದರವನ್ನು 74ರಿಂದ76 ರೂಪಾಯಿಗೆ ಗ್ರಾಹಕರಿಗೆ ನೀಡಲಾಗುತ್ತಿತ್ತು. ಆದರೆ ಇಂದು ಮೋದಿ ಸರ್ಕಾರ ತೈಲಗಳ ಮೇಲೆ ಹೆಚ್ಚುವರಿಯಾಗಿ ಟ್ಯಾಕ್ಸ್ ಅನ್ನು ಹಾಕುವುದರ ಮೂಲಕ ಪೆಟ್ರೋಲ್ ಡೀಸೆಲ್ ಬೆಲೆಯನ್ನು ಗಗನಕ್ಕೇರಿಸುತ್ತಿದೆ. ನರೇಂದ್ರ ಮೋದಿಯವರ ತಪ್ಪು ಆರ್ಥಿಕ ನೀತಿಗಳಿಂದಾಗಿ ಇಂದು ಜನಸಾಮಾನ್ಯರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಗೋಪಾಲ ಪೂಜಾರಿ ಆರೋಪಿಸಿದರು.

ಪೆಟ್ರೋಲ್ ಮೂಲ ಬೆಲೆ ೩೫ ರೂಪಾಯಿ ಇದೆ. ೬೫ರೂ. ಯಷ್ಟು ಟ್ಯಾಕ್ಸ್ ಹಾಕುವುದರ ಮೂಲಕ ಇಂದು ಪೆಟ್ರೋಲ್ ದರ ಶತಕದ ಗಡಿ ದಾಟಿದೆ. ಸರ್ಕಾರ ಕೂಡಲೇ ತೈಲಗಳ ಮೇಲೆ ಹಾಕಿರುವ ಟ್ಯಾಕ್ಸ್ ಪ್ರಮಾಣವನ್ನು ಶೇಕಡಾ ೫೦ ರಷ್ಟು ಇಳಿಸಿ ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಪೆಟ್ರೋಲ್ ಡಿಸೇಲ್ ಅನ್ನು ನೀಡಬೇಕು. ಕೊರೋನಾ ಸಂಕಷ್ಟದ ಸಮಯದಲ್ಲೂ ವಿದ್ಯುತ್ ದರವನ್ನು ಏರಿಸಲಾಗಿದೆ. ಕೇಂದ್ರ, ರಾಜ್ಯ ಸರ್ಕಾರಗಳಿಗೆ ಬೆಲೆ ಏರಿಸುವುದನ್ನು ಬಿಟ್ಟರೆ ಕಡಿಮೆ ಮಾಡುವ ಆಲೋಚನೆ ಈ ಜನವಿರೋಧಿ ಬಿಜೆಪಿ ಸರ್ಕಾರಕ್ಕಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ತ್ರಾಸಿ ಜಿ.ಪಂ ಉಸ್ತುವಾರಿ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಮುಖಂಡರಾದ ಅನಂತ ಮೂವಾಡಿ, ದೇವು ಗಂಗೊಳ್ಳಿ, ಸತ್ಯನಾರಾಯಣ್ ಶೇರುಗಾರ್, ಸಚ್ಚೀಂದ್ರ ದೇವಾಡಿಗ, ಮಂಜುಳಾ ದೇವಾಡಿಗ, ಶೇಖರ್ ಬಳೆಗಾರ್, ಸಯ್ಯದ್ ಯಾಸೀನ್, ಯುವ ಕಾಂಗ್ರೆಸ್‌ನ ಪ್ರಶಾಂತ್ ಪೂಜಾರಿ, ಎನ್‌ಎಸ್‌ಯುಐನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಯ್ಯದ್ ಫುರ್ಖಾನ್ ಮೊದಲಾದವರು ಇದ್ದರು.

 

Related Posts

Leave a Reply

Your email address will not be published.