ರೈತ ಹೋರಾಟಕ್ಕೆ ಬೆಂಬಲ : ಬಂಟ್ವಾಳದಲ್ಲಿ ಬೃಹತ್ ರ್‍ಯಾಲಿ , ರಸ್ತೆ ತಡೆ

ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್ ಗೆ ಹಾಗೂ ರೈತ ರೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಸೋಮವಾರ ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ ನಲ್ಲಿ ವಿವಿಧ ಸಂಘಟನೆಗಳ ಬೃಹತ್ ಮೆರವಣಿಗೆ ಹಾಗೂ ರಸ್ತೆ ತಡೆ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ರೈತ , ದಲಿತ , ಕಾರ್ಮಿಕ , ಜನಪರ ಚಳುವಳಿಗಳ ಒಕ್ಕೂಟದ ವತಿಯಿಂದ ಭಾರತ್ ಬಂದ್ ಗೆ ಬೆಂಬಲಿಸಿ ಈ ರ್‍ಯಾಲಿ ಹಾಗೂ ರಸ್ತೆ ತಡೆ ನಡೆಸಲಾಯಿತು.

ಪ್ರತಿಭಟನಾ ಸಮಾವೇಶಯಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ಕಿರಣ್ ಪುಣಚ ಅವರು ಮಾತನಾಡಿ, ಕಳೆದ 10 ತಿಂಗಳಿಂದ ದಿಲ್ಲಿಯಲ್ಲಿ ದೇಶದ ರೈತರು ಮೂರು ಕರಾಳ ಕೃಷಿ ಕಾಯ್ದೆಗಳ ವಾಪಾಸಾತಿಗೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆಗೆ ಕೇಂದ್ರ ಸರಕಾರವು ಸ್ಪಂದಿಸುತ್ತಿಲ್ಲ , ಈ ಹಿನ್ನೆಲೆಯಲ್ಲಿ ರೈತರ ಜೊತೆಗೆ ದೇಶದ ಜನತೆ ಇದ್ದಾರೆ ಅನ್ನುವುದುನ್ನು ಸಾಬೀತುಪಡಿಸಲು ಹಾಗೂ ಕೇಂದ್ರ ಸರಕಾರದ ಗಮನ ಸೆಳೆಯಲು ಈ ಪ್ರತಿಭಟನೆಯನ್ನು ಆಯೋಜಿಸಲಾಗಿದೆ ಎಂದರು. ರೈತರ ಬೇಡಿಕೆ ಈಡೇರುವ ತನಕ ದಿಲ್ಲಿಯ ಪ್ರತಿಭಟನೆ ಮುಕ್ತಾಯವಾಗುವುದಿಲ್ಲ ಎಂದು ಎಚ್ಚರಿಸಿದರು.

ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ಯಾದವ ಶೆಟ್ಟಿ ಅವರು, ರೈತರ ಬೆಂಬಲ ಬೆಲೆ ಬೇಡಿಕೆ ಸೇರಿದಂತೆ ನ್ಯಾಯೋಚಿತ ಬೇಡಿಕೆಗಳ ಬಗ್ಗೆ ಕೇಂದ್ರ ಸರಕಾರ ತಪ್ಪು ಮಾಹಿತಿ ನೀಡುತ್ತಾ ರೈತರ ಹೋರಾಟವನ್ನು ದಮನಿಸಲು ಪ್ರಯತ್ನಿಸುತ್ತಿದೆ , ಆದರೆ ಈ ದೇಶದ ರೈತರ ಹೋರಾಟಕ್ಕೆ ಸುಧೀರ್ಘವಾದ ಇತಿಹಾಸ ಇದೆ , ರೈತರ ಹೋರಾಟವನ್ನು ದಮನಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಆರ್. ಎಸ್.ಎಸ್. ಅಂಗ ಸಂಸ್ಥೆಯಾದ ರೈತ ಸಂಘಟನೆ ಕೂಡ ರೈತರ ಪ್ರತಿಭಟನೆಗೆ ಹಾಗೂ ರೈತರ ಬೇಡಿಕೆ ಸ್ಪಂದಿಸಿದೆ ಎಂದು ಹೇಳಿದರು.ಡಿವೈಎಫ್.ಐ ಸಂಘಟನೆಯ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಅವರು ಮಾತನಾಡಿ, ಯುವ ಜನತೆಗೆ ಒಂದು ಕೋಟಿ ಉದ್ಯೋಗ ನೀಡುವ ಭರವಸೆ ನೀಡಿದ ಕೇಂದ್ರ ಸರಕಾರ ಉದ್ಯೋಗವನ್ನು ನೀಡಿಲ್ಲ, ಮಾತ್ರವಲ್ಲದೆ ಈಗ ಉದ್ಯೋಗದಾತ ಸಂಸ್ಥೆಗಳಾಗಿದ್ದ ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಮುಂದಾಗಿದೆ ಎಂದು ಹೇಳಿದರು.
ಸಿ.ಐ.ಟಿ.ಯು ಜಿಲ್ಲಾ ಪ್ರದಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಅವರು ಮಾತನಾಡಿ , ಕರಾಳ ರೈತ ಮಸೂದೆಗಳ ಮೂಲಕ ಕೃಷಿಕರ ದುಡಿಮೆಯ ಗಳಿಕೆಯನ್ನು ಖಾಸಗಿ ಕಾರ್ಪೋರೇಟ್ ಕಂಪೆನಿಗಳ ಪಾಲಿಗೆ ನೀಡಲು ಕೇಂದ್ರ ಸರಕಾರ ಮುಂದಾಗಿದೆ , ಜೊತೆಗೆ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಮೂಲಕ ಕಾರ್ಮಿಕರ ಭವಿಷ್ಯಕ್ಕೂ ಕೊಳ್ಳಿ ಇಟ್ಟಿದೆ ಎಂದು ಆರೋಪಿಸಿದರು.

ದಲಿತ ಸಂಘಟನೆಯ ಮುಖಂಡ ಅಶೋಕ್ ಕೊಂಚಾಡಿ, ಅವರು ಮಾತನಾಡಿ ರೈತರ ಪರವಾಗಿ ಈ ದೇಶದ ದಲಿತರು, ಕಾರ್ಮಿಕರು ಹೋರಾಟಕ್ಕೆ ಮುಂದಾಗಿದ್ದಾರೆ ಎಂದು ಹೇಳಿದರು. ದೇಶದಲ್ಲಿ ದಲಿತರು, ಆದಿವಾಸಿ ಜನರ ಹಕ್ಕುಗಳಗಿ ಸಂಚಕಾರ ಎದುರಾಗಿದೆ ಎಂದರು. ಜನವಾದಿ ಮಹಿಳಾ ಸಂಘಟನೆಯ ನಾಯಕಿ ಭಾರತಿ ಬೋಳಾರ , ಕಾರ್ನಟಕ ರಾಜ್ಯ ರೈತ ಸಂಘದ ರಾಜ್ಯ ಖಾಯಂ ಆಹ್ವಾನಿತ ಸನ್ನಿ ಡಿಸೋಜ, ಜಿಲ್ಲಾ ಉಪಾಧ್ಯಕ್ಷ ಆಲ್ವಿನ್ ಮಿನೇಜಸ್ ಮಾತನಾಡಿದರು.
ರೈತ ಸಂಘದ ಜಿಲ್ಲಾ ಅಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡೀಸ್ ಅವರು ಮಾತನಾಡಿ ಯುಪಿಸಿಎಲ್ ಸಂಸ್ಥೆಯಿಂದ ಕೇರಳಕ್ಕೆ ವಿದ್ಯುತ್ ಪೂರೈಕೆ ಮಾಡಲು ಹಾಕಲಾಗುತ್ತಿರುವ ೪೦೦ ಕೆ.ವಿ, ವಿದ್ಯುತ್ ಲೈನ್‌ಗಳಿಗೆ ರೈತರನ್ನು ಕತ್ತಲಲ್ಲಿಟ್ಟು ಅಮೂಲ್ಯ ಕೃಷಿ ಭೂಮಿಯನ್ನು ಸ್ವಾಧೀನ ಮಾಡಲಾಗುತ್ತಿದೆ ಇದರ ವಿರುದ್ದ ರೈತರ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು. 

ಎಫ್.ಐ.ಟಿ.ಯು. ಸಂಘಟನೆಯ ಮುಖಂಡ ದಿವಾಕರ ರಾವ್ ಕೂಳೂರು , ಜನವಾದಿ ಮಹಿಳಾ ಸಂಘಟನೆಯ ನಾಯಕಿ ಭಾರತಿ , ಬೋಳಾರ , ಕರ್ನಾಟಕ ರಾಜ್ಯ ರೈತ ಸಂಘದ ಖಾಯಂ ಆಹ್ವಾನಿತ ಸದಸ್ಯ ಸನ್ನಿ ಡಿಸೋಜ, ಜಿಲ್ಲಾ ಉಪಾಧ್ಯಕ್ಷ ಆಲ್ವಿನ್ ಮಿನೇಜಸ್ ಮಾತನಾಡಿದರು. ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಬಿ. ರಮಾನಾಥ ರೈ ಅವರು ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿ ರೈತ ಹೋರಾಟಕ್ಕೆ ಕಾಂಗ್ರೆಸ್ ಪಕ್ಷದ ಬೆಂಬಲ ಇದೆ ಎಂದು ಹೇಳಿದರು. ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಪ್ರೇಮನಾಥ್ ಶೆಟ್ಟಿ ಬಾಳ್ತಿಲ ಅವರು ಸ್ವಾಗತಿಸಿದರು, ಜಿಲ್ಲಾ ಅಧ್ಯಕ್ಷ ಓಸ್ವಾಲ್ಡ್ ಫೆರ್ನಾಂಡೀಸ್ ಅವರು ಕಾರ್ಯಕ್ರಮ ನಿರೂಪಿಸಿದರು.


ಸಮಾವೇಶದ ಮೊದಲು ಬಿ.ಸಿ.ರೋಡ್ ಮಿನಿ ವಿಧಾನ ಸೌಧದಿಂದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ತನಕ ಪ್ರತಿಭಟನಾಗಾರರ ಬೃಹತ್ ರ್‍ಯಾಲಿ ನಡೆದು ಬಳಿಕ ಸಾರ್ವಜನಿಕ ಸಭೆ ನಡೆಯಿತು. ಸಮಾವೇಶದ ಬಳಿಕ ಪ್ರತಿಭಟನಗಾರರು ಹತ್ತು ನಿಮಿಷಗಳ ಕಾಲ ಹೆದ್ದಾರಿಯನ್ನು ತಡೆಯುವ ಮೂಲಕ ಭಾರತ್ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದರು.

Related Posts

Leave a Reply

Your email address will not be published.