ಲಸಿಕೆ ಹಂಚಿಕೆಯಲ್ಲಿ ಯಾವುದೇ ಗೊಂದಲವಿಲ್ಲ:ಎಲ್ಲವೂ ಪಾರದರ್ಶಕವಾಗಿದೆ: ಸಚಿವ ಕೋಟ ಸ್ಪಷ್ಟನೆ

ಕುಂದಾಪುರ: ಸರ್ಕಾರ ಹೊರಡಿಸಿರುವ ನಿಯಮಗಳ ಪ್ರಕಾರವಾಗಿಯೇ ಲಸಿಕೆ ಹಂಚಿಕೆಯಾಗುತ್ತಿದೆ. ರಾಜಕೀಯ ಪಕ್ಷವಾಗಿ ಭಾರತೀಯ ಜನತಾ ಪಾರ್ಟಿ ಅಧಿಕಾರದಲ್ಲಿರುವಾಗ ಕೆಲವರಿಗೆ ಬಿಜೆಪಿಯವರು ಲಸಿಕೆ ಕೊಡುತ್ತಿದ್ದಾರೆ ಎಂದು ಅನಿಸಿರಬಹುದು. ಇದರಲ್ಲಿ ಯಾವುದೇ ಗೊಂದಲಗಳಿಲ್ಲ. ಲಸಿಕೆ ಹಂಚಿಕೆ ಪಾರದರ್ಶಕವಾಗಿಯೇ ನಡೆಯುತ್ತಿದೆ ಎಂದು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದರು.

ಮಂಗಳವಾರ ತಲ್ಲೂರು ಗ್ರಾ.ಪಂ ನಲ್ಲಿ ನಡೆದ ಕೋವಿಡ್ ಟಾಸ್ಕ್‌ಫೋರ್ಸ್ ಸಭೆಯ ಬಳಿಕ ಅವರು ಸುದ್ದಿಗಾರರ ಪರಶ್ನೆಗೆ ಉತ್ತರಿಸಿ ಮಾತನಾಡಿದರು. ನಾನು ಭೇಟಿ ಕೊಟ್ಟ ಕಡೆಗಳಲ್ಲೆಲ್ಲಾ ಆರೋಗ್ಯ ಇಲಾಖೆಗೆ ಪಾರದರ್ಶಕವಾಗಿ ಲಸಿಕೆ ಹಂಚಬೇಕು ಎಂದು ಸ್ಪಷ್ಡವಾದ ಮಾತುಗಳನ್ನು ಹೇಳಿದ್ದೇನೆ. ಲಸಿಕೆ ಹಂಚಿಕೆಯಲ್ಲಿ ಯಾವುದೇ ತಪ್ಪುಗಳಾಗಬಾರದು ಎಂದಿದ್ದೇನೆ. ಬಹಳ ಎಚ್ಚರವಾಗಿ ಇದನ್ನು ನಿರ್ವಹಿಸುತ್ತಿದ್ದೇವೆ ಎಂದರು.

ಯಾವ ದೇವಸ್ಥಾನಗಳ ಮೂಲಕ ಯಕ್ಷಗಾನ ಮೇಳಗಳು ನಡೆಯುತ್ತಿದೆಯೊ ಆ ದೇವಸ್ಥಾನಗಳ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಕಲಾವಿದರಿಗೆ ಪೂರ್ಣಾವಧಿಯ ಸಂಬಳ ಕೊಡಲು ಈಗಾಗಲೇ ಆದೇಶ ನೀಡಿದ್ದೇವೆ. ಬೇರೆ ಬೇರೆ ಕಾರಣಗಳಿಂದಾಗಿ ಇದಕ್ಕೆ ತೊಡಕಾಗಿದೆ. ಆದಷ್ಟು ಬೇಗ ಕಲಾವಿದರ ನೆರವಿಗೆ ಸರ್ಕಾರ ಮುಂದಾಗಲಿದೆ. ಬೇರೆ ಬೇರೆ ಕಾರಣಗಳಿಗಾಗಿ ಈ ಮೊದಲೇ ಕಲಾವಿದರ ಬಳಿ ಮಧ್ಯೆ ಯಕ್ಷಗಾನ ನಿಂತರೆ ಸಂಬಳ ಕಡಿತಗೊಳಿಸುವ ಬಗ್ಗೆ ಕರಾರು ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿಗಳಿವೆ. ಅದೇನೆ ಇರಲಿ. ಆ ದೇವಸ್ಥಾನದ ಸಂಪನ್ಮೂಲಗಳಲ್ಲಿ ಶಕ್ತಿ ಇದ್ದರೆ ಅವರಿಗೆ ಪೂರ್ಣ ಪ್ರಮಾಣದಲ್ಲಿ ಸಂಬಳವನ್ನು ನೀಡಲು ಸೂಚನೆ ನೀಡಲಾಗಿದೆ ಎಂದರು.

ಸೌಕೂರು ಏತ ನೀರಾವರಿ ಯೋಜನೆಯಿಂದ ತಲ್ಲೂರು ಗ್ರಾಮವನ್ನು ಕೈಬಿಟ್ಟ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ತಲ್ಲೂರು ಗ್ರಾಮವನ್ನು ಕೈಬಿಟ್ಟ ವಿಚಾರ ಈಗಷ್ಟೇ ನನ್ನ ಗಮನಕ್ಕೆ ಬಂದಿದೆ. ಬೇಸಿಗೆಯಲ್ಲಿ ಉಪ್ಪಿನಕುದ್ರು ಭಾಗದ ಜನರು ನೀರಿಗಾಗಿ ಪಡುತ್ತಿರುವ ಕಷ್ಟವನ್ನು ನನಗೆ ತಿಳಿಸಿದ್ದಾರೆ. ಈ ಬಗ್ಗೆ ಶಾಸಕರು ಹಾಗೂ ಸಂಸದರ ಜೊತೆ ಮಾತನಾಡಿ ತಲ್ಲೂರನ್ನು ಸೇರ್ಪಡೆ ಮಾಡುವ ಬಗ್ಗೆ ಮನವಿ ಮಾಡುತ್ತೇನೆ. ಖಂಡಿತವಾಗಿಯೂ ನನಗೆ ವಿಶ್ವಾಸವಿದೆ ಎಂದರು.

ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗಗಳಿಗೆ ಅದರದ್ದೆ ಆದ ಜವಾಬ್ದಾರಿಗಳಿರುತ್ತದೆ. ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಏನಾದರು ಸಲಹೆಗಳನ್ನು ಕೊಟ್ಟರೆ ಅದನ್ನು ತೆಗೆದುಕೊಳ್ಳಬಾರದು ಅಂತೇನಿಲ್ಲ. ಎಲ್ಲದಕ್ಕಿಂತಲೂ ಹೆಚ್ಚಾಗಿ ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟಿರುವ ಹೇಳಿಕೆ ಪೂರ್ಣಪ್ರಮಾಣದಲ್ಲಿ ಸುದೀರ್ಘವಾಗಿ ರೇಶನ್ ಅನ್ನು ಉಚಿತವಾಗಿ ಕೊಡುತ್ತೇವೆ ಮತ್ತು ೧೮ ವರ್ಷ ಮೇಲ್ಪಟ್ಟವರಿಗೆ ಲಸಿಕೆಯನ್ನು ಯಾವ ರೀತಿ ಪೂರೈಕೆ ಮಾಡುತ್ತೇವೆ ಎಂದಿರುವುದು ಸಾಮಾನ್ಯ ಸಂಗತಿಗಳಲ್ಲ. ಇದು ಇಡೀ ರಾಷ್ಟ್ರದ ಗಮನವನ್ನೇ ಸೆಳೆದಿರುವ ಸಂಗತಿ. ಈ ಕಾರಣಕ್ಕಾಗಿ ನಾವು, ನೀವೆಲ್ಲರೂ ಸೇರಿ ಪ್ರಧಾನಿಯವರಿಗೆ ಅಭಿನಂದನೆಗಳನ್ನು ಹೇಳೋಣ ಎಂದರು.

ಸಚಿವ ಕೋಟ ಜಾಣ್ಮೆಯ ಉತ್ತರ!:
ಯಡಮೊಗೆಯ ಸಾಮಾಜಿಕ ಕಾರ್ಯಕರ್ತ ಉದಯ್ ಗಾಣಿಗ ಕೊಲೆ ಆರೋಪಿಗಳಲ್ಲಿ ಓರ್ವ ಬಿಜೆಪಿಯ ಪ್ರಭಾವಿ ಮುಖಂಡರ ಫ್ಲ್ಯಾಟ್ ಒಂದರಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹಬ್ಬುತ್ತಿರುವ ಸುದ್ದಿಗೆ ಪ್ರತಿಕ್ರಿಯಿಸಿದ ಸಚಿವ ಕೋಟ, ಯಡಮೊಗೆ ಕೊಲೆ ಪ್ರಕರಣದ ಆರೋಪಿಗಳು ಎಲ್ಲಿ ಸಿಕ್ಕಿದ್ದಾರೆ ಎಂದು ನನಗೆ ಗೊತ್ತಿಲ್ಲ. ಮಾಹಿತಿ ಸಿಕ್ಕ ಬಳಿಕ ವಿಚಾರಿಸಿ ಪ್ರತಿಕ್ರಿಯಿಸುವೆ ಎಂದು ಜಾಣ್ಮೆಯ ಉತ್ತರ ನೀಡಿ ಹೊರಟರು.
ಈ ವೇಳೆಯಲ್ಲಿ ಬಿಜೆಪಿ ಮುಖಂಡರಾದ ಬಾಬು ಹೆಗ್ಡೆ, ಸದಾನಂದ ಶೇರುಗಾರ್ ಉಪ್ಪಿನಕುದ್ರು, ಮಹೇಂದ್ರ ಪೂಜಾರಿ ಮೊದಲಾದವರು ಇದ್ದರು.

Related Posts

Leave a Reply

Your email address will not be published.