ಲೋಕಸಭೆಯಲ್ಲಿ ಭದ್ರತಾ ಲೋಪ: ಒಳನುಗ್ಗಿದ ಇಬ್ಬರು ಅಪರಿಚಿತರು
ಬುಧವಾರ ಡಿಸೆಂಬರ್ 13ರಂದು ಲೋಕಸಭೆಯೊಳಕ್ಕೆ ಇಬ್ಬರು ಅಪರಿಚಿತರು ಪ್ರವೇಶ ಪಡೆದಿದ್ದುದು ಸ್ವಲ್ಪ ಕಾಲ ಸಂಸದರು ಕಕ್ಕಾಬಿಕ್ಕಿಯಾಗಿ ಎದ್ದೋಡುವಂತೆ ಮಾಡಿತು. ಆದರೆ ಅವರನ್ನು ಅಲ್ಲೇ ಸೆರೆ ಹಿಡಿಯಲಾಯಿತು. ಅವರು ಗ್ಯಾಲರಿಗೆ ಪಾಸ್ ಪಡೆದು ಅಲ್ಲಿಂದ ಲೋಕಸಭೆಯೊಳಕ್ಕೆ ಇಳಿದಿರುವುದಾಗಿ ತಿಳಿದು ಬಂದಿದೆ.
ಲೋಕ ಸಭೆಯ ಕಲಾಪ ನಡೆಯುತ್ತಿದ್ದಾಗಲೇ ಈ ಇಬ್ಬರು ಅಪರಿಚಿತರು ನುಗ್ಗಿ ಕೂಗಾಡಿದ್ದು ಇಡೀ ಸಂಸತ್ತು ಎದ್ದು ಭಯಭೀತವಾಯಿತು. ಸ್ಪೀಕರ್ ಕೂಡಲೆ ಸ್ಥಾನದಿಂದ ನಿರ್ಗಮಿಸಿದರು. ಅಷ್ಟರಲ್ಲಿ ಭದ್ರತಾ ಪೋಲೀಸರು ಒಳನುಗ್ಗಿ ಅವರನ್ನು ಹಿಡಿದರು. ಆಗಂತುಕರು ಯಾವುದೇ ಶಸ್ತ್ರಾಸ್ತ್ರ ಹಿಡಿದಿರಲಿಲ್ಲವಾದ್ದರಿಂದ ಯಾವುದೇ ಅಪಾಯ ಆಗಿಲ್ಲ. 2001ರಲ್ಲಿ ಸಂಸತ್ತಿನ ಮೇಲೆ ನಡೆದ ಉಗ್ರ ದಾಳಿಯ 22ನೇ ವರುಷ ದಿನದಲ್ಲಿ ಈ ಆಗಂತುಕರ ಪ್ರವೇಶ ಆಗಿದೆ. ಈಗಲೂ ಭದ್ರತಾ ವ್ಯವಸ್ಥೆ ಸರಿಯಾಗಿಲ್ಲ ಎನ್ನುವುದನ್ನು ಇದು ಸ್ಪಷ್ಟಪಡಿಸಿದೆ. ಸಂಸತ್ತಿಗೆ ನುಗ್ಗಿರುವ ಒಬ್ಬ ಸಾಗರ್ ಶರ್ಮಾ , ಸಾಗರ್ ಶರ್ಮಾ ಸಂಸದ ಪ್ರತಾಪ ಸಿಂಹ ಕಚೇರಿಯಿಂದ ಪಾಸ್ ಪಡೆದಿದ್ದ ಎನ್ನಲಾಗಿದೆ. ಇನ್ನೊಬ್ಬ ನುಸುಳುಕೋರ ಮೈಸೂರು ಮೂಲದ ಮನೋರಂಜನ್ ಎಂಬ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.