ವಾರದ ಸಂತೆ ನಡೆಸಲಾಗದೆ ನಗರಸಭೆಯ ಆದಾಯಕ್ಕೆ ಹೊಡೆತ: ಹಣ ಮರಳಿ ನೀಡುವಂತೆ ಬಿಡ್ದಾರರ ಮನವಿ
ಕೋವಿಡ್ ಹಿನ್ನೆಲೆಯಲ್ಲಿ ವಾರದ ಸಂತೆ ನಡೆಸಲಾರದೆ ಪುತ್ತೂರು ನಗರಸಭೆ ಆದಾಯಕ್ಕೆ ಕುತ್ತು ಬರುವ ಸ್ಥಿತಿ ನಿರ್ಮಾಣವಾಗಿದ್ದು, ಸಂತೆ ವರಿ ವಸೂಲಿಟೆಂಡರ್ ಪಡೆದುಕೊಂಡ ಬಿಡ್ದಾರರು ತಾವು ಕಟ್ಟಿದ ಹಣವನ್ನು ಮರಳಿ ನೀಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಬಿಡ್ದಾರರನ್ನು ಕರೆಸಿ ಮಾತುಕತ ನಡೆಸಿ ಮುಂದಿನ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಬಗ್ಗೆ ಪುತ್ತೂರು ನಗರಸಭೆಯ ವಿಶೇಷ ಸಾಮಾನ್ಯ ಸಭೆ ನಿರ್ಣಯಿಸಿದೆ.ಅಧ್ಯಕ್ಷರಾದ ಜೀವಂಧರ ಜೈನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಅಂಶ ಚರ್ಚೆಗೊಳಗಾಯಿತು.
ಕಿಲ್ಲೆ ಮೈದಾನದಲ್ಲಿ ನಡೆಯುತ್ತಿರುವ ವಾರದ ಸಂತೆಯನ್ನು ಕೋವಿಡ್ ಕಾರಣದಿಂದಾಗಿ ನಡೆಸಿಲ್ಲ. 2021-2022ನೇ ಸಾಲಿನ ವಾರದ ಸಂತೆಯನ್ನು ಆರ್ಥಿಕ ವರ್ಷಾರಂಭದಲ್ಲಿ ಏಲಂ ಮಾಡಲಾಗಿದ್ದು, ಅಬೂಬಕ್ಕರ್ ಸಿದ್ದಿಕ್ ಎಂಬವರು ವಿಜಯೀ ಬಿಡ್ದಾರರಾಗಿ ಟೆಂಡರ್ ವಹಿಸಿಕೊಂಡಿದ್ದಾರೆ. ಒಟ್ಟು ಬಿಡ್ ಮೊತ್ತದಲ್ಲಿ ಶೇ. 25ನ್ನು (1,81,೦೦೦) ಅವರು ನಗರಸಭೆಗೆ ಪಾವತಿ ಮಾಡಿದ್ದಾರೆ. ಆದರೆ ಈ ಆರ್ಥಿಕ ವರ್ಷದಲ್ಲಿ 2 ಸೋಮವಾರ ಮಾತ್ರ ವಾರದ ಸಂತೆ ನಡೆಸಲು ಸಾಧ್ಯವಾಗಿದೆ. ಈ 2 ವಾರದ ಮೊತ್ತವನ್ನು ಕಡಿತಗೊಳಿಸಿ ಉಳಿದ ಮೊತ್ತವನ್ನು ತನಗೆ ಮರಳಿ ನೀಡಬೇಕೆಂದು ಸಿದ್ದಿಕ್ ನಗರಸಭೆಗೆ ಮನವಿ ಮಾಡಿದ್ದಾರೆ ಎಂದು ಸಭೆಗೆ ತಿಳಿಸಲಾಯಿತು.
ಸೋಮವಾರ ನಗರದ ಕೋರ್ಟ್ ರಸ್ತೆಯಲ್ಲಿ ಬೀದಿ ವ್ಯಾಪಾರ ಮಾಡುವವರನ್ನು ಕಿಲ್ಲೆ ಮೈದಾನದಲ್ಲಿ ಕೂರಿಸಿ ವ್ಯಾಪಾರ ಮಾಡಿಸುವುದು ಉತ್ತಮ ಎಂದು ಸದಸ್ಯ ಭಾಮಿ ಅಶೋಕ್ ಶೆಣೈ ಅಭಿಪ್ರಾಯ ಮಂಡಿಸಿದರು. ಈ ಬಗ್ಗೆ ವಿಜಯೀ ಬಿಡ್ದಾರರನ್ನು ಕರೆಸಿ ಅವರ ಜತೆ ಸಮಾಲೋಚನೆ ನಡೆಸುವುದು, ವಾರದ ಸಂತೆ ನಡೆಸುವ ವಿಚಾರದಲ್ಲಿ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ನಡೆದುಕೊಳ್ಳುವುದು ಎಂದು ಸಭೆ ನಿರ್ಧರಿಸಿತು.
ಹೂವಿನ ಮಾರುಕಟ್ಟೆ, ಹಸಿ ಮೀನಿನ ಮಾರುಕಟ್ಟೆ, ಒಣ ಮೀನು ಮಾರುಕಟ್ಟೆ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸಮೀಪದ ಲಘು ವಾಹನ ತಂಗುದಾಣ, ಏಳ್ಮುಡಿಯಲ್ಲಿರುವ ಲಘು ವಾಹನ ತಂಗುದಾಣದ ವಿಜಯೀ ಬಿಡ್ದಾರರು ಕೂಡ ನಗರಸಭೆಗೆ ಬಿಡ್ನ ಆಂಶಿಕ ಮೊತ್ತವನ್ನು ಪಾವತಿಸಿದ್ದಾರೆ. ಲಾಕ್ಡೌನ್ ಸಂದರ್ಭ ಸುದೀರ್ಘ ಕಾಲ ವ್ಯಾಪಾರ ನಡೆಸಲಾಗಿಲ್ಲದ ಕಾರಣ ಉಳಿಕೆ ಮೊತ್ತ ಪಾವತಿಗೆ ಸಮಯಾವಕಾಶ ಕೋರಿದ್ದು, ಸಭೆ ಅನುಮೋದನೆ ನೀಡಿತು.
ನಗರಸಭೆ ಉಪಾಧ್ಯಕ್ಷೆ ವಿದ್ಯಾ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು ಉಪಸ್ಥಿತರಿದ್ದರು. ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡರು. ಅಧಿಕಾರಿಗಳು ಪೂರಕ ಮಾಹಿತಿ ನೀಡಿದರು.