ವಿಟ್ಲ ಪ.ಪಂ. ವ್ಯಾಪ್ತಿಯಲ್ಲಿ ವೀಕೆಂಡ್ ಸಂಪೂರ್ಣ ಬಂದ್
ವಿಟ್ಲ: ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಶನಿವಾರ ಮತ್ತು ಭಾನುವಾರ ವಿಟ್ಲ ಪೇಟೆ ಸೇರಿದಂತೆ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿ ಸಂಪೂರ್ಣ ಲಾಕ್ ಡೌನ್ ಮಾಡುವುದಾಗಿ ವಿಟ್ಲ ಪಟ್ಟಣ ಪಂಚಾಯಿತಿ ನಿರ್ಣಯ ಕೈಗೊಂಡಿದೆ.
ಈ ಬಗ್ಗೆ ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ ಟಾಸ್ಕ್ ಪೋರ್ಸ್ ತುರ್ತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ವಾರದ ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್ ಮಾಡಲಾಗುವುದು. ಹಾಲು ಅಂಗಡಿ ಬೆಳಿಗ್ಗೆ 9 ಗಂಟೆ ವರೆಗೆ ಮಾತ್ರ ತೆರೆಯಲು ಅವಕಾಶ ನೀಡಲಾಗಿದ್ದು, ಹಾಲಿನ ನೆಪದಲ್ಲಿ ಬೇಕರಿ ತೆರೆಯಬಾರದು ಎಂದು ತೀರ್ಮಾನಿಸಲಾಗಿದೆ. ಮೆಡಿಕಲ್ ತೆರೆಯಲು ಅವಕಾಶ ನೀಡಲಾಗಿದೆ.
ವಿಟ್ಲದ ಸುರುಳಿಮೂಲೆ ಭಾಗದಲ್ಲಿ ಹೆಚ್ಚು ಪ್ರಕರಣ ಪತ್ತೆಯಾಗಿದ್ದು, ಒಂದೇ ಮನೆಯಲ್ಲಿ 9 ಮಂದಿಗೆ ಪಾಸಿಟಿವ್ ಪತ್ತೆಯಾಗಿದೆ. ಸೋಂಕಿತರನ್ನು ಕೋವಿಡ್ ಸೆಂಟರ್ ಗೆ ಬರುವಂತೆ ವಿನಂತಿಸಲಾಗುವುದು. ಅವರು ಒಪ್ಪದಿದ್ದರೆ ಕಾಲೋನಿಯನ್ನು ಸೀಲ್ ಡೌನ್ ಮಾಡಲಾಗುವುದು.ವಿಟ್ಲ ಪೇಟೆಯಲ್ಲಿ ಅನಗತ್ಯವಾಗಿ ಜನರ ತಿರುಗಾಟ ನಡರಸುತ್ತಿರುವುದನ್ನು ನಿಯಂತ್ರಿಸಲು ವಾರದ ಪ್ರತಿದಿನ ವಿಟ್ಲ ನಾಲ್ಕು ರಸ್ತೆಗಳಲ್ಲಿ ಬಿಗೀ ಪೊಲೀಸ್ ತಪಾಸಣೆ ನಡೆಸಲಾಗುತ್ತದೆ. ಅನಗತ್ಯವಾಗಿ ತಿರುಗಾಟ ನಡೆಸಿದವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ.
ನಾಳೆಯಿಂದ(ಗುರುವಾರ) ಬೊಬ್ಬೆಕೇರಿ, ಮೇಗಿನಪೇಟೆ, ಬಾಕಿಮಾರ್, ನಾಡಕಚೇರಿ ಈ ನಾಲ್ಕು ಸ್ಥಳದಲ್ಲಿ ಪೊಲೀಸರು, ಆರೋಗ್ಯಾಧಿಕಾರಿ ಗಳು ಇದ್ದು ವಿಟ್ಲ ಪೇಟೆಗೆ ಆಗಮಿಸುವ ವ್ಯಕ್ತಿಗಳು ನೆಗೆಟಿವ್ ರಿಪೋರ್ಟ್ ತೋರಿಸಬೇಕು. ನೆಗೆಟಿವ್ ರಿಪೋರ್ಟ್ ಇಲ್ಲದವರಿಗೆ ಸ್ಥಳದಲ್ಲೇ ಕೋವಿಡ್ ಟೆಸ್ಟ್ ಮಾಡಿಸಿ ಕಳುಹಿಸಲಾಗುವುದು ಎಂದು ನಿರ್ಣಯ ಕೈಗೊಳ್ಳಲಾಯಿತು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಉಷಾ ಕೃಷ್ಣಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ಕಲ್ಲಕಟ್ಟ, ಸದಸ್ಯರಾದ ಅರುಣ್ ಎಂ ವಿಟ್ಲ, ಹಿರಿಯ ಸದಸ್ಯ ಅಶೋಕ್ ಕುಮಾರ್ ಶೆಟ್ಟಿ, ರಾಮ್ ದಾಸ್ ಶೆಣೈ, ಜಯಂತ ನಾಯ್ಕ, ಹಸೈನಾರ್ ನೆಲ್ಲಿಗುಡ್ಡೆ, ಲೋಕನಾಥ ಶೆಟ್ಟಿ, ದಮಯಂತಿ, ಲತಾ ಅಶೋಕ್, ಅಬೂಬಕ್ಕರ್, ಸುನೀತಾ ಕೋಟ್ಯಾನ್, ಮುಖ್ಯಾಧಿಕಾರಿ ಮಾಲಿನಿ, ವಿಟ್ಲ ಪೊಲೀಸ್ ಠಾಣೆಯ ಎಎಸೈ ಕರುಣಾಕರ್, ಆರೋಗ್ಯ ಇಲಾಖೆಯ ಕುಸುಮ, ಗ್ರಾಮ ಕರಣಿಕ ಪ್ರಕಾಶ್, ಸಿಬ್ಬಂದಿ ಚಂದ್ರಶೇಖರ ವರ್ಮ ಉಪಸ್ಥಿತರಿದ್ದರು.