ವಿದೇಶಿ ಹಣ್ಣಿನ ಮೊರೆ ಹೋದ ಕರಾವಳಿಯ ಕೃಷಿಕರು
ಕರಾವಳಿ ಭಾಗದ ಕೃಷಿಕರ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಯ ಭವಿಷ್ಯದ ಬಗ್ಗೆ ಚರ್ಚೆಗಳು ಆರಂಭಗೊಂಡಿದೆ. ಮುಂದಿನ ದಿನಗಳಲ್ಲಿ ಅಡಿಕೆಗೆ ಮಾರುಕಟ್ಟೆ ಇರುವ ಸಂಶಯವೂ ಕೆಲವು ಕೃಷಿಕರಲ್ಲಿ ಮೂಡಲಾರಂಭಿಸಿದೆ. ಈ ಕಾರಣಕ್ಕಾಗಿ ಅಡಿಕೆಗೆ ಪರ್ಯಾಯ ಬೆಳೆಯ ಹುಡುಕಾಟದಲ್ಲಿ ಕರಾವಳಿಯ ಕೆಲ ಕೃಷಿಕರಿದ್ದು, ಇಂಥ ಕೃಷಿಕರು ಇದೀಗ ವಿದೇಶೀ ಹಣ್ಣಿನ ಮೊರೆ ಹೋಗಿದ್ದಾರೆ. ಈಗಾಗಲೇ ಈ ಹಣ್ಣಿನ ಬೆಳೆಯನ್ನೂ ಆರಂಭಿಸಿರುವ ಈ ಕೃಷಿಕರಿಗೆ ಭರ್ಜರಿ ಇಳುವರಿಯ ಜೊತೆಗೆ ಉತ್ತಮ ಆದಾಯವೂ ಬಂದಿದೆ.
ಅಡಿಕೆ ಕೃಷಿ ಕರಾವಳಿ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾಗಿ ಗುರುತಿಸಿಕೊಂಡಿದ್ದು, ಇಲ್ಲಿನ ಶೇಕಡಾ 80 ರಷ್ಟು ಕೃಷಿಕರು ಅಡಿಕೆಯನ್ನು ಬೆಳೆಯುತ್ತಿದ್ದಾರೆ. ಉಡುಪಿ, ದಕ್ಷಿಣಕನ್ನಡ, ಕಾಸರಗೋಡು ಭಾಗದಲ್ಲಿ ಅಡಿಕೆಯನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಉಳಿದಂತೆ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಭಾಗದಲ್ಲಿ ಕೊಂಚ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಆದರೆ ಯಾವಾಗ ಕೇಂದ್ರ ಆರೋಗ್ಯ ಇಲಾಖೆ ಅಡಿಕೆಯನ್ನು ಆಹಾರ ಪದಾರ್ಥವಾಗಿ ಬಳಸುವುದು ಆರೋಗ್ಯಕ್ಕೆ ಹಾನಿಕಾರಕ ಎನ್ನುವ ವರದಿಯನ್ನು ನೀಡಿತೋ, ಅಂದಿನಿಂದ ಅಡಿಕೆ ಕೃಷಿಕರಲ್ಲಿ ಅಡಿಕೆಯ ಭವಿಷ್ಯದ ಬಗ್ಗೆ ಗೊಂದಲಗಳು ಮೂಡಲಾರಂಭಿಸಿದೆ. ಈ ಗೊಂದಲಗಳ ನಡುವೆ ಅಡಿಕೆ ಬೆಳೆಗಾರ ಕೃಷಿಯಲ್ಲಿ ವಿವಿಧ ಪ್ರಯೋಗಗಳಿಗೆ ಹೊಂದಿಕೊಳ್ಳದೆ, ಸಮೂಹಸನ್ನಿಯಂತೇ ಒಂದೇ ಕೃಷಿಯತ್ತ ಇಂದಿನವರೆಗೂ ವಾಲಿಕೊಂಡಿದ್ದಾರೆ. ಒಂದು ಸಂದರ್ಭದಲ್ಲಿ ರಬ್ಬರ್ ಕೃಷಿಗೆ ಉತ್ತಮ ಧಾರಣೆ ಇದೆ ಎನ್ನುವ ಕಾರಣಕ್ಕೆ ಇದ್ದ ಅಡಿಕೆ ತೋಟವನ್ನೆಲ್ಲಾ ರಬ್ಬರ್ ತೋಟವನ್ನಾಗಿ ಪರಿವರ್ತಿಸಿರುವ ಕರಾವಳಿಯ ಕೃಷಿಕ ಇದೀಗ ರಬ್ಬರ್ ನಲ್ಲಿ ನಷ್ಟ ಉಂಟಾಗುತ್ತಿದ್ದಂತೆ ಮತ್ತೆ ಅಡಿಕೆ ಕೃಷಿಗೆ ವಾಲಿದ್ದಾನೆ. ಅಡಿಕೆಯ ಕೃಷಿಗೆ ಹಲವು ಸಮಸ್ಯೆಗಳೂ ಎದುರಾಗುತ್ತಿರುವ ಕಾರಣಕ್ಕಾಗಿ ಅಡಿಕೆ ಫಸಲಿನಲ್ಲೂ ಇಳಿಮುಖವಾಗಲಾರಂಭಿಸಿದೆ. ಈ ನಡುವೆ ಅಡಿಕೆಯ ಭವಿಷ್ಯದ ಬಗ್ಗೆಯೂ ಕೃಷಿಕನಲ್ಲಿ ಗೊಂದಲ ಹೆಚ್ಚಾಗುತ್ತಿದ್ದು, ಇದೀಗ ಕರಾವಳಿಯ ಕೆಲವು ಕೃಷಿಕರು ಪರ್ಯಾಯ ಬೆಳೆಯತ್ತ ಮುಖ ಮಾಡಲು ಸಜ್ಜಾಗಿದ್ದಾರೆ. ಇಂಥಹ ಕೆಲವು ಕೃಷಿಕರಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪ್ರಗತಿಪರ ಕೃಷಿಕ ಕೃಷ್ಣ ಶೆಟ್ಟಿ ಕೂಡಾ ಒಬ್ಬರಾಗಿದ್ದಾರೆ. ಒಂದೇ ಕೃಷಿಯನ್ನು ನೆಚ್ಚಿಕೊಂಡಲ್ಲಿ ಕೃಷಿ ಚಟುವಟಿಕೆ ಮುಂದುವರಿಸುವುದು ಕಷ್ಟ ಎನ್ನುವುದನ್ನು ಮನಗಂಡ ಕೃಷ್ಣ ಶೆಟ್ಟಿ ರಂಬೂಟಾನ್ ಹಣ್ಣಿನ ಬೆಳೆಯಲು ತೀರ್ಮಾನಿಸಿದ್ದಾರೆ. ಕಳೆದ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ರಂಬೂಟಾನ್ ನ 500 ಸಸಿಗಳನ್ನು ನೆಟ್ಟಿದ್ದ ಕೃಷ್ಣ ಶೆಟ್ಟಿಯವರ ತೋಟದಲ್ಲಿ ಎರಡನೇ ಲಾಕ್ ಡೌನ್ ನ ಈ ಸಂದರ್ಭದಲ್ಲಿ ಬರಪೂರ ಫಸಲು ಬಂದಿದೆ. ಸಸಿ ನೆಟ್ಟು ಕೇವಲ ಒಂದೂವರೆ ವರ್ಷದಲ್ಲಿ 7 ಟನ್ ರಂಬೂಟಾನ್ ಬೆಳೆ ಪಡೆದಿರುವ ಕೃಷ್ಣ ಶೆಟ್ಟಿಯವರು ಈ ಬಾರಿ ಸುಮಾರು 8 ರಿಂದ 10 ಟನ್ ರಂಬೂಟಾನ್ ಬೆಳೆ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
ಅಡಿಕೆ ಹಾಗೂ ರಂಬೂಟಾನ್ ಬೆಳೆಗೆ ಹೋಲಿಸಿದಲ್ಲಿ ಅಜಗಜಾಂತರ ವೆತ್ಯಾಸವಿದ್ದು, ಅಡಿಕೆಯಿಂದ ನಾಲ್ಕು ವರ್ಷ ಪಡೆಯುವ ಆದಾಯವನ್ನು ಕೇವಲ ರಂಬೂಟಾನ್ ನಿಂದ ಕೇವಲ ಒಂದೇ ವರ್ಷದಲ್ಲಿ ಪಡೆಯಬಹುದು ಎನ್ನುವುದು ಕೃಷ್ಣ ಶೆಟ್ಟರ ಸ್ವ ಅನುಭವದ ಮಾತಾಗಿದೆ. ಅಲ್ಲದೆ ಈ ಗಿಡಗಳ ಪಾಲನೆಗೆ ವರ್ಷಕ್ಕೆ ಕೇವಲ 15 ಸಾವಿರ ರೂಪಾಯಿಗಳನ್ನಷ್ಟೇ ವ್ಯಯಿಸಿರುವ ಕೃಷ್ಣ ಶೆಟ್ಟರು ರಂಬೂಟಾನ್ ಅನ್ನು ಕಿಲೋವೊಂದಕ್ಕೆ 200 ರಿಂದ 250 ರ ದರದಲ್ಲಿ ಮಾರಾಟ ಮಾಡಿದ್ದಾರೆ. ಅಲ್ಲದೆ ಕೃಷ್ಣ ಶೆಟ್ಟರ ಸ್ನೇಹಿತರ ತಂಡವೂ ಇದೇ ಬೆಳೆಯಲ್ಲಿ ತೊಡಗಿಸಿಕೊಂಡಿದ್ದು, ರಂಬೂಟಾನ್ ಅನ್ನು ಕರಾವಳಿ ಮಾರುಕಟ್ಟೆಯಲ್ಲಿ ಕೈಗೆಟಕುವ ದರದಲ್ಲಿ ವಿತರಿಸುವ ಯೋಜನೆಯನ್ನೂ ರೂಪಿಸಿದ್ದಾರೆ. ರಂಬೂಟಾನ್ ಬೆಳೆಯಲ್ಲಿ ಕೃಷ್ಣ ಶೆಟ್ಟರ ಈ ಸಾಧನೆ ಜಿಲ್ಲೆಯ ಹಲವು ಕೃಷಿಕರನ್ನು ಈ ಬೆಳೆಯತ್ತ ಗಮನಹರಿಸುವಂತೆ ಪ್ರೇರೇಪಿಸಿದೆ.
ಅಡಿಕೆ ಬೆಳೆಯೊಂದನ್ನೇ ನೆಚ್ಚಿಕೊಂಡಿರುವ ಕರಾವಳಿ ಕೃಷಿಕರು ಮುಂದಿನ ದಿನಗಳಲ್ಲಿ ಆಹಾರ ಬೆಳೆಯತ್ತ ಮುಖ ಮಾಡದೇ ಹೋದಲ್ಲಿ ನಷ್ಟ ಅನುಭವಿಸುತ್ತಾರೆ ಎನ್ನುವ ಅಭಿಪ್ರಾಯಗಳೂ ಕೇಳಿ ಬರಲಾರಂಭಿಸಿದೆ. ಕರಾವಳಿಯ ಹವಾಗುಣಕ್ಕೆ ಹೊಂದಿಕೊಳ್ಳುವ ರಂಬೂಟಾನ್ ನಂತಹ ಹಣ್ಣಿನ ಬೆಳೆಯತ್ತ ಕೃಷಿಕರು ಗಮನಹರಿಸಿದ್ದಲ್ಲಿ ಉತ್ತಮ ಆದಾಯದ ನಿರೀಕ್ಷೆ ಮಾಡಬಹುದಾಗಿದೆ.