ವೀಕೆಂಡ್ ಕರ್ಫ್ಯೂಗೆ ಕಟ್ಟುನಿಟ್ಟಿನ ಕ್ರಮ: ಎಸಿಪಿ ಮಹೇಶ್ ಕುಮಾರ್
ಸರಕಾರದ ಆದೇಶದಂತೆ ದಕ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಕಟ್ಟುನಿಟ್ಟಾಗಿ ಪಾಲಿಸುವ ಕುರಿತಾಗಿ ಪೋಲಿಸರಿಗೆ ಮುಂಜಾಗ್ರತಾ ನಿಯಮಗಳ ಕುರಿತಾಗಿ ಪಣಂಬೂರು ಉಪವಿಭಾಗ ಮಟ್ಟದ ಪೋಲೀಸರಿಗೆ ಮಾಹಿತಿ ಕಾರ್ಯಕ್ರಮವು ಬೈಕಂಪಾಡಿ ಎಪಿ ಎಮ್ ಸಿ ಸಂಕೀರ್ಣ ಕಟ್ಟಡದ ಬಳಿ ಜರುಗಿತು.
ಪಣಂಬೂರು ಸಹಾಯಕ ಪೋಲೀಸ್ ಆಯುಕ್ತ ಎಸ್ ಮಹೇಶ್ ಕುಮಾರ್ ಅವರು ಮಾತನಾಡಿ, ಸರಕಾರದ ಹಾಗೂ ದಕ ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ ಶುಕ್ರವಾರ ಸಂಜೆ ೭ ರಿಂದ ಕಟ್ಟುನಿಟ್ಟಿನ ಕ್ರಮ ಪಾಲಿಸಲು ಆದೇಶ ನೀಡಲಾಗಿದೆ. ಪ್ರತಿ ಠಾಣಾ ವ್ಯಾಪ್ತಿಯಲ್ಲೂ ಸಬ್ ಇನ್ಸ್ ಪೆಕ್ಟರ್ ಒಳಗೊಂಡ ಸುಮಾರು 15 ಪೋಲಿಸರ ತಂಡವು ಪ್ರತಿ ವಾಹನ ಚೆಕ್ ಪಾಯಿ೦ಟ್ ನಲ್ಲಿ ಕಾರ್ಯಾಚರಿಸಲಿದ್ದಾರೆ. ಅಲ್ಲದೇ ಎಲ್ಲೂ ಕೂಡಾ ವಾಹನದ ಸವಾರರು ಸೂಕ್ತ ಮಾಹಿತಿ ನೀಡದಿದ್ದರೆ ಅಂತವರ ವಾಹನವನ್ನು ಸೀಝ್ ಮಾಡಲು ಆದೇಶಿಸಲಾಗಿದೆ. ಅಲ್ಲದೇ ಯಾವುದೇ ಅಂಗಡಿ ಮುಗ್ಗಟ್ಟುಗಳನ್ನು ತೆರೆದಿದ್ದರೆ ಅಂತವರಿಗೆ ದಂಡ ಇಲ್ಲವೇ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಸರಕಾರದ ಆದೇಶದಂತೆ ಯಾವುದೆಲ್ಲಾ ಕಾರ್ಯರಂಭಿಸಲು ವಿನಾಯಿತಿ ನೀಡಲಾಗಿದೆಯೋ ಅದನ್ನು ಬಿಟ್ಟು ಇತರ ಕಾರ್ಯಗಳಿಗೆ ವಾಹನವನ್ನು ಬಳಸಿದರೆ ಅಂತಹ ವಾಹನವನ್ನು ಜಪ್ತಿ ಮಾಡಲಾಗುವುದು. ಶುಕ್ರವಾರ ಸಂಜೆಯಿಂದ ಸೋಮವಾರ ಬೆಳಗ್ಗಿನವರೆಗೆ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ವಾಹನ ಸಂಚರಿಸುವ ಚೆಕ್ ಪಾಯಿ೦ಟ್ ನಲ್ಲೂ ಪೋಲೀಸರ ಬಿಗಿ ಬಂದೋಬಸ್ತ್ ಗೊಳಿಸಲಾಗಿದೆ. ಅಲ್ಲದೇ ಈ ಬಗ್ಗೆ ಎಲ್ಲಾ ಠಾಣಾ ವ್ಯಾಪ್ತಿಯ ಪೋಲೀಸ್ ಸಿಬ್ಬಂದಿಗಳಿಗೂ ಮಾಹಿತಿಯನ್ನು ನೀಡಿದ್ದೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸುರತ್ಕಲ್ ಪೋಲೀಸ್ ಠಾಣಾಧಿಕಾರಿ ಕೆ. ಚಂದ್ರಪ್ಪ, ಪಣಂಬೂರು ಪೋಲೀಸ್ ಠಾಣಾಧಿಕಾರಿ ಅಜ್ಮತ್ ಅಲಿ, ಬಜ್ಪೆ ಪೋಲೀಸ್ ಠಾಣಾಧಿಕಾರಿ ಸಂದೇಶ್ ಪಿಜಿ, ಮುಲ್ಕಿ ಪೋಲೀಸ್ ಠಾಣಾಧಿಕಾರಿ ವಿನಾಯಕ್ ತೋರಗಲ್, ಕಾನೂನು ಸುವ್ಯವಸ್ಥೆ ವಿಭಾಗದ ಎಸ್ ಐ ಪುನೀತ್ ಗಾವ್ಂಕರ್, ಮಂಗಳೂರು ಉತ್ತರ ಸಂಚಾರಿ ಪೋಲೀಸ್ ಠಾಣಾ ಕೆ. ಎಸ್ ಶರೀಫ್, ಕಾವೂರು ಪಿಎಸ್ ಐ ಪ್ರತಿಭಾ ಹಾಗೂ ಸುರತ್ಕಲ್, ಪಣಂಬೂರು, ಮುಲ್ಕಿ, ಬಜ್ಪೆ ಪೋಲೀಸ್ ಠಾಣಾ ಸಿಬ್ಬಂದಿಗಳು ಉಪಸ್ಥಿತರಿದ್ದರು.