ವ್ಯಾಕ್ಸಿನ್ ಕೇಂದ್ರಗಳಲ್ಲಿ ನಿಯಮ ಉಲ್ಲಂಘನೆಯಾಗಲ್ಲ: ಉಡುಪಿ ಡಿಸಿ ಜಿ. ಜಗದೀಶ್

ಕುಂದಾಪುರ: ತಾಲೂಕಿನಲ್ಲಿರುವ ವ್ಯಾಕ್ಸಿನ್ ಕೇಂದ್ರಗಳಲ್ಲಿ ಕೆಲ ಗೊಂದಲಗಳಾಗುತ್ತಿರುವ ಬಗ್ಗೆ ದೂರುಗಳು ಬಂದಿದ್ದು ಯಾರಿಂದಲೂ ನಿಯಮ ಉಲ್ಲಂಘನೆಯಾಗದಂತೆ ಕುಂದಾಪುರ, ಕಾರ್ಕಳ ಹಾಗೂ ಮಲ್ಪೆಯ ವ್ಯಾಕ್ಸಿನ್ ಕೇಂದ್ರಗಳಿಗೆ ನೋಡಲ್ ಅಧಿಕಾರಿ ನೇಮಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.

ಕುಂದಾಪುರದ ಬೋರ್ಡ್ ಹೈಸ್ಕೂಲಿನಲ್ಲಿರುವ ವ್ಯಾಕ್ಸಿನ್ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಧ್ಯಮಗಳ ಜೊತೆ ಮಾತನಾಡಿದರು.ವ್ಯಾಕ್ಸಿನ್ ಕೇಂದ್ರದ ಬಗ್ಗೆ ದೂರುಗಳು ಬಂದ ಹಿನ್ನೆಲೆ ಭೇಟಿ ನೀಡಿದ್ದು ವ್ಯಾಕ್ಸಿನ್ ಪಡೆಯುವರನ್ನು ಹೊರತುಪಡಿಸಿ ಇತರರು ವ್ಯಾಕ್ಸಿನ್ ಕೇಂದ್ರಕ್ಕೆ ಬಂದು ಗೊಂದಲ ಮೂಡಿಸುತ್ತಿದ್ದಾರೆಂಬ ಆರೋಪವಿದ್ದು ವೈದ್ಯರಿಗೆ ಉಸ್ತುವಾರಿ ನೀಡಿದರೆ ಒತ್ತಡ ಹೆಚ್ಚುವ ಕಾರಣ ಅಧಿಕಾರಿಗಳನ್ನು ನೇಮಿಸಲಾಗಿದೆ. ಅರ್ಹ ವ್ಯಕ್ತಿಗಳಿಗೆ ಮಾತ್ರವೇ ವ್ಯಾಕ್ಸಿನ್ ಸಿಗಬೇಕು. ಒಂದು ಡೋಸ್ ವ್ಯಾಕ್ಸಿನ್ ಅನರ್ಹರಿಗೆ ಸಿಗಬಾರದೆಂಬುದು ಜಿಲ್ಲಾಡಳಿತ ಉದ್ದೇಶವಾಗಿದೆ. ಸರಕಾರದ ನಿಯಮಗಳನ್ನು ಮೀರಲು ಯಾರಿಗೂ ಬಿಡೋದಿಲ್ಲ ಎಂದರು.
ಸದ್ಯ ಗ್ರಾಮಪಂಚಾಯತಿಗಳು ಸೀಲ್ ಡೌನ್ ಮಾಡಿದ್ದು ಪರಿಣಾಮಕಾರಿಯಾಗಿದೆ. ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು, ಅಧಿಕಾರಿಗಳ ಮುತುವರ್ಜಿಯಲ್ಲಿ ಸಾರ್ವಜನಿಕರು ಉತ್ತಮವಾಗಿ ಸ್ಪಂದಿಸಿದ್ದಾರೆ. ಅಲ್ಲಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಇಳಿಕೆಯಾಗುತ್ತಿದೆ. ಜೂ.7 ರಂದು ಮಾಮೂಲಿಯಂತೆ ಬೆಳಿಗ್ಗೆ 6 ರಿಂದ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡುತ್ತೇವೆ. ಮತ್ತೆ ಶಾಸಕರು ಸಂಸದರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಯಾವ ಪಂಚಾಯತಿಗಳಲ್ಲಿ, ಪುರಸಭೆಯ ಯಾವಯಾವ ವಾರ್ಡುಗಳಲ್ಲಿ ಕೊರೋನಾ ಹೆಚ್ಚಿದೆ ಎಂದು ಚರ್ಚಿಸಿ ಸೀಲ್ ಡೌನ್ ಬಗ್ಗೆ ತೀರ್ಮಾನಿಸುತ್ತೇವೆ ಎಂದರು.

ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು, ಡಿವೈಎಸ್ಪಿ ಶ್ರೀಕಾಂತ್ ಕೆ., ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೋ, ವ್ಯಾಕ್ಸಿನ್ ಕೇಂದ್ರದ ನೋಡಲ್ ಅಧಿಕಾರಿ ದಿನಕರ್ ಶೆಟ್ಟಿ, ಕಂದಾಯ ನಿರೀಕ್ಷಕ ದಿನೇಶ್ ಹುದ್ದಾರ್, ಸಾರ್ವಜನಿಕ ಆಸ್ಪತ್ರೆಯ ಡಾ. ರಶ್ಮಿ ಹಾಗೂ ಸಿಬ್ಬಂದಿಗಳು, ಕುಂದಾಪುರ ಸಹಾಯಕ ಉಪನಿರೀಕ್ಷಕ ಅಶೋಕ್, ಗೃಹರಕ್ಷಕ ಸಿಬ್ಬಂದಿಗಳು ಹಾಜರಿದ್ದರು.

Related Posts

Leave a Reply

Your email address will not be published.