ಶಾಲಾ-ಕಾಲೇಜು ವ್ಯಾಪ್ತಿಯಲ್ಲಿ ತಂಬಾಕು ಮುಕ್ತವೆಂದು ಘೋಷಣೆಗೆ ಕ್ರಮವಹಿಸಲು ಜಿಲ್ಲಾಧಿಕಾರಿ ಸೂಚನೆ

ಮಂಗಳೂರು: ಜಿಲ್ಲೆಯಲ್ಲಿರುವ ಎಲ್ಲಾ ಶಾಲಾ – ಕಾಲೇಜುಗಳ ವ್ಯಾಪ್ತಿಯಲ್ಲಿ ತಂಬಾಕು ಮುಕ್ತ ಪ್ರದೇಶವೆಂದು ಘೋಷಣೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ ಕೆ.ವಿ. ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದರು.ಅವರು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಜಿಲ್ಲೆಯ 2089 ಶಾಲೆಗಳಲ್ಲಿ 1822 ಶಾಲೆಗಳನ್ನು ತಂಬಾಕು ಮುಕ್ತವೆಂದು ಘೋಷಿಸಿದ್ದಾರೆ. ಉಳಿದ 267 ಶಾಲೆಗಳು ಹಾಗೂ 142 ಪದವಿ ಕಾಲೇಜುಗಳು ಹಾಗೂ 210 ಪದವಿ ಪೂರ್ವ ಕಾಲೇಜುಗಳನ್ನು ತಂಬಾಕು ಮುಕ್ತ ಪ್ರದೇಶವನ್ನಾಗಿ ಘೋಷಿಸಬೇಕಿರುತ್ತದೆ, ಈ ದಿಸೆಯಲ್ಲಿ ಆಯಾ ಶಾಲಾ ಕಾಲೇಜುಗಳ ಆವರಣದಲ್ಲಿ 100 ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡುವುದು ಕಂಡು ಬಂದಲ್ಲಿ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ಸಂದೇಶ ಅಳವಡಿಸಬೇಕು ಹಾಗೂ ಪರಿಸರದಲ್ಲಿ ಜಾಗೃತಿ ಮೂಡಿಸಬೇಕು, ಮುಖ್ಯವಾಗಿ ಶಾಲಾ – ಕಾಲೇಜುಗಳ ವ್ಯಾಪ್ತಿಯ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡದಂತೆ ಕ್ರಮಕೈಗೊಳ್ಳಬೇಕು ಎಂದವರು ಹೇಳಿದರು.

ಜಿಲ್ಲೆಯ ಎಲ್ಲಾ ತಾಲೂಕುಗಳ ತಹಶೀಲ್ದಾರರು ಈ ಬಗ್ಗೆ ತಾಲೂಕು ಮಟ್ಟದ ಕಾರ್ಯಪಡೆ ಸಮಿತಿ ಸಭೆಯಲ್ಲಿ ಚರ್ಚಿಸಿ ಉಪಯುಕ್ತ ಕ್ರಮಕೈಗೊಂಡು ಶಾಲಾ-ಕಾಲೇಜು ವಲಯವನ್ನು ತಂಬಾಕು ಮುಕ್ತ ಮಾಡಬೇಕು, ಮಕ್ಕಳು ದುಷ್ಚಟಕ್ಕೆ ಬಲಿಯಾಗಲು ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡಬಾರದು, ಸಂಬಂಧಿಸಿದ ಅಧಿಕಾರಿಗಳು ಎಚ್ಚರ ವಹಿಸಬೇಕು, ಜಿಲ್ಲಾ, ಉಪ-ವಿಭಾಗ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿರುವ ಸರ್ಕಾರಿ ಕಚೇರಿಗಳಲ್ಲಿಯೂ ತಂಬಾಕು ಉಪಯೋಗ ಅಥವಾ ಸೇವನೆಗೆ ಅವಕಾಶವಿಲ್ಲ, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಎಚ್ಚರ ವಹಿಸಬೇಕು, ತಂಬಾಕು ಪದಾರ್ಥಗಳನ್ನು ಮಾರಾಟ ಮಾಡುವ ಅಂಗಡಿಗಳವರು ಮಕ್ಕಳಿಗೆ ತಂಬಾಕು ಪದಾರ್ಥಗಳನ್ನು ನೀಡಬಾರದು, ಇಂತಹ ಅಂಗಡಿಗಳಿಗೆ ಆಕಸ್ಮಿಕ ಭೇಟಿ ನೀಡಿ ಪರಿಶೀಲಿಸಬೇಕು, ಒಂದು ವೇಳೆ ಮಕ್ಕಳಿಗೆ ತಂಬಾಕು ಪದಾರ್ಥ ವಿತರಿಸಿದರೆ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ನಿರ್ದೇಶನ ನೀಡಿದರು.

ಕೋಟ್ಪಾ-2003 ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಎಲ್ಲ ಇಲಾಖೆಗಳ ಸಹಭಾಗಿತ್ವ ಅಗತ್ಯ, ಪೊಲೀಸ್ಇ ಲಾಖೆಯು ಸೆಕ್ಷನ್ 4, 5,6 ಹಾಗೂ 7ರಡಿ ಸಹ ಪ್ರಕರಣ ದಾಖಲಿಸಬಹುದು ಎಂದರು.

ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕೋಟ್ಪಾ – 2003 ಕಾಯ್ದೆ ಉಲ್ಲಂಘನೆ ಕುರಿತು ಕಾರ್ಯಾಚರಣೆ ನಡೆಸಲು ಈಗಾಗಲೇ ತಂಬಾಕು ನಿಯಂತ್ರಣ ತಂಡವನ್ನು ರಚಿಸಲಾಗಿದೆ, ಅದರಲ್ಲಿ ಆರೋಗ್ಯ, ಪೊಲೀಸ್, ಅಬಕಾರಿ, ಆಹಾರ ಮತ್ತು ಸುರಕ್ಷತಾ ಗುಣಮಟ್ಟ, ವಾಣಿಜ್ಯ ತೆರಿಗೆ, ಕಂದಾಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಪಂಚಾಯತ್ ರಾಜ್ ಮತ್ತು ವಿಭಾಗೀಯ ನಿಯಂತ್ರಣಾಧಿಕಾರಿ ಪ್ರತಿನಿಧಿಯಾಗಿರುತ್ತಾರೆ, ಅವರು ಕಾರ್ಯಾಚರಣೆ ನಡೆಸಬೇಕು ಹಾಗೂ ಆಯಾ ತಾಲ್ಲೂಕುಗಳ ತಹಶೀಲ್ದಾರರು ಅಧ್ಯಕ್ಷತೆಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ತಾಲ್ಲೂಕು ಮಟ್ಟದ ಸಮನ್ವಯ ಸಮಿತಿ ಸಭೆ ನಡೆಸಬೇಕು ಎಂದು ಜಿಲ್ಲಾಧಿಕಾರಿಯವರು ಸೂಚಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಕುಮಾರ್, ಡಿಸಿಪಿ ಬಿ.ಪಿ. ದಿನೇಶ್ ಕುಮಾರ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ಡಾ. ಹನುಮಂತರಾಯಪ್ಪ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published.