ಶಾಲೆಯ ಅಂಗಳದಲ್ಲೇ ತರಗತಿ ಅಳಿಯೂರು ಶಾಲೆಯ ದುಸ್ಥಿತಿ
ಮೂಡುಬಿದಿರೆ: ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ವರದಾನವಾಗಿರುವ ಅಳಿಯೂರಿನ ಸರ್ಕಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಮುನ್ನೂರು ದಾಟಿದರೂ, ಕೊಠಡಿಯ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಬಿಸಿಲು, ಗಾಳಿ ಮಳೆಯನ್ನು ಲೆಕ್ಕಿಸದೆ ಅಂಗಳದಲ್ಲೇ ಕೂತು ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಳಿಯೂರು ದ.ಕ ಜಿ.ಪಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಈ ಪರಿಸ್ಥಿತಿ ಎದುರಾಗಿದೆ. ಶಾಲೆಯಲ್ಲಿ ಒಟ್ಟು 325 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದು, ಈ ಬಾರಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾದುದರಿಂದ ಎರಡು ತರಗತಿಗಳು ಶಾಲೆಯ ಒಳಾಂಗಣದಿಂದ ಹೊರಗೆ ಬಿದ್ದಿದೆ. ಕೊಠಡಿಗಳ ಕೊರತೆ ಪ್ರಮುಖ ಕಾರಣವಾಗಿದ್ದು, ಶಾಲೆಯ ಹೊರಾಂಗಣದಲ್ಲಿ ತಾತ್ಕಾಲಿಕ ತಗಡುಶೀಟ್ ಅಳವಡಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ. ನಾಲ್ಕನೇ ತರಗತಿ ಮತ್ತು ಏಳನೇ ತರಗತಿಯ ವಿದ್ಯಾರ್ಥಿಗಳು ಮಳೆ ಮತ್ತು ಗಾಳಿಯನ್ನು ಲೆಕ್ಕಿಸದೆ ಪಾಠ ಕೇಳಬೇಕಾದ ಪರಿಸ್ಥಿತಿ ಇದೆ. ಬೇಸಿಗೆಯಲ್ಲಿ ತಗಡುಶೀಟ್ನಿಂದಾಗಿ ಬಿಸಿಲಿನ ಬೇಗೆ ಹೆಚ್ಚಾದರೆ, ಗಾಳಿಮಳೆಯಲ್ಲಿ ತಗಡು ಹಾರಿ ಹೋಗಿ ವಿದ್ಯಾರ್ಥಿಗಳಿಗೆ ಹಾನಿಯಾಗುವ ಸಂಭವವು ಇದೆ. ಸಾಧರಣ ಮಳೆ ಬೀಸುವಾಗಲೂ ವಿದ್ಯಾರ್ಥಿಗಳು, ಶಿಕ್ಷಕರು ಪಾಠ ಕೇಳುವ, ಪಾಠ ಮಾಡುವ ಪರಿಸ್ಥಿತಿ ಇದೆ. ಎಸ್ಡಿಎಂಸಿ ಅಧ್ಯಕ್ಷ ರವೀಂದ್ರ ಮಾತೃಶ್ರೀ, ಹಳೇ ವಿದ್ಯಾರ್ಥಿ ಸಂಘದ ಪ್ರಮುಖರಾದ ಲಕ್ಷ್ಮಣ್ ಕೋಟ್ಯಾನ್, ಗಣೇಶ್ ಬಿ.ಅಳಿಯೂರು, ಪೋಷಕ ಪ್ರಮುಖರಾದ ವಿಶ್ವನಾಥ ಕೋಟ್ಯಾನ್, ಶಾಲಾ ಸಮ£ವೇದಿಕೆಯ ಅಧ್ಯಕ್ಷ ಪದ್ಮನಾಭ ಕೋಟ್ಯಾನ್ ಸಹಿತ ಪೋಷಕರು,ಗ್ರಾಮಸ್ಥರು ಶಾಲೆಯ ಸಮಸ್ಯೆಯ ಬಗ್ಗೆ ಹಲವು ಬಾರಿ ಶಿಕ್ಷಣ ಇಲಾಖೆಯ ಗಮನಸೆಳೆದಿದ್ದರೂ, ಇನ್ನೂ ತರಗತಿ ಕೊಠಡಿಗೆ ಸೂಕ್ತ ಕ್ರಮ ವಹಿಸಿಲ್ಲ.
ನೂತನ ಕೊಠಡಿ ನಿರ್ಮಾಣಕ್ಕೆ ಜಿಲ್ಲಾ ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಕರೆದಿದ್ದು, ಟೆಂಡರ್ ವಹಿಸಿಕೊಂಡ ವ್ಯಕ್ತಿ ಪ್ರಮಾಣಪತ್ರ ಸಲ್ಲಿಸುವಲ್ಲಿ ತಪ್ಪಿರುವುದರಿಂದ ಟೆಂಡರ್ ರದ್ದಾಗಿದೆ. ಇನ್ನು ಕೊಠಡಿ ನಿರ್ಮಾಣಕ್ಕೆ ಹೊಸ ಟೆಂಡರ್ ಕರೆಯಬೇಕಾಗಿದೆ ಎನ್ನುವುದು ಶಿಕ್ಷಣ ಇಲಾಖೆಯಿಂದ ಸಿಗುವ ಉತ್ತರ.