ಶೂಟೌಟ್ ಪ್ರಕರಣದ ಸಮಗ್ರ ತನಿಖೆಗೆ ಡಿವೈಎಫ್ಐ ಆಗ್ರಹ
ನಿನ್ನೆ ಮಂಗಳೂರು ನಗರದ ಮೋರ್ಗನ್ಸ್ ಗೇಟ್ ಬಳಿಯ ವೈಷ್ಣವಿ ಎಕ್ಸ್ಪ್ರೆಸ್ ಕಾರ್ಗೋ ಸಂಸ್ಥೆಯ ಮಾಲಕ ರಾಜೇಶ್ ಪ್ರಭು ತನ್ನ ಕಾರ್ಮಿಕರ ಸಂಬಳದ ವಿಚಾರದಲ್ಲಿ ನಡೆದ ಮಾತಿನ ಚಕಮಕಿ ವೇಳೆ ತಾನು ಪಿಸ್ತೂಲಿನಿಂದ ಹಾರಿಸಿದ ಗುಂಡು ಆತನ ಪುತ್ರನಿಗೆ ತಗುಲಿದ ಪ್ರಕರಣವನ್ನು ನಗರದ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕೆಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಆಗ್ರಹಿಸಿದೆ.
ರಾಜೇಶ್ ಪ್ರಭು ಮಾಲಕತ್ವದ ವೈಷ್ಣವಿ ಎಕ್ಸ್ಪ್ರೆಸ್ ಕಾರ್ಗೋ ಸಂಸ್ಥೆಯಲ್ಲಿ ವಾಹನ ಚಾಲಕರಾಗಿ ದುಡಿಯುತ್ತಿದ್ದ ಚಂದ್ರು ಮತ್ತು ಕ್ಲೀನರ್ ಅಶ್ರಫ್ ಎಂಬವರು ಸರಕು ಸಾಗಾಟ ಮಾಡಿದ ಕೂಲಿ ನೀಡುವಂತೆ ಕಳೆದೆರಡು ದಿನಗಳಿಂದ ಕೇಳಿಕೊಳ್ಳುತ್ತಿದ್ದರೂ ಸಂಬಳ ನೀಡಲು ನಿರಾಕರಿಸುತ್ತಿದ್ದ ವಿಚಾರಕ್ಕೆ ಸಂಬಂಧಿಸಿ ನಡೆದ ಮಾತಿನ ಚಕಮಕಿ ಮುಂದೆ ಹೊಯ್ ಕೈ ನಡೆಯುವವರೆಗೂ ಮುಂದುವರಿದಾಗ ತನ್ನ ಕೆಲಸದಾಳುವಿಗೆ ಹಾರಿಸಿದ ಗುಂಡು ತಪ್ಪಿ ಮಾಲಕನ ಪುತ್ರನಿಗೆ ತಗುಲಿದೆ. ಪುತ್ರ ಸುಧೀಂದ್ರನ ಪರಿಸ್ಥಿತಿ ಈಗ ಚಿಂತಾಜನಕವಾಗಿದ್ದು. ಈ ಮಧ್ಯೆ ಪ್ರಕರಣವನ್ನು ದಿಕ್ಕು ತಪ್ಪಿಸುವ ಮಾತುಗಳು ಕೇಳಿ ಬರುತ್ತಿದೆ. ಗುಂಡು ಹಾರಟ ನಡೆದ ಪ್ರಕರಣವನ್ನು ಕಾರ್ಮಿಕರ ತಲೆ ಮೇಲೆ ಹೊರಿಸಿ ಅವರನ್ನು ತಪ್ಪಿತಸ್ಥರನ್ನಾಗಿಸುವ ತಯಾರಿಗಳು ನಡೆಯುತ್ತಿವೆ ಎಂಬ ವಿಚಾರಗಳು ಕೇಳಿ ಬರುತ್ತಿದ್ದು ಮಾಲಕ ರಾಜೇಶ್ ಪ್ರಭು ಪ್ರಕರಣದಿಂದ ರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ವಿಚಾರ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಶೂಟೌಟ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಕಳೆದ ಹಲವಾರು ವರುಷಗಳಿಂದ ಕಾರ್ಮಿಕರನ್ನು ದುಡಿಸಿ ಸಂಬಳ ನೀಡದೆ ಸತಾಯಿಸುವಂತಹ ಕೆಲಸಗಳನ್ನು ಸಂಸ್ಥೆಯ ಮಾಲಕ ಮಾಡುತ್ತಾ ಬಂದಿದ್ದು, ಕಾರ್ಮಿಕರು ದುಡಿದ ಸಂಬಳವನ್ನು ಕೇಳಿದರೆ ಪಿಸ್ತೂಲು ತೋರಿಸಿ ಬೆದರಿಸುವಂತಹ ಘಟನೆಗಳು ಈ ಹಿಂದೆಯೂ ನಡೆದಿದೆ.
ಆದ್ದರಿಂದ ಈ ಗುಂಡು ಹಾರಟ ನಡೆಸಿದ ಪ್ರಕರಣವು ಯಾವುದೇ ಕಾರಣಕ್ಕೂ ದಿಕ್ಕು ತಪ್ಪದ ರೀತಿಯಲ್ಲಿ ನೋಡಿಕೊಳ್ಳಲು, ಪ್ರಕರಣವನ್ನು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಬೇಕೆಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ ಎಂದು ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.