ಶೈಕ್ಷಣಿಕ ಸಂಸ್ಥೆಯ ಬೆಳವಣಿಗೆಯಲ್ಲಿ ವೃತ್ತಿಪರತೆ, ತಂಡಸ್ಫೂರ್ತಿ ಅಗತ್ಯ: ಡಾ. ಡಿ.ವೀರೇಂದ್ರ ಹೆಗ್ಗಡೆ
ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗಳ ವ್ಯಕ್ತಿಗತ ವೃತ್ತಿಪರ ಬದ್ಧತೆಯು ಶೈಕ್ಷಣಿಕ ಸಂಸ್ಥೆ ವ್ಯಾಪಕ ಮನ್ನಣೆ ಗಳಿಸುವುದಕ್ಕೆ ಸಹಾಯಕವಾಗುತ್ತದೆ ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಅಭಿಪ್ರಾಯಪಟ್ಟರು.
ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಾಪಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ವೃತ್ತಿಪರ ಬದ್ಧತೆಯೊಂದಿಗೆ ಕಾರ್ಯನಿರ್ವಹಿಸಿದಾಗ ಮನ್ನಣೆ ತಾನಾಗಿಯೇ ಲಭಿಸುತ್ತದೆ. ಶಿಕ್ಷಣ ಸಂಸ್ಥೆಗಳೊಂದಿಗೆ ತೊಡಗಿಸಿಕೊಂಡ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗಳ ಬದ್ಧತೆ, ನಿರಂತರ ಪರಿಶ್ರಮವು ವ್ಯಕ್ತಿಗತ ಬೆಳವಣಿಗೆಯೊಂದಿಗೆ ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೂ ದಾರಿ ಮಾಡಿಕೊಡುತ್ತವೆ. ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಈ ನಿಟ್ಟಿನಲ್ಲಿ ಉಳಿದೆಲ್ಲ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.
ಎಸ್.ಡಿ.ಎಂ ಕಾಲೇಜಿನ ಆರಂಭಿಕ ದಿನಗಳು ಅತ್ಯಂತ ಸವಾಲಿನದ್ದಾಗಿದ್ದವು. ಗುಣಮಟ್ಟದ ಶಿಕ್ಷಣ ಮತ್ತು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಯ ಆಲೋಚನಾಕ್ರಮಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಈ ಕಾಲೇಜು ಸ್ಥಾಪಿತವಾಯಿತು. ಪಟ್ಟಾಭಿಷೇಕದ ನಂತರ ಲಭಿಸಿದ ಕಾಲೇಜು ಸ್ಥಾಪನೆ ಮತ್ತು ಕಟ್ಟಡ ನಿರ್ಮಾಣದ ಹೊಣೆಗಾರಿಕೆಯ ಅವಕಾಶ ಆಡಳಿತಾತ್ಮಕ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಸಾಮಥ್ರ್ಯವನ್ನು ಒದಗಿಸಿಕೊಟ್ಟಿತು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಅವರು ಉಪಸ್ಥಿತರಿದ್ದರು.