ಸಣ್ಣ ರೈತರನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಕೃಷಿ ಉತ್ಪಾದಕ ಸಂಘ: ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ

 ದೇಶದ ಎಲ್ಲಾ ಸಣ್ಣ ರೈತರನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಪ್ರತೀ ತಾಲೂಕಿನಲ್ಲಿ ಕನಿಷ್ಟ ಒಂದು ಕೃಷಿ ಉತ್ಪಾದಕ ಸಂಘ ಆರಂಭಿಸಲಾಗುವುದು ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.


ಪುತ್ತೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಭಾರತ ಸಣ್ಣ ರೈತರನ್ನೇ ಹೊಂದಿರುವ ದೇಶವಾಗಿದ್ದು, ದೇಶದ ಎಲ್ಲಾ ರೈತರನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕೃಷಿ ಉತ್ಪಾದಕ ಸಂಘವನ್ನು ಆರಂಭಿಸಲು ಸೂಚನೆ ನೀಡಿದ್ದಾರೆ. ದೇಶದ ಪ್ರತೀ ತಾಲೂಕಿನಲ್ಲಿ ಕನಿಷ್ಟ ಒಂದು ಕೃಷಿ ಉತ್ಪಾದಕ ಸಂಘದಂತೆ ದೇಶದಲ್ಲಿ ಸುಮಾರು ೧೦ ಸಾವಿರ ಇಂಥಹ ಸಂಘಗಳು ಅಸ್ತಿತ್ವಕ್ಕೆ ಬರಲಿದ್ದು, ಇದಕ್ಕೆ ಬೇಕಾದ ಹಣಕಾಸಿನ ನೆರವನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಭರಿಸಲಿದೆ ಎಂದ ಅವರು ಕೃಷಿ ಬಜೆಟ್ ಹೊರತುಪಡಿಸಿ ಕೃಷಿಯ ಮೂಲಭೂತ ವ್ಯವಸ್ಥೆಗಾಗಿಯೇ ಕೇಂದ್ರ ಸರಕಾರ ಹೆಚ್ಚುವರಿ ೧ ಲಕ್ಷ ಕೋಟಿ ರೂಪಾಯಿಗಳನ್ನು ತೆಗೆದಿರಿಸಿದ್ದು, ಕೃಷಿಯ ಮೂಲಭೂತ ವ್ಯವಸ್ಥೆಗಳಿಗಾಗಿ ಈ ಹಣ ವಿನಿಯೋಗಿಸಲಾಗುವುದು ಎಂದರು. ತೆಂಗನ್ನು ಇದೇ ಮೊದಲ ಬಾರಿಗೆ ವಿದೇಶಕ್ಕೆ ರಫ್ತು ಮಾಡುವ ತೀರ್ಮಾನವನ್ನು ಕೇಂದ್ರ ಸರಕಾರ ಮಾಡಿದ್ದು, ಇದರಿಂದಾಗಿ ರಾಜ್ಯದ ತೆಂಗು ಬೆಳೆಗಾರರಿಗೆ ಉಪಕಾರಿಯಾಗಲಿದೆ. ತೆಂಗಿನ ಎಣ್ಣೆ ಸೇರಿದಂತೆ ವಿವಿಧ ಉತ್ಪನ್ನಗಳೂ ಇನ್ನು ವಿದೇಶಕ್ಕೆ ರಫ್ತಾಗಲಿದೆ ಎಂದ ಸಚಿವರು ತೆಂಗು ಮಂಡಳಿಯ ಅಧ್ಯಕ್ಷನೂ ತೆಂಗು ಬೆಳೆಗಾರನೇ ಆಗಲಿದ್ದಾನೆ ಎಂದರು. ಈವರೆಗೆ ಐಎಎಸ್ ಅಧಿಕಾರಿಯಾಗುತ್ತಿದ್ದ ಈ ವ್ಯವಸ್ಥೆಯನ್ನು ಕೇಂದ್ರ ಸರಕಾರ ಬದಲಿಸಿದೆ. ಕರಾವಳಿ ಭಾಗದ ಪ್ರಮುಖ ಬೆಳೆಯಾದ ಅಡಿಕೆಗೆ ಇದೀಗ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದ್ದು, ವಿದೇಶಗಳಿಂದ ಅಡಿಕೆ ಆಮದನ್ನು ನಿಷೇಧ ಮಾಡಿದ ಪರಿಣಾಮ ಈ ಬೆಲೆ ಏರಿಕೆಗೆ ಕಾರಣವಾಗಿದೆ ಎಂದ ಅವರು ಮುಂದಿನ ದಿನಗಳಲ್ಲಿ ವಿದೇಶಗಳಿಂದ ಅಡಿಕೆ ಆಮದಾಗುವ ಸಾಧ್ಯತೆಯನ್ನು ಅವರು ಇದೇ ಸಂದರ್ಭದಲ್ಲಿ ಹೇಳಿದರು. ಅಡಿಕೆ ಬೆಳೆಗಾರರ ಪ್ರಮುಖ ಸಮಸ್ಯೆಯಾದ ಹಳದಿ ರೋಗ ತಡೆಯುವ ನಿಟ್ಟಿನಲ್ಲಿ ಸಂಶೋಧನೆಯನ್ನು ನಡೆಸಲು ಕೇಂದ್ರ ಸರಕಾರ ಚಿಂತನೆ ನಡೆಸಿದ್ದು, ಹಳದಿ ರೋಗ ತಡೆಗಟ್ಟಲು ಯಾವ ರಾಸಾಯನಿಕ ಬಳಸಬೇಕು ಎನ್ನುವ ನಿಟ್ಟಿನಲ್ಲೂ ಸಂಶೋಧನೆಗಳು ನಡೆಯಲಿದೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.


ಇನ್ನು 2013-14 ನೇ ಸಾಲಿನಲ್ಲಿ ಕೃಷಿಗೆ ಬಜೆಟ್ ನಲ್ಲಿ 23 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದು, ಇದೀಗ ಅದರ 460 ಪಟ್ಟು ಜಾಸ್ತಿ ಹಣವನ್ನು ಕೃಷಿಗಾಗಿ ಮೀಸಲಿಡಲಾಗಿದೆ. ಈ ಬಾರಿ 1 ಲಕ್ಷದ 31 ಸಾವಿರ ಕೋಟಿಯನ್ನು ಕೃಷಿಗಾಗಿ ಮೀಸಲಿಡಲಾಗಿದೆ. ಜಾಗತಿಕ ಮಟ್ಟದಲ್ಲಿ ಅತೀ ಹೆಚ್ಚು ರಫ್ತು ಮಾಡುವ ದೇಶಗಳಲ್ಲಿ ಭಾರತ ಈ ಬಾರಿ 9 ನೇ ಸ್ಥಾನದಲ್ಲಿದ್ದು, ಕಳೆದ ಸಾಲಿನಲ್ಲಿ ದೇಶ ೩೦೫ ಮಿಲಿಯನ್ ಮೆಟ್ರಿಕೆ ಟಲ್ ಆಹಾರ ಧಾನ್ಯಗಳನ್ನು ಬೆಳೆದಿದ್ದರೆ, 326 ಮಿಲಿಯನ್ ಮೆಟ್ರಿಕ್ ಟನ್ ತರಕಾರಿ ಹಾಗೂ ಹಣ್ಣುಗಳನ್ನು ಬೆಳೆಯುವ ಮೂಲಕ ಕೃಷಿಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಚರಿತ್ರೆ ನಿರ್ಮಿಸಿದೆ ಎಂದರು. ಅಲ್ಲದೆ ಬೆಳೆ ವಿಮೆ ಯೋಜನೆಯನ್ನು ಕೃಷಿಕರಿಗೆ ಮತ್ತಷ್ಟು ಸರಳೀಕರಣ ಮಾಡಲಾಗಿದ್ದು, ಕೃಷಿ ಸಮ್ಮಾನ್ , ಹನಿ ನೀರಾವರಿಗೆ ಪ್ರೋತ್ಸಾಹ ಸೇರಿದಂತೆ ಹಲವು ಯೋಜನೆಗಳನ್ನು ಕೇಂದ್ರ ಸರಕಾರ ರಾಜ್ಯ ಸರಕಾರಗಳ ಮೂಲಕ ಮಾಡುತ್ತಿದೆ ಎಂದರು. ಕೇಂದ್ರ ಸಚಿವರಾಗಿ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ತಮ್ಮ ತವರು ಜಿಲ್ಲೆಗೆ ಆಗಮಿಸಿದ ಶೋಭಾ ಕರಂದ್ಲಾಜೆಗೆ ಹುಟ್ಟೂರಿನ ಸನ್ಮಾನ ನೀಡಲಾಗಿತ್ತು. ಇದೇ ಸಂದರ್ಭದಲ್ಲಿ ಸಚಿವರು ಪುತ್ತೂರಿನ ಇತಿಹಾಸ ಪ್ರಸಿದ್ಧ ಮಹಾಲಿಂಗೇಶ್ವರ ದೇವಸ್ಥಾನಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ಶಾಸಕರಾದ ಸಂಜೀವ ಮಠಂದೂರು ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.