ಸಮಗ್ರ ಮೀನು ಕೃಷಿಯಿಂದ ಹೆಚ್ಚಿನ ಲಾಭ : ಡಾ.ರಮೇಶ್ ಟಿ.ಜೆ
ಮೂಡುಬಿದಿರೆ: ಮೀನು ಕೃಷಿಕರ ದಿನಾಚರಣೆ ಅಂಗವಾಗಿ ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಹಾಗೂ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್ ಇವುಗಳ ವತಿಯಿಂದ ಪಣಪಿಲ ಶ್ರೀ ರಾಜ್ ಕೊಟ್ಟಾರಿಬೆಟ್ಟು ಪಣಪಿಲ ಇಲ್ಲಿ ಮೀನು ಕೃಷಿ ಕುರಿತು ತರಬೇತಿ ಹಾಗೂ ಕ್ಷೇತ್ರೋತ್ಸವ ಮತ್ತು ಮಾರಾಟ ಕಾರ್ಯಕ್ರಮ ಶನಿವಾರ ನಡೆಯಿತು.
ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ರಮೇಶ್ ಟಿ.ಜೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮೀನು ಕೃಷಿ ಲಾಭದಾಯಕ ಕೃಷಿಯಾಗಿದ್ದು ಬೆಳವಣಿಗೆಯನ್ನು ಕಾಣುತ್ತಿದೆ. ರೈತರ ಆದಾಯ ದ್ವಿಗುಣ ಮಾಡಲು ಭತ್ತದ ಕೃಷಿಯಿಂದ ಸಾಧ್ಯವಿಲ್ಲ. ಪ್ರಾಣಿಗಳ ಸಾಕಾಣಿಕೆಯಿಂದ ೫ರಿಂದ ೬ ಪಟ್ಟು ಲಾಭ ದೊರಕುತ್ತಿದ್ದು ಅದರಲ್ಲೂ ಸಮಗ್ರ ಮೀನು ಕೃಷಿ ಮಾಡಿ ಅದರಿಂದ ಮೌಲ್ಯವರ್ದಿತ ಉತ್ಪನ್ನಗಳನ್ನು ತಯಾರಿಸುವುದರಿಂದ ಹೆಚ್ಚಿನ ಲಾಭವನ್ನು ಪಡೆಯಲು ಸಾಧ್ಯವಿದೆ’ ಎಂದು ಹೇಳಿದರು.ಕಡಿಮೆ ಖರ್ಚಿನಲ್ಲಿ ಸಿಹಿ ನೀರು ಮೀನು ಕೃಷಿಯನ್ನು ಲಾಭದಾಯಕ ಉದ್ಯೋಗವನ್ನಾಗಿ ಮಾಡಿಕೊಳ್ಳಲು ಸಾಧ್ಯವಿದೆ. ನದಿ, ಸರೋವರ ಅಲ್ಲದೆ ನಿರುಪಯುಕ್ತ ಪ್ರದೇಶಗಳು ನಮ್ಮಲ್ಲಿ ಸಾಕಷ್ಟಿದ್ದು ಈ ಸಂಪನ್ಮೂಲಗಳನ್ನು ಮೀನು ಕೃಷಿಗೆ ಬಳಸಬಹುದು. ಆಂದ್ರ ಪ್ರದೇಶ ಮೀನು ಕೃಷಿಗೆ ರಾಷ್ಟ್ರದಲ್ಲೆ ಮೊದಲ ಸ್ಥಾನದಲ್ಲಿದ್ದು ಇಲ್ಲಿಂದ ಹೆಚ್ಚು ಮೀನುಗಳು ವಿದೇಶಕ್ಕೆ ರಫ್ತು ಆಗುತ್ತಿದೆ ಎಂದ ಅವರು ಕರಾವಳಿ ಜಿಲ್ಲೆಯ ಜನರು ಭತ್ತ, ತೆಂಗು ಜತೆಗೆ ಮೀನು ಕೃಷಿಯನ್ನು ಮಾಡಿದರೆ ಉತ್ತಮ ಎಂದು ಅಭಿಪ್ರಾಯಪಟ್ಟರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಕೆವಿಕೆಯ ಮೀನುಗಾರಿಕಾ ವಿಜ್ಞಾನಿ ಡಾ. ಚೇತನ್ ಮಾತನಾಡಿ ಜಿಲ್ಲೆಯ ವಾತಾವರಣಕ್ಕೆ ಲಾಭದಾಯಕವಾಗಬಲ್ಲ ಮೀನು ಕೃಷಿಯ ಬಗ್ಗೆ ಮಾಹಿತಿ ನೀಡಿದರು. ವಿಜ್ಞಾನಿ ಡಾ.ಕೇದಾರನಾಥ ಬೆಳೆ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು. ಶ್ರೀರಾಜ್ ಕೊಟ್ಟಾರಿಬೆಟ್ಟು ಮನೆಯ ದೇವರಾಜ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ದರೆಗುಡ್ಡೆ ಗ್ರಾ.ಪಂನ ಅಧ್ಯಕ್ಷೆ ತುಳಸಿ, ಕೊಟ್ಟಾರಿಬೆಟ್ಟು ಹರಿಯಪ್ಪ ಕೋಟ್ಯಾನ್, ಕೃಷಿ ವಿಜ್ಷಾನಿ ಡಾ.ಮಲ್ಲಿಕಾರ್ಜುನ, ಚಂದನ ಬಯೊ ಲಿ. ಬೆಳುವಾಯಿ ಇದರ ಮುಖ್ಯಸ್ಥ ವಸಂತ್ ಉಪಸ್ಥಿತರಿದ್ದರು.ರಾಜೇಶ್ ಕೋಟ್ಯಾನ್ ಸ್ವಾಗತಿಸಿದರು. ಪ್ರಗತಿಪರ ಕೃಷಿಕ ವಿಶ್ವನಾಥ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.