ಸಮಾಜದಲ್ಲಿ ಅರಿವಿನ ಕೊರತೆಯಿಂದ ಅಸಮಾನತೆ ಉಂಟಾಗಿದೆ : ಪ್ರೊ. ಗಿರೀಶ್ ಮಿಶ್ರಾ

ಸಮಾಜದಲ್ಲಿ ಅರಿವಿನ ಕೊರತೆಯಿಂದ ಅಸಮಾನತೆ ಉಂಟಾಗಿದೆ.‌ಇದನ್ನು ಸರಿಪಡಿಸುವ ಜವಾಬ್ದಾರಿ ಮನಶ್ಶಾಸ್ತ್ರಜ್ಞರದ್ದಾಗಿರುತ್ತದೆ ಎಂದು ಮಹಾರಾಷ್ಟ್ರದ ವಾರ್ಧಾದ ಮಹಾತ್ಮಾ ಗಾಂಧಿ ಹಿಂದಿ ವಿಶ್ವವಿದ್ಯಾಲಯದ ಕುಲಪತಿ, ವಿಜ್ಞಾನಿ ಪ್ರೊ. ಗಿರೀಶ್ ಮಿಶ್ರಾ ನುಡಿದರು.

ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ 2021ರ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ ಆಯೋಜಿಸಿದ “ಅಸಮಾನ ಜಗತ್ತಿನಲ್ಲಿ ಮಾನಸಿಕ ಆರೋಗ್ಯ” ರಾಷ್ಟ್ರೀಯ ವರ್ಚುವಲ್ ಕಾರ್ಯಾಗಾರದಲ್ಲಿ ಇವರು ಮಾತನಾಡಿದರು.

ಸಮಾಜದಲ್ಲಿ ಮಾನಸಿಕವಾಗಿಯೂ ಅಸಮಾನತೆಹ ಭಾವ ಎದುರಾಗುತ್ತಿದೆ. ಇದರಿಂದ ಮನುಷ್ಯ ಮನುಷ್ಯರ ನಡುವೆ ಅಂತರ ಸೃಷ್ಟಿಯಾಗಿದೆ. ಇದನ್ನು ಸರಿಪಡಿಸುವ ಮತ್ತು ಮಾನಸಿಕ ಸಮಾನತೆಗೆ ಹಾದಿ ಮಾಡಿಕೊಡುವ ಜವಾಬ್ದಾರಿ ಮನಶಾಸ್ತ್ರಜ್ಞರದ್ದಾಗಿದೆ ಎಂದು ಅವರು ತಿಳಿಸಿ ಕೊಟ್ಟರು.

ಮನುಷ್ಯರ ಮನಸ್ಸಿನಲ್ಲಿ ಕೆಲವು ಋಣಾತ್ಮಕ ಭಾವಗಳಿರುತ್ತವೆ. ದ್ವೇಷ, ರಾಗ, ಮತ್ಸರ, ಕಡೆಗಣನೆ ಮತ್ತು ಅಹಂಕಾರದಂತ ಕೆಟ್ಟ ಭಾವನೆಗಳನ್ನು ತ್ಯಜಿಸಿದಲ್ಲಿ ಉತ್ತಮ ಮಾನಸಿಕ ಆರೋಗ್ಯ ಹೊಂದಬಹುದು. ಪ್ರತಿಯೊಬ್ಬರಿಗೂ ಸ್ವಯಂ ಪ್ರೀತಿ ಇದ್ದೇ ಇರುತ್ತದೆ ಆದರೆ ಅದು ಸ್ವಾರ್ಥವಾಗಿ ಬದಲಾದಾಗ ಪರಿಣಾಮ ಕೆಟ್ಟದಾಗಿರುತ್ತದೆ ಎಂದರು. ನಿಮ್ಮ ಕುರಿತಾಗಿ ಇತರರು ಏನು ಹೇಳುತ್ತಾರೆ ಮತ್ತು ತಾನು ಇತರರ ಎದುರು ವ್ಯಕ್ತಿತ್ವವನ್ನು ಹೇಗೆ ಬಿಂಬಿಸಿಕೊಳ್ಳ ಬೇಕು ಎಂಬ ಆಲೋಚನೆಗಳು ಕೆಟ್ಟದಾರಿ ಹಿಡಿಸುತ್ತವೆ ಎಂದು ಅವರು ಸೂಚಿಸಿದರು.

ಪರೋಪಕಾರ ಎನ್ನುವುದು ತುಂಬಾ ಉನ್ನತ ಹಂತದಲ್ಲಿ ಇರುವಂತದ್ದು.” ವೈಷ್ಣವ ಜನತೋ, ಸರ್ವೆ ಭದ್ರಾಣಿ ಪಶ್ಯಂತು, ಲೋಕಾ ಸಮಸ್ತಾ ಸುಖಿನೋ ಭವಂತು” ಎನ್ನುವ ವಿಚಾರಗಳಂತೆ ಅಹಿಂಸೆ, ಸತ್ಯ , ಅಪರಿಗ್ರಹ ಮತ್ತು ಜ್ಞಾನ ಇವು ವ್ಯಕ್ತಿಯ ವರ್ತನೆಯಲ್ಲಿ ಇದ್ದರೆ ಸಮಾನತೆ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಹುಟ್ಟುತ್ತದೆ‌ ಎಂದು ತಿಳಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು. ಕಾರ್ಯಕ್ರಮ ಆಯೋಜಕರಾದ ಡಾ. ಮಹೇಶ್ ಬಾಬು ಹಾಗೂ ಎಸ್‌.ಡಿ‌.ಎಂ ಸ್ನಾತಕೋತ್ತರ ಕೇಂದ್ರದ ಉಪನ್ಯಾಸಕರು ಉಪಸ್ಥಿತರಿದ್ದರು. ವಿದ್ಯಾರ್ಥಿ ಪೂಜಾ ಸ್ವಾಗತಿಸಿದರು. ಕಾಶಿಕಾ ನಿರೂಪಿಸಿದರು.

 

Related Posts

Leave a Reply

Your email address will not be published.