ಸರ್ಕಾರವನ್ನು ವಿಪಕ್ಷ ಎಚ್ಚರಿಸುವ ಕೆಲಸ ಮಾಡುತ್ತಿದೆ: ಮಾಜಿ ಸಚಿವ ರಮಾನಾಥ ರೈ

ಬಂಟ್ವಾಳ : ಕರೋನಾ ಮಹಾಮಾರಿ ಯಿಂದ ಜನರಿಗೆ ಸಾಕಷ್ಟು ತೊಂದರೆಯಾಗಿದ್ದು, ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಜನರಿಗೆ ಅಗತ್ಯ ನೆರವು ನೀಡುವುದರ ಜೊತೆಯಲ್ಲಿ ಕಾಲಕಾಲಕ್ಕೆ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ನಡೆಸುತ್ತಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಬಿ.ಸಿ.ರೋಡಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಮಾರಿಯನ್ನು ಸಮರ್ಥವಾಗಿ ಎದುರಿಸಲು ಯೋಜನೆ ರೂಪಿಸಬೇಕು ಎಂದರು.ರೆಡಿಸೀವರ್ ಹಾಗೂ ಬ್ಲಾಕ್ ಫಂಗಸ್‌ನ ಔಷಧಿಗಳು ಆಸ್ಪತ್ರೆಯಲ್ಲಿ ಸಿಗುತ್ತಿಲ್ಲ, ಆದರೆ ಕಾಳಸಂತೆಯಲ್ಲಿ ದೊರಕುತ್ತಿದ್ದು ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದರು.ಕರ್ನಾಟಕದ ಎಲ್ಲಾ ಕಾಂಗ್ರೇಸ್ ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ಸಹಿತ ಒಟ್ಟು 100 ಕೋಟಿ ಅನುದಾನವನ್ನು ಕರೋನಾ ಲಸಿಕೆಗೆ ಬಳಸಲು ಅನುಮತಿಗೆ ಸರ್ಕಾರಕ್ಕೆ ಮನವಿ ಮಾಡಿದ್ದರೂ, ಸರ್ಕಾರ ಈ ಕುರಿತು ಮಂಜೂರಾತಿ ನೀಡಿಲ್ಲ ಎಂದವರು ಆರೋಪಿಸಿದರು.

ಕರೋನಾ ನಿಗ್ರಹಕ್ಕೆ ಕಾಂಗ್ರೆಸ್ ಪಕ್ಷ ಅಗತ್ಯ ನೆರವನ್ನು ನೀಡುತ್ತಿದ್ದು, ದಕ್ಷಿಣ ಕನ್ನಡದ ಪ್ರತೀ ಬ್ಲಾಕ್‌ನಲ್ಲೂ ಅಂಬ್ಯುಲೆನ್ಸ್ ಅನ್ನು ಪಕ್ಷದ ವತಿಯಿಂದ ಒದಗಿಸಲಾಗಿದೆ. ಮಂಗಳೂರಿನಲ್ಲಿ ಜಿಲ್ಲಾ ಕಾಂಗ್ರೆಸ್‌ನ ವಾರ್ ರೂಂ ದಿನದ ೨೪ ಗಂಟೆ ಕೆಲಸ ಮಾಡುತ್ತಿದೆ, ಜನರಿಗೆ ಅಗತ್ಯವಾದ ಬೆಡ್, ಆಕ್ಸಿಜನ್, ಶವ ಸಂಸ್ಕಾರಕ್ಕೆ ನೆರವು ಮಾತ್ರವಲ್ಲದೇ, ಪ್ಲಾಸ್ಮಾ ನೀಡಿಕೆಯಲ್ಲೂ ಶ್ರಮ ವಹಿಸಿದೆ, ಹಸಿವಿನಿಂದ ಯಾರೂ ಬಳಲಬಾರದು ಎಂಬ ಕಾರಣಕ್ಕೆ ಆಹಾರ ಒದಗಿಸುವ ಕೆಲಸವನ್ನು ಬಂಟ್ವಾಳ ಸಹಿತ ಜಿಲ್ಲಾ ಮಟ್ಟದಲ್ಲಿ ನಿರಂತರವಾಗಿ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಆರಂಭಿಕ ಹಂತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೈಗೊಂಡ ತಪ್ಪು ನಿರ್ಧಾರದಿಂದ ಕರೋನಾ ಉಲ್ಭಣಗೊಂಡಿದೆ ಎಂದ ಅವರು, ಕರೋನಾ ನಿಗ್ರಹದ ಪ್ರತೀ ಹಂತದಲ್ಲೂ ಸರ್ಕಾರ ಎಡವಿದೆ. ಕರೋನಾ ರೋಗಿಗಳಿಗೆ ಆಮ್ಲಜನಕ ಸಿಗದೇ ಇದ್ದಾಗ, ಜನರಿಗೆ ಆಕ್ಸಿಜನ್ ಒದಗಿಸಲು ಸುಪ್ರೀಂ ಕೋರ್ಟ್ ಆದೇಶ ಮಾಡಬೇಕಾಯಿತು. ಇದು ದುರ್ದೈವ ಎಂದರು. ಕರೋನಾ ಲಸಿಕೆ ನೀಡಿಕೆಯಲ್ಲೂ ಸರ್ಕಾರ ಎಡವಿದ್ದು, ಇದರ ವಿಳಂಬಕ್ಕೆ ಕಾಂಗ್ರೆಸ್ ಕಾರಣ ಎನ್ನುವ ಬಿಜೆಪಿ ಆರೋಪದಲ್ಲಿ ಹುರುಳಿಲ್ಲ ಎಂದ ಅವರು, ಮಾಡಿರುವ ತಪ್ಪುಗಳನ್ನು ಬಿಜೆಪಿ ತಿದ್ದಿ ನಡೆದುಕೊಳ್ಳಬೇಕು ಎಂದರು.

ಕರೋನಾ ಸಂಕಷ್ಟದ ಕಾಲದಲ್ಲಿಯೂ ಡೀಸೆಲ್ ಪೆಟ್ರೋಲ್ ದರದ ಏರಿಕೆ ಜನರಿಗೆ ಶಾಪವಾಗಿದ್ದು, ಇದು ಇತರ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಗೂ ಕಾರಣವಾಗಿದೆ ಎಂದರು. ಇಂತಹಾ ಸ್ಥಿತಿಯಲ್ಲಿ ಮಾಧ್ಯಮಗಳೂ ಹಾಗೂ ಜನ ಸಾಮಾನ್ಯರು ಕಾಂಗ್ರೆಸ್ ಪಕ್ಷದ ಜೊತೆ ಧ್ವನಿಯಾಗಬೇಕಿದೆ ಎಂದವರು ಹೇಳಿದರು.

ಗುತ್ತಿಗೆದಾರರ ಹೆಸರಿನಲ್ಲಿ ಟೆಂಡರ್ ಪಡೆದು, ಅದನ್ನು ಪಕ್ಷದ ಕಾರ್ಯಕರ್ತರು ನಿರ್ವಹಿಸುವ ಘಟನೆಗಳು ಬಂಟ್ವಾಳ ಕ್ಷೇತ್ರದಲ್ಲಿ ಕಂಡು ಬರುತ್ತಿದೆ, ತನ್ನ ಅವಧಿಯಲ್ಲಿ ಇಂತಹಾ ಕೆಲಸವನ್ನು ತಾನು ಮಾಡಿಲ್ಲ ಎಂದರು. ತನ್ನ ಅಧಿಕಾರವಧಿಯಲ್ಲಿಯೂ ಅನೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸ್ಥಾಪನೆಯಾಗಿದೆ, ಒಂದೇ ದಿನ23 ಆರೋಗ್ಯ ಉಪ ಕೇಂದ್ರಗಳಿಗೆ ಶಂಕು ಸ್ಥಾಪನೆ ಮಾಡಿದ್ದೆ. ಆದರೆ ನಡೆಯುತ್ತಿರುವ ಅಪಪ್ರಚಾರ ಖೇದ ತಂದಿದೆ ಎಂದ ಅವರು,ರದ್ದು ಮಾಡಿರುವ ಬಿಪಿಎಲ್ ಕಾರ್ಡ್ ಅನ್ನು ವಾಪಾಸು ಕೊಡಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕು ಎಂದರು.

 

Related Posts

Leave a Reply

Your email address will not be published.