ಸಾಹಿತ್ಯ ಎನ್ನುವುದು ಜೀವನದ ಅನುಭವ ದ್ರವ್ಯ: ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಚಂದ್ರಕಲಾ ನಂದಾವರ

ಮಂಗಳೂರು: ಸಾಹಿತ್ಯದ ಬರವಣಿಗೆ ಮತ್ತು ಸಾಹಿತ್ಯದ ಓದು ಮನುಷ್ಯನೊಳಗೆ ತನ್ನನ್ನು ತಾನು ಗುರುತಿಸಿಕೊಳ್ಳುವಂತಹ ಮತ್ತು ಸಮಾಜದೊಳಗೆ ತನ್ನನ್ನು ತಾನು ಬೆಸೆದುಕೊಳ್ಳುವಂತಹ ಶಕ್ತಿ ಸಾಹಿತ್ಯಕ್ಕಿದೆ. ಸಾಹಿತ್ಯ ಎನ್ನುವುದು ಜೀವನದ ಅನುಭವಗಳ ದ್ರವ್ಯ ಎಂದು ಗಣಪತಿ ಪ.ಪೂ. ಕಾಲೇಜಿನ ವಿಶ್ರಾಂತ ಪ್ರಾಂಶುಪಾಲೆ ಚಂದ್ರಕಲಾ ನಂದಾವರ ಹೇಳಿದರು.

ಅವರು ನಗರದ ಸ್ಟೇಟ್ ಬ್ಯಾಂಕ್, ರಾವ್ ಆಂಡ್ ರಾವ್ ಸರ್ಕಲ್ ಬಳಿಯ ಸಹಕಾರಿ ಸಧನದಲ್ಲಿರುವ ಶಾಂತಿ ಪ್ರಕಾಶನ ಸಭಾಂಗಣದಲ್ಲಿಂದು ನಡೆದ ಕನ್ನಡದಲ್ಲಿ ಪ್ರಕಟಿತ ಮುಸ್ಲಿಮ್ ಬರಹಗಾರರ ಅತ್ತ್ಯುತ್ತಮ ಕೃತಿಗೆ ಮುಸ್ಲಿಮ್ ಲೇಖಕರ ಸಂಘವು ಕೊಡಮಾಡುವ 2019ನೇ ಸಾಲಿನ ರಾಜ್ಯಮಟ್ಟದ ದಿವಂಗತ ಯು.ಟಿ. ಫರೀದ್ ಸ್ಮರಣಾರ್ಥ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ನಾವು ಕೇವಲ ಅಕ್ಷರಸ್ಥರಾದರೆ ಸಾಕಾಗದು. ಹೃದಯವಂತರಾಗಬೇಕು. ಸಾಹಿತ್ಯ ಅದಕ್ಕೆ ವೇದಿಕೆ ಕಲ್ಪಿಸುತ್ತದೆ. ಸಾಹಿತ್ಯ ಎನ್ನುವುದು ಜೀವನದ ಅನುಭವಗಳ ದ್ರವ್ಯ. ತಂದೆ-ತಾಯಿಗಳು ವಿಚಾರವಂತರಾಗಬೇಕು. ಅವರು ವಿಚಾರವಂತರಾದರೆ ಮಕ್ಕಳು ಕೂಡ ತಮ್ಮ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಅದನ್ನು ಮುಮ್ತಾಝ್  ಬೇಗಮ್ ನಿರ್ವಹಿಸಿದ್ದಾರೆ. ಸ್ವಾತಂತ್ರ್ಯದ ಕಹಳೆ ಎಂಬ ಪುಸ್ತಕವನ್ನು ರಾಣಿ ಅಬ್ಬಕ್ಕಳ ಹೋರಾಟವನ್ನು ಮುಂದಿಟ್ಟುಕೊಂಡು ಅಚ್ಚುಕಟ್ಟಾಗಿ ಬಹಳ ಒಪ್ಪ ಓರಣದ ಮೂಲಕ ಓರ್ವ ಹೆಣ್ಣಾಗಿ ತನಗೆ ಏನು ಸ್ವಾತಂತ್ರ್ಯ ದಕ್ಕಿಸಿಕೊಳ್ಳಬೇಕು ಎಂಬ ಹೋರಾಟವನ್ನು ಗಮನದಲ್ಲಿಟ್ಟುಕೊಂಡು ಆ ಹೋರಾಟಕ್ಕೆ ಸಾಂಕೇತಿಕವಾಗಿ ಕೂಡ ಸ್ವಾತಂತ್ರ್ಯದ ಕಹಳೆ ಬಂದಿದೆ ಎಂದು ಮುಮ್ತಾಝ್  ಬೇಗಮ್ ರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡರು.

ದಿವಂಗತ ಮುಮ್ತಾಝ್ ಬೇಗಮ್’ರವರ ಕೃತಿ: ‘ಸ್ವಾತಂತ್ರ್ಯದ ಕಹಳೆ ಗೆ ಬಂದ ಪ್ರಶಸ್ತಿಯನ್ನು ಅವರ ಮಗ ಝಹೀರ್ ಅಹ್ಮದ್ ಸ್ವೀಕರಿಸಿ, ಮಾತನಾಡಿದರು. ತೀರ್ಪುಗಾರರಾಗಿ ಸಹಕರಿಸಿದ ಅಬ್ದುಲ್ ರಝಕ್  ಅನಂತಾಡಿ ಹಾಗೂ ಅಬುರ್ರಹ್ಮಾನ್ ಕುತ್ತೆತ್ತೂರು ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಹಿರಿಯ ಕವಿ ಮುಹಮ್ಮದ್ ಬಡ್ಡೂರು ಅವರ ನೇತೃತ್ವದಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಿತು. ಕವಿಗೋಷ್ಠಿಯಲ್ಲಿ ಪ್ರಶಾಂತಿ ಶೆಟ್ಟಿ ಇರುವೈಲು, ರೇಮಂಡ್ ಡಿ’ ಕುನ್ಹ, ಸಿಹಾನ ಬಿ.ಎಂ. ಕವನ ಮಂಡಿಸಿದರು. ಮುಸ್ಲಿಮ್ ಲೇಖಕರ ಸಂಘದ ಜೊತೆ ಕಾರ್ಯದರ್ಶಿ ಏ.ಕೆ. ಕುಕ್ಕಿಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಹೆಚ್. ಮಾತನಾಡಿದರು. ಸಲೀಂ ಬೋಳಂಗಡಿ ಸ್ತುತಿ ಗೀತೆ ಹಾಡಿದರು. ಅಲಿಕು೦ಞ ಪಾರೆ ಧನ್ಯವಾದಗೈದರು. ಸಂಘದ ಪ್ರ. ಕಾರ್ಯದರ್ಶಿ ಬಿ.ಎ.ಮುಹಮ್ಮದ್ ಅಲಿ ನಿರೂಪಿಸಿದರು.

Related Posts

Leave a Reply

Your email address will not be published.