ಹಿರಿಯ ವಿದ್ಯಾರ್ಥಿಗಳು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಹೆಮ್ಮೆಯ ಪಾಲುದಾರರು – ಡಾ. ಬಿ. ಯಶೋವರ್ಮ

ಎಸ್.ಡಿ.ಎಂ-ನ ಜಾಗತಿಕ ಮಟ್ಟದ ಹಿರಿಯ ವಿದ್ಯಾರ್ಥಿಗಳ ವೆಬಿನಾರ್ ಸರಣಿಗೆ ಚಾಲನೆಎಸ್.ಡಿ.ಎಂ ಸಂಸ್ಥೆ ಕೌಶಲ್ಯಯುತ ವಿದ್ಯಾರ್ಥಿಗಳು, ಸಂಶೋಧಕರು, ಅನ್ವೇಷಕರು ಹಾಗೂ ಚಿಂತನಶೀಲ ವ್ಯಕಿತ್ವಗಳನ್ನು ಸೃಷ್ಟಿಸುತ್ತದೆ. ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸಂಘ ಅದಕ್ಕೆ ಪೂರಕ ಶಕ್ತಿಯಾಗಬೇಕು. ನಮ್ಮೆಲ್ಲಾ ವಿದ್ಯಾರ್ಥಿಗಳ ಏಳಿಗೆ ಮತ್ತು ಸಾಧನೆಯ ಸಾಕ್ಷಿಗಳಾಗಬೇಕು ಎಂದು ಡಾ.ಬಿ ಯಶೋವರ್ಮ ಕರೆ ನೀಡಿದರು.

ಅವರು ಇತ್ತೀಚೆಗೆ ಉಜಿರೆಯ ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ಹಳೆ ವಿದ್ಯಾರ್ಥಿಗಳು, ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ನೇಮಕಾತಿ ಕೋಶ ಹಾಗೂ ’ಎಸ್.ಡಿ.ಎಂ – ಜಾಗತಿಕ ಮಟ್ಟದ ವಿದ್ಯಾರ್ಥಿ ಸಂಘ’ (ಗ್ಲೋಬಲ್ ಅಲ್ಯುಮ್ನಿ ಅಸೋಸಿಯೇಷನ್) ಆಯೋಜಿಸಿದ್ದ ವೆಬಿನಾರ್ ಸರಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ವೇಳೆ ತಮ್ಮ ಚಿಂತನೆಗಳನ್ನು ಹಂಚಿಕೊಂಡ ಡಾ. ಬಿ. ಯಶೋವರ್ಮ, ಜಾಗತಿಕ ಮಟ್ಟದ ಕೌಶಲ್ಯ ಹೊಂದಿದ ಉತ್ತಮ ನಾಗರಿಕರನ್ನು ರೂಪಿಸುವ ಧ್ಯೇಯ ನಮ್ಮ ಸಂಸ್ಥೆಯದ್ದು. ನಾವು ಸ್ಥಳೀಯ ಮಟ್ಟದಿಂದ ಈ ಪ್ರಯತ್ನವನ್ನು ಪ್ರಾರಂಭಿಸಿದರೂ, ಜಾಗತಿಕ ಮಟ್ಟದಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಬೆಂಬಲ ಅಗತ್ಯ. ಈ ಕಾರ್ಯವನ್ನು ಇಂದು ವಿದೇಶಗಳಲ್ಲಿರುವ ನಮ್ಮ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಮಾಡುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದರು.

ಕಳೆದ 50 ವರ್ಷಗಳಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಸಾವಿರಾರು ಹೆಮ್ಮೆಯ ವಿದ್ಯಾರ್ಥಿಗಳನ್ನು ರೂಪಿಸಿದೆ. ಇದು ನಮ್ಮ ಸಂಸ್ಥೆಗೆ ಅತ್ಯಂತ ಗೌರವ ತಂದಿರುವ ಸಾಧನೆ ಎಂದು ಅಭಿಪ್ರಾಯಪಟ್ಟರು.
ವೆಬಿನಾರ್ ಸರಣಿಯ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ಸತೀಶ್ಚಂದ್ರ ಎಸ್, ’ಕಾಲೇಜಿನ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಔದ್ಯೋಗಿಕ ಮಾಹಿತಿ, ತಂತ್ರಜ್ಞಾನದ ಬಗೆಗಿನ ಕೌಶಲ್ಯ ಹಾಗೂ ಅಭಿವೃದ್ಧಿಯ ಕುರಿತು ಮಾಹಿತಿ ನೀಡುವುದು ಇಂದಿನ ಅಗತ್ಯಗಳಲ್ಲೊಂದು. ಈ ಉದ್ದೇಶಗಳಿಂದ ಇಂದು ದೇಶ-ವಿದೇಶಗಳಲ್ಲಿರುವ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳೊಂದಿಗೆ ಆನ್‌ಲೈನ್ ಮೂಲಕ ಸಂವಾದ ಏರ್ಪಡಿಸುವ ಸಲುವಾಗಿ ಈ ಜಾಗತಿಕ ವೆಬಿನಾರ್ ಸರಣಿ ಆಯೋಜಿಸಲಾಗಿದೆ’ ಎಂದರು.

ಕಾರ್ಯಕ್ರಮದ ಕೊನೆಯಲ್ಲಿ ಎಸ್.ಡಿ.ಎಂ – ಜಾಗತಿಕ ಮಟ್ಟದ ವಿದ್ಯಾರ್ಥಿ ಸಂಘದ ಸದಸ್ಯರಾದ ಅಬ್ದುಲ್ ರಜಾಕ್ ವಂದಿಸಿದರು ಮತ್ತು ಉಜಿರೆ ಎಸ್.ಡಿ.ಎಂ ಕಾಲೇಜಿನ ಪ್ರಾಧ್ಯಾಪಕರಾದ ಹರೀಶ್ ಶೆಟ್ಟಿ ನಿರೂಪಿಸಿದರು.

 

Related Posts

Leave a Reply

Your email address will not be published.