ದ.ಕ. ಜಿಲ್ಲೆಯಲ್ಲಿ ಹಡೀಲು ಗದ್ದೆ ಉಳುಮೆಗೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಮೆಚ್ಚುಗೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 8೦೦೦ ಎಕರೆ ಹಡೀಲು ಭೂಮಿಯಿದ್ದು, ಅಲ್ಲಿ ಕೃಷಿಗೆ ಇರುವ ಕಾನೂನು ತೊಡಕುಗಳನ್ನು ನಿವಾರಿಸುವುದು ಹಾಗೂ ಸಹಕಾರ ಸಂಸ್ಥೆಯ ಮೂಲಕ ಕೃಷಿಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚಿಂತನೆ ಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.

ಅವರು ಕುಂಜತ್‌ಬೈಲ್ ಪ್ರದೇಶದ ಮರಕಡ ವಾರ್ಡಿನ ದಿ. ಕಾಂತಣ್ಣ ಶೆಟ್ಟಿ ಕೊಂರ್ಗಿಬೈಲ್ ಅವರ ಹಡೀಲು ಬಿಟ್ಟ ಜಮೀನಿನಲ್ಲಿ ಯಾಂತ್ರೀಕೃತ ಭತ್ತದ ಕೃಷಿಯ ಉದ್ಘಾಟನೆಗೆ ಆಗಮಿಸಿದ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಭ್ಯವಿರುವ ಹಡೀಲು ಭೂಮಿಯಲ್ಲಿ ಸುಮಾರು 3೦೦೦ ಎಕರೆ ಭೂಮಿಯಲ್ಲಿ ಈ ಬಾರಿ ಕೃಷಿಗೆ ಸ್ಥಳೀಯ ಶಾಸಕರು ನಿರ್ಧರಿಸಿದ್ದಾರೆ ಎಂದವರು ಹೇಳಿದರು. ಕರಾವಳಿಯು ಭೌಗೋಳಿಕವಾಗಿ ವಿಭಿನ್ನವಾಗಿರುವುದರಿಂದ ಇಲ್ಲಿನ ಕೃಷಿ ಚಟುವಟಿಕೆಗಳು ಕೂಡಾ ಇತರ ಜಿಲ್ಲೆಗಳಿಗಿಂತ ಭಿನ್ನವಾಗಿದೆ. ಹಾಗಾಗಿ ಇಲ್ಲಿನ ಕೃಷಿಗೆ ಪೂರಕವಾಗಿ ಸೂಕ್ತ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಸಮಗ್ರ ವರದಿಯನ್ನು ತಯಾರಿಸಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಬಿ.ಸಿ. ಪಾಟೀಲ್ ಹೇಳಿದರು. ಹೆಕ್ಟೇರೊಂದಕ್ಕೆ 75೦೦ ರೂ.ನಂತೆ ಭತ್ತ ಕೃಷಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹಧನವನ್ನು ನಿಲ್ಲಿಸಲಾಗಿದ್ದು, ಅದನು ಮುಂದುವರಿಸಲು ಹಾಗೂ ಬಂಟ್ವಾಳದ ರೈತ ಸಂಪರ್ಕ ಕೇಂದ್ರದಲ್ಲಿ ಈ ಬಾರಿ ಕೃಷಿ ಯಂತ್ರ ಧಾರೆ ಮಂಜೂರು ಮಾಡಲಾಗುವುದು ಎಂದು ಸಚಿವರು ಈ ಸಂದರ್ಭ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ರಾಜೇಶ್ ನಾಯ್ಕ್, ಉಮಾನಾಥ ಕೋಟ್ಯಾನ್, ಡಾ. ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ ಮೊದಲಾದವರು ಉಪಸ್ಥಿತರಿದ್ದರು.

 

Related Posts

Leave a Reply

Your email address will not be published.