ನವೀನ್ ಪಟ್ನಾಯಕ್ – ಹಾಕಿ ಕ್ರೀಡೆಯ ರಿಯಲ್ ಹಿರೋ

ಒಲಿಂಪಿಕ್ಸ್ ಹಾಕಿ ಪಂದ್ಯದಲ್ಲಿ ಭಾರತದ ಪುರಷರ ತಂಡ 41 ವರ್ಷಗಳ ಬಳಿಕ ಪದಕ ಗೆದ್ದಿದೆ. ಮಹಿಳಾ ಹಾಕಿ ತಂಡ ಕಂಚಿನ ಪದಕ ಗೆಲ್ಲುವ ಸಾಧ್ಯತೆಯ ನಡುವೆ ಕೊನೆ ಗಳಿಗೆಯಲ್ಲಿ ವೀರೋಚಿತ ಸೋಲೊಪ್ಪಿದರೂ ವನಿತೆಯರು ಭಾರತದ ಮಹಿಳಾ ಹಾಕಿಗೆ ಹೊಸದೊಂದು ಸಂಭ್ರಮವನ್ನು ತಂದಿದ್ದಾರೆ.

`ಗೆಲುವಿಗೆ ನೂರು ವಾರಿಸುದಾರರು` ಎಂಬಂತೆ ಭಾರತದ ಹಾಕಿ ತಂಡದ ಸಾಧನೆಗೂ ಈಗ ಹಲವು ವಾರಿಸುದಾರರು. ಈ ರೀತಿಯ ವಿದ್ಯಾಮಾನಗಳು ಯಾವುದೇ ಕ್ಷೇತ್ರದ ಗೆಲವಿನ ಸಂದರ್ಭದಲ್ಲೂ ಸಾಮಾನ್ಯ. ಆದರೆ ಕ್ರೀಡೆಯಂತಹ ವಿಚಾರದಲ್ಲಿ ಗೆಲುವಿನ ಪರೋಕ್ಷ ಸೂತ್ರದಾರರನ್ನು ತುಂಬಾ ದಿನ ಕತ್ತಲಲ್ಲಿ ಅಥವಾ ಮರೆಯಲ್ಲಿ ಇಡಲು ಸಾಧ್ಯವಿಲ್ಲ.

“ಸರೋವರದ ತೀರದಲ್ಲೊಬ್ಬ ಪಟ್ನಾಯಕ ” …

ಒಡಿಶಾದ ಚಿಲ್ಕಾ ಸರೋವರ ಜಗದ್ವಿಖ್ಯಾತ . ಈ ಸರೋವರದ ನಾಡಿನ ಮುಖ್ಯಮಂತ್ರಿ ನವೀನ್ ಪಟ್ನಾಯಿಕ್ ಒಂದು ಕಾಲದ ಹಾಕಿ ಸ್ಟಿಕ್ ಸರದಾರ. ತನ್ನ ರಾಜಕೀಯ ಪ್ರವೇಶಕ್ಕಿಂತ ಮೊದಲ ದಿನಗಳಲ್ಲಿ ನವೀನ್ ಪಟ್ನಾಯಿಕ್ ಅಂದಿನ ಒರಿಸ್ಸಾದ ಖ್ಯಾತ ಹಾಕಿ ಪ್ಲೇಯರ್. ರಾಜಕೀಯದಲ್ಲಿ ಸಕ್ರಿಯವಾದ ಬಳಿಕವೂ ಅವರ ಹಾಕಿ ಅಭಿಮಾನ ಕಡಿಮೆಯಾಗಿಲ್ಲ. ಯೌವನದ ದಿನಗಳ ಹಾಕಿಯ ಪಟ್ಟುಗಳು ಮುಂದೆ ಅವರಿಗೆ ರಾಜಕೀಯದಲ್ಲೂ ಹೊಸ ಹೊಸ ಪಟ್ಟುಗಳನ್ನು ಕಲಿಸಿರಬಹುದು, ಇದರ ಫಲವೇ ಇರಬಹುದು ಅಥವಾ ಅವರ ರಕ್ತದಲ್ಲಿ ಹಾಕಿಯ ಚಿತೋಹಾರಿ ರಕ್ತ ಹರಿಯುತ್ತಿರುವ ಕಾರಣವೇ ಇರಬಹುದು ಅವರಂತಹ ಕ್ರೀಡಾ ನಾಯಕ ಈ ದೇಶದಲ್ಲಿ ಇನ್ನೊಬ್ಬರಿಲ್ಲ.  
ಇತ್ತೀಚಿನ ವರ್ಷಗಳ ತನಕವೂ ಭಾರತದ ಹಾಕಿ ತಂಡಗಳಿಗೆ ಪ್ರಾಯೋಜಕರು, ಜಾಹೀರಾತುದಾರರು ಅನ್ನುವವರು ಇರಲೇ ಇಲ್ಲ. ಆಟಗಾರರೇ ತಮಗೆ ಬೇಕಾದ ಜೆರ್ಸಿಗಳನ್ನು , ಹಾಕಿ ಸ್ಟಿಕ್‍ಗಳನ್ನು ಖರೀದಿಸಿಕೊಳ್ಳಬೇಕಾಗಿತ್ತು. ದೇಶದ ಎಲ್ಲೆಡೆಯ ಹಾಕಿ ತಂಡಗಳ ಇಂತಹ ಕಷ್ಟವನ್ನು ಕರಗಿಸಿ ತಂಡಗಳು ಸ್ವಾಭೀಮಾನದಿಂದ ಮುನ್ನುಗ್ಗುವಂತೆ ಮಾಡಿದ್ದೇ ಒಡಿಸ್ಸಾದ ಮುಖ್ಯಮಂತ್ರಿ ನವೀನ್ ಪಟ್ನಾಯಿಕ್.

2014 ರಲ್ಲಿ ಒಡಿಸ್ಸಾದ ಕಳಿಂಗ ಹಾಕಿ ಸ್ಟೇಡಿಯಂಗೆ ಹೊಸ ರೂಪ ಕೊಟ್ಟವರು ನವೀನ್ ಪಟ್ನಾಯಕ್. ಈ ರೀತಿಯಾಗಿ ಕಳಿಂಗ ಸ್ಟೇಡಿಯಮನ್ನು ನವೀಕರಿಸುವಾಗ ಪಟ್ನಾಯಕ್ ಅವರ ಮನದಲ್ಲಿ ಮಹತ್ತರವಾದ ಉದ್ದೇಶ ಕೂಡ ಇತ್ತು. ಅಷ್ಟರಲ್ಲೇ ಚಾಂಪಿಯನ್ ಟ್ರೋಫಿಯನ್ನು ಸಂಘಟಿಸಲು ಮುಂದಾದರು, ಕಳಿಂಗ ಲ್ಯಾನ್ಸರ್ಸ್ ಎಂಬ ಹಾಕಿ ಪ್ರೀಮಿಯರ್ ಲೀಗ್ ತಂಡವನ್ನು ಹುಟ್ಟುಹಾಕಿದರು. ಈ ತಂಡಗಳಿಗೆ ಸಾರ್ವಜನಿಕರ ರಂಗದ ಉದ್ದಿಮೆಗಳ ಪ್ರಾಯೋಜಕತ್ವವನ್ನು ಕೊಡಿಸಿದರು. ಮುಂದೆ ಚಾಂಪಿಯನ್ ಟ್ರೋಪಿ ಕೂಡ ಯಶಸ್ಸಿಯಾಗಿ ನಡೆಯಿತು.
2018 ರಲ್ಲಿ ದೇಶದ ಇತರ ರಾಜ್ಯಗಳು ಅಚ್ಚರಿ ಪಡುವಂತ ನಿರ್ಧಾರವನ್ನು ನವೀನ್ ಪಟ್ನಾಯಕ್ ತೆಗೆದುಕೊಂಡರು. ಆ ವರ್ಷ ಅವರು ಪುರುಷರ ಹಾಗೂ ಮಹಿಳೆಯರ ಹಾಕಿ ತಂಡಗಳಿಗೆ 150 ಕೋಟಿ ರೂಪಾಯಿಗಳ ಅನುದಾನ ನೀಡಿದರು. ಇದು ರಾಜ್ಯವೊಂದು ಕ್ರೀಡಾ ತಂಡವೊಂದಕ್ಕೆ ನೀಡಿದ ಅತೀ ದೊಡ್ಡ ಅನುದಾನವಾಗಿದೆ. ಅಷ್ಟು ಮಾತ್ರವಲ್ಲದೆ ಪುರುಷರ ಮತ್ತು ಮಹಿಳಾ ತಂಡಗಳ ಮುಂದಿನ ಐದು ವರ್ಷಗಳ ಪ್ರಾಯೋಜಕತ್ವಕ್ಕೂ ವ್ಯವಸ್ಥೆ ಮಾಡಿಕೊಟ್ಟರು.

2018 ರ ಎಫ್ ಐ ಎಚ್ ಪುರುಷರ ಹಾಕಿ ವಿಶ್ವಕಪ್ ಕೂಟವನ್ನು ಒಡಿಸಾದಲ್ಲೇ ಸಂಘಟಿಸಲು ಪಟ್ನಾಯಕ್ ಅವರೇ ಕಾರಣಕರ್ತರು. ಇಷ್ಟು ಮಾತ್ರವಲ್ಲದೆ ವಿಶ್ವ ಲೀಗ್ , ಪ್ರೊ ಲೀಗ್ , ಒಲಿಂಪಿಕ್ ಅರ್ಹತಾ ಪಂದ್ಯ ಕೂಟವನ್ನು ಕೂಡ ಒಡಿಸ್ಸಾ ರಾಜ್ಯ ಸಂಘಟಿಸಿತು. ಅಷ್ಟಕ್ಕೆ ಪಟ್ನಾಯಕ್ ವಿರಾಮ ಪಡೆದಿಲ್ಲ , 356 ಕೋಟಿ ರೂಪಾಯಿ ಮೊತ್ತದದಲ್ಲಿ ಭುವನೇಶ್ವರ- ರೂರ್ಕೆಲದಲ್ಲಿ ಹಾಕಿ ಕ್ರೀಡೆಗೆ ಬೇಕಾದ ಎಲ್ಲಾ ಮೂಲ ಸೌಕರ್ಯ , ತರಬೇತಿ , ಕ್ರೀಡಾಂಗಣ, ಕ್ರೀಡಾ ಹಾಸ್ಟೇಲ್ ನಿರ್ಮಾಣಕ್ಕೆ ಹೆಜ್ಜೆ ಇರಿಸಿದರು, ಇದೀಗ ರೂರ್ಕೆಲಾದಲ್ಲಿ ಜಾಗತಿಕ ಮಟ್ಟದ ಹಾಕಿ ಸ್ಟೇಡಿಯಮ್ ಸಿದ್ಧವಾಗುತ್ತಿದೆ.
ರಾಜಕಾರಣಿಯೊಬ್ಬರಿಗೆ ಕ್ರೀಡೆಯ ಬಗ್ಗೆ ನಿಜವಾದ ಕಾಳಜಿ ಹಾಗೂ ಅಭಿಮಾನವಿದ್ದರೆ ಆತ ಎಂತಹ ಅದ್ಭುತವನ್ನು ಸಾಧಿಸಬಹುದೆನ್ನುವುದನ್ನು ಪಟ್ನಾಯಕ್ ಸಾಧಿಸಿ ತೋರಿಸಿದ್ದಾರೆ , ಅವರು ಪಟ್ನಾಯಕ ಮಾತ್ರವಲ್ಲ ನಿಜವಾದ ಕ್ರೀಡಾ ನಾಯಕ.

# ಟಿ.ಕೆ

Related Posts

Leave a Reply

Your email address will not be published.