ಪುತ್ತೂರಿನಲ್ಲಿ ಆರೋಗ್ಯ ರಕ್ಷಾ ಸಮಿತಿ ವಾರ್ಷಿಕ ಮಹಾಸಭೆ

ಪುತ್ತೂರು: ಕೋವಿಡ್ ಬಂದ ಮೇಲೆ ಸಾರ್ವಜನಿಕರಲ್ಲಿ ಸರಕಾರಿ ಆಸ್ಪತ್ರೆಯ ಬಗ್ಗೆ ಹೆಚ್ಚು ವಿಶ್ವಾಸ ಬರುವಂತೆ ನಮ್ಮ ವೈದ್ಯರು ಮಾಡಿದ್ದಾರೆ ಈ ನಿಟ್ಟಿನಲ್ಲಿ ಅವರಿಗೆ ಮೊದಲಾಗಿ ಅಭಿನಂದನೆ ಸಲ್ಲಿಸಬೇಕು. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅತೀ ಕಡಿಮೆ ಶೇ.1.94 ಪಾಸಿಟಿವ್ ರೇಟ್ ಇರುವುದು ನಮ್ಮ ತಾಲೂಕಿನಲ್ಲಿ ಈ ನಿಟ್ಟನಲ್ಲಿ ಮುಂಬರುವ ದಿನಗಳಲ್ಲಿ ಶಾಲೆಯನ್ನು ಆರಂಭಿಸುವ ಕುರಿತು ಚರ್ಚಿಸಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ತಾಲೂಕು ಆರೋಗ್ಯ ಇಲಾಖೆಯ ಕಚೇರಿ ಸಭಾಂಗಣದಲ್ಲಿ  ನಡೆದ ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ವಾರ್ಷಿಕ ಮಹಾಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ದ.ಕ.ಜಿಲ್ಲಾ ಕೋವಿಡ್ ನಿರ್ವಹಣಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳು ಪುತ್ತೂರು ತಾಲೂಕಿನಲ್ಲಿ ಅತೀ ಕಡಿಮೆ ಕೋವಿಡ್ ಪಾಸಿಟಿವಿಟಿ ರೇಟ್ ಕುರಿತು ಉಲ್ಲೇಖಿಸಿದ್ದಾರೆ. ಶೇ.2 ಪಾಸಿಟಿವಿಟಿ ರೇಟ್‌ನಿಂದ ಕೆಳಗೆ ಬಂದರೆ ಅಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತು ರಾಜ್ಯ ಸರಕಾರ ತಿಳಿಸಿದೆ. ಈ ಕುರಿತು ಮುಂದಿನ ದಿನಗಳಲ್ಲಿ ಚರ್ಚಿಸಲಾಗುವುದು ಮತ್ತು ಪಾಸಿಟಿವ್ ರೇಟ್ ಸೊನ್ನೆಗೆ ತಲುಪಬೇಕೆಂಬುದು ನಮ್ಮ ಗುರಿ. ಈ ನಿಟ್ಟಿನಲ್ಲಿ ನಗರ ಪ್ರದೇಶದಲ್ಲ ಆದಷ್ಟು ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದು ಅಗತ್ಯ. ಈ ನಿಟ್ಟನಲ್ಲಿ ನಗರಸಭೆ ಮತ್ತು ಪೊಲೀಸ್ ಇಲಾಖೆ ಮಾಸ್ಕ್ ಧರಿಸಿದವರಿಗೆ ದಂಡ ವಿಧಿಸುವ ಕಾರ್ಯ ಮಾಡಬೇಕೆಂದರು. ಖಾಸಗಿ ವ್ಯವಸ್ಥೆಗಿಂತ ಹೆಚ್ಚು ಸರಕಾರಿ ಆಸ್ಪತ್ರೆಲ್ಲಿನ ಸೇವೆ ಮತ್ತು ಸೌಲಭ್ಯಕ್ಕೆ ಒತ್ತು ಕೊಟ್ಟು ಪುತ್ತೂರು ಉಪವಿಭಾಗದಲ್ಲಿ 17 ವೈದ್ಯರನ್ನು ಹೊಂದಿರುವ ಒಳ್ಳೆಯ ಆಸ್ಪತ್ರೆ ಪುತ್ತೂರು ಸರಕಾರಿ ಆಸ್ಪತ್ರೆಯಾಗಿದೆ. ಕೋವಿಡ್ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಇಲ್ಲದ ರೀತಿಯಲ್ಲಿ ಬಂದಂತಹ ಎಲ್ಲಾ ರೋಗಿಗಳಿಗೆ ಚಿಕಿತ್ಸೆ ಕೊಟ್ಟು ಅವರ ಆರೋಗ್ಯ ಜೀವ ರಕ್ಷಣೆ ಮಾಡಿದ ಕೀರ್ತಿ ವೈದ್ಯರದ್ದು ಎಂದರು. ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆಗೆ ವಿವಿಧ ರೀತಿಯಲ್ಲ ದಾನಿಗಳ ಮೂಲಕ ಕೊಡುಗೆಯಾಗಿ ನೀಡಿದವರನ್ನು ಸ್ಮರಿಸಿದ ಅವರು ವಾರದೊಳಗೆ ಆಕ್ಸಿಜನ್ ಪ್ಲಾಂಟ್ ಲೋಕಾರ್ಪಾಣೆ ಆಗಬೇಕೆಂದರು.

ವೈದ್ಯರ ಆತ್ಮಸ್ಥೈರ್ಯ ಕುಂದಿಸುವ ಕಾರ್ಯಕ್ಕೆ ಖಂಡನಾ ನಿರ್ಣಯ:
ಸರಕಾರಿ ಆಸ್ಪತ್ರೆ ಕೇವಲ ಬಿಪಿಎಲ್, ಆಯುಷ್ಮಾನ್‌ವರಿಗೆ ಮಾತ್ರ ಸೀಮಿತವಾಗದೆ ಎಲ್ಲಾ ನಾಗರಿಕರು ಬಂದು ಇಲ್ಲಿ ವೈದ್ಯಕೀಯ ಸೌಲಭ್ಯವನ್ನು ಪಡೆಯಲು ಅಭಿವೃದ್ದಿ ಮಾಡುವುದು ಮತ್ತು ಇಲ್ಲಿ ಉತ್ತಮ ಸೇವೆ ಮಾಡಿದ ಎಲ್ಲಾ ವೈದ್ಯರು, ಆರೋಗ್ಯಾಧಿಕಾರಿಗಳ, ಸಿಬ್ಬಂದಿಗಳ ಆತ್ಮಸ್ಥೈರ್ಯ ಕುಂದಿಸುವ ಕೆಲಸ ಮಾಡುವುದು ಗಮನಕ್ಕೆ ಬಂದಿದೆ. ಈ ಕುರಿತು ನಾವು ಖಂಡನಾ ನಿರ್ಣಯ ಕೈಗೊಳ್ಳಬೇಕೆಂದ ಶಾಸಕರು ಆಸ್ಪತ್ರೆಯ ಒಳ್ಳೆಯ ವಿಚಾರವನ್ನು ಅಭಿನಂದಿಸಿ, ಸಣ್ಣಪುಟ್ಟ ವ್ಯತ್ಯಾಸಗಳಿದ್ದರೆ ಅದನ್ನು ಶಾಸಕರ, ಸಹಾಯಕ ಆಯುಕ್ತರ, ತಹಶೀಲ್ದಾರ್‌ರವರ ಅಥವಾ ಆಸ್ಪತ್ರೆಯ ವೈದ್ಯಾಧಿಕಾರಿಗಳ, ಸಮಿತಿ ಸದಸ್ಯರ ಗಮನಕ್ಕೆ ತನ್ನಿ ಅದು ಬಿಟ್ಟು ಎಲ್ಲೋ ಮಾರ್ಗದಲ್ಲಿ ಹೇಳುವುದು ಸರಿಯಲ್ಲ ಎಂದರು. ಆರೋಗ್ಯ ರಕ್ಷಾ ಸಮಿತಿ ಸದಸ್ಯ ರಾಜೇಶ್ ಬನ್ನೂರು ವೈದ್ಯರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಆಗಬಾರದು ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು. ಆಸ್ಪತ್ರೆಯ ಶವ ಮೊಬೈಲ್ ಶೀಥಾಲಿಕರಣ ವ್ಯವಸ್ಥೆಯನ್ನು ದೂರದ ಊರಿಗೆ ಕೊಟ್ಟಾಗ ಅದರ ಕಷ್ಟ ನಷ್ಟವನ್ನೂ ಗಮನಿಸುವಂತೆ ಸಲಹೆ ನೀಡಿದರು.

ವಿದ್ಯುತ್ ಬಿಲ್ ಪೆಂಡಿಂಗ್ !
ಸರಕಾರಿ ಆಸ್ಪತ್ರೆಯ ವಿದ್ಯುತ್ ಬಿಲ್ ಸುಮಾರು 7 ಲಕ್ಷ ಬಾಕಿ ಇರುವ ಕುರಿತು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಆಶಾಜ್ಯೋತಿ ಅವರು ಶಾಸಕರ ಗಮನಕ್ಕೆ ತಂದರು. ಮೆಸ್ಕಾಂ ಇಂಜಿನಿಯರ್ ಶಿಲ್ಪಾ ಶೆಟ್ಟಿಯವರು ಈ ಕುರಿತು ಮಾಹಿತಿ ನೀಡಿದರು. ಶಾಸಕರು ಮಾತನಾಡಿ ಸರಕಾರಿ ಆಸ್ಪತ್ರೆಗೆ ಸೋಲಾರ್ ಗ್ರಿಡ್ ಪವರ್ ಅಳವಡಿಸುವ ಕುರಿತು ಚರ್ಚಿಸಿದರು. ಈಗಾಗಲೇ ಆಸ್ಪತ್ರೆಯಲ್ಲಿ ಸೋಲಾರ್ ಸಿಸ್ಟಮ್ ಇದ್ದರೂ ಅದರ ಕಿಲೋ ವ್ಯಾಟ್ ಕಡಿಮೆ ಇದೆ ಎಂದು ಮೆಸ್ಕಾಂ ಇಂಜಿನಿಯರ್ ಶಾಸಕರ ಗಮನಕ್ಕೆ ತಂದರು.ತಹಸೀಲ್ದಾರ್ ರಮೇಶ್ ಬಾಬು, ಪೌರಾಯುಕ್ತ ಮಧು ಎಸ್ ಮನೋಹರ್, ತಾಲ್ಲೂಕು ಆರೋಗ್ಯಧಿಕಾರಿ ಡಾಕ್ಟರ್ ದೀಪಕ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಡಾ. ಕೃಷ್ಣಪ್ರಸನ್ನ, ವಿದ್ಯಾ ಗೌರಿ, ರಫೀಕ್ ದರ್ಬೆ, ರಾಜೇಶ್ ಬನ್ನೂರು, ಕೃಷ್ಣ ನಾಯ್ಕ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.