ಕೇವಲ 30 ರೂಪಾಯಿಗೆ ಕೊಲೆ

ಮಂಗಳೂರು: ಹಣತೆ ವ್ಯಾಪಾರಕ್ಕಾಗಿ ಮಂಗಳೂರು ನಗರಕ್ಕೆ ಬಂದಿದ್ದ ತಮಿಳುನಾಡಿನ ಸೇಲಂ ನಿವಾಸಿ ಮಾಯವೇಳ್ ಪೆರಿಯಸಾಮಿ (52) ಎಂಬವರನ್ನು ಹಣದಾಸೆಗೆ ಕೊಲೆಗೈದ ಪ್ರಕರಣ ತಡವಾಗಿ ಬಂದಿದ್ದು, ಈ ಸಂಬಂಧ ಆರೋಪಿ ಹೂವಿನ ಹಡಗಲಿ ನಿವಾಸಿ ರವಿ ಯಾನೆ ವಕೀಲ್ ನಾಯ್ಕ್ (42) ಎಂಬಾತನನ್ನು ಬಂದರು ಪೊಲೀಸರು ಬಂಧಿಸಿದ್ದಾರೆ.ಕೊಲೆಯಾದ ಮಾಯವೇಳ್ ಪೆರಿಯಸಾಮಿ ಅವರ ಮೃತ ದೇಹದ ಅವಶೇಷಗಳಾದ ತಲೆಬುರುಡೆ, ಮೂಳೆ ಇತ್ಯಾದಿಗಳು ಕೂಳೂರು ಮೈದಾನದ ಬಳಿ ಪತ್ತೆಯಾಗಿವೆ.

ಹಣತೆಯನ್ನು ಮಾಯಾವೇಳ್‌ ಪೆರಿಯಸಾಮಿ ಬಳಿಯೇ ಖರೀದಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಾಯಾವೇಳ್ ಪೆರಿಯಸಾಮಿ ಹಣತೆಯ ರಖಂ ವ್ಯಾಪಾರಿಯಾದ ಕಾರಣ ಅವರ ಬಳಿ ಸಾಕಷ್ಟು ಹಣವಿರಬಹುದು ಎಂದು ಭಾವಿಸಿದ ಆರೋಪಿ ರವಿ ನಗರದ ವೈನ್‌ಶಾಪ್‌ನಲ್ಲಿ ಮದ್ಯ ಸೇವಿಸಿ 200 ದೀಪ ಬೇಕಾಗಿದೆ ಎಂದು ನಂಬಿಸಿಕೊಂಡು ಕೂಳೂರಿನ ಮೈದಾನಕ್ಕೆ ಕರೆದುಕೊಂಡು ಹೋಗಿದ್ದ.

ಹಾಗೆ ಮಾಯಾವೇಳ್ ಪೆರಿಯಸಾಮಿಗೆ ಮದ್ಯಪಾನ ಕುಡಿಸಿ ಬಳಿಕ ಆರೋಪಿ ರವಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಎನ್ನಲಾಗಿದೆ. ಕೊಲೆಗೈದ ಬಳಿಕ ಆರೋಪಿಗೆ ಹಣತೆ ವ್ಯಾಪಾರಿ ಮಾಯಾವೇಳ್ ಪೆರಿಯಸಾಮಿಯ ಬಳಿ ಸಿಕ್ಕಿದ್ದು ಕೇವಲ 30 ರೂ. ಮಾತ್ರ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ಮಾಯಾವೇಳ್ ಪೆರಿಯಸಾಮಿ ನಾಪತ್ತೆಯಾಗಿರುವ ಬಗ್ಗೆ ಅವರ ಪತ್ನಿ ಬಂದರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ರವಿವಾರ ಕೂಳೂರಿನ ಮೈದಾನದ ಬಳಿ ಮಾನವನ ತಲೆಬುರುಡೆ, ಮೂಳೆ ಇತ್ಯಾದಿ ಸಿಕ್ಕಿದ್ದವು.ತನಿಖೆ ನಡೆಸಿದಾಗ ಇದು ಮಾಯಾವೇಳ್ ಪೆರಿಯಸಾಮಿ ಅವರದ್ದೆಂದು ತಿಳಿದು ಬಂತು.

ಬಂದರು ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್ ರಾಘವೇಂದ್ರ ನೇತೃತ್ವದ ತಂಡವು ಆರೋಪಿ ರವಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ನಡೆಸಿರುವ ಬಗ್ಗೆ ಬಾಯ್ಬಿಟ್ಟ ಎಂದು ಪೊಲೀಸರು ತಿಳಿಸಿದ್ದಾರೆ.

Related Posts

Leave a Reply

Your email address will not be published.