ಬಿ.ಸಿ.ರೋಡಿನಲ್ಲಿ ಕನ್ನಡ ರಥಕ್ಕೆ ಸಂಭ್ರಮದ ಸ್ವಾಗತ
ಕನ್ನಡ ಭಾಷೆ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಈ ಕುರಿತು ಎಲ್ಲರೂ ಪಾಲ್ಗೊಳ್ಳಬೇಕು ಎಂಬ ನಿಟ್ಟಿನಲ್ಲಿ ಕನ್ನಡ ಜ್ಯೋತಿ ರಥ ನಾಡಿನಾದ್ಯಂತ ಸಂಚರಿಸುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್ ಹೇಳಿದರು.
ಬಿ.ಸಿ.ರೋಡಿನ ಮೇಲ್ಸೇತುವೆ ಬಳಿ ಕನ್ನಡ ಜ್ಯೋತಿ ರಥ ಶುಕ್ರವಾರ ಬೆಳಗ್ಗೆ ಆಗಮಿಸಿದ ಸಂದರ್ಭ, ಭುವನೇಶ್ವರಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ವಿಧ್ಯುಕ್ತವಾಗಿ ಸ್ವಾಗತಿಸಿದ ಬಳಿಕ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಸಮ್ಮೇಳನ ಮೂಲಕ ನಾಡು, ನುಡಿಯ ಇತಿಹಾಸ, ವರ್ತಮಾನಗಳ ಕುರಿತು ಅಭ್ಯಸಿಸಬಹುದಲ್ಲದೆ, ಕನ್ನಡ ಭಾಷೆ, ಸಂಸ್ಕೃತಿ ಕುರಿತು ಅರಿಯುವ ಕಾರ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮಂಡ್ಯದಲ್ಲಿ ಡಿಸೆಂಬರ್ 20ರಿಂದ ಮೂರು ದಿನಗಳವರೆಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿ 87 ದಿನಗಳ ಕಾಲ ಸಂಚರಿಸುತ್ತಿರುವ ರಥ ಬಂಟ್ವಾಳಕ್ಕೆ ಆಗಮಿಸಿದೆ ಎಂದರು.
ಬಂಟ್ವಾಳ ತಹಸೀಲ್ದಾರ್ ಅರ್ಚನಾ ಡಿ. ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಭಾಷಾಭ್ಯುದಯಕ್ಕೆ ರಥ ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು. ಬಂಟ್ವಾಳ ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ ಲೊರೆಟ್ಟೊ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬೇಬಿ ಕುಂದರ್, ಕನ್ನಡ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ಆರ್. ಪೂಜಾರಿ, ಬಂಟ್ವಾಳ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಉಪತಹಸೀಲ್ದಾರ್ ಗಳಾದ ನವೀನ್ ಬೆಂಜನಪದವು, ನರೇಂದ್ರನಾಥ ಮಿತ್ತೂರು, ಕನ್ನಡ ಸಾಹಿತ್ಯ ಪರಿಷತ್ ಗೌರವ ಪ್ರಧಾನ ಕಾರ್ಯದರ್ಶಿ ರಮಾನಂದ ನೂಜಿಪ್ಪಾಡಿ, ಜಿಲ್ಲಾ ಕಾರ್ಯಕಾರಿ ಸದಸ್ಯ ಪೂವಪ್ಪ ನೇರಳಕಟ್ಟೆ, ಪಾಣೆಮಂಗಳೂರು ಹೋಬಳಿ ಅಧ್ಯಕ್ಷ ಪಿ.ಮಹಮ್ಮದ್, ಪದಾಧಿಕಾರಿಗಳಾದ ಸಂಕಪ್ಪ ಶೆಟ್ಟಿ, ಅಶೋಕ್ ಶೆಟ್ಟಿ ಸರಪಾಡಿ, ರವೀಂದ್ರ ಕುಕ್ಕಾಜೆ, ಶಿವಶಂಕರ ಕೈಕುಂಜೆ, ಸುಭಾಶ್ಚಂದ್ರ ಜೈನ್, ಅಬುಬಕ್ಕರ್ ಅಮ್ಮುಂಜೆ, ಉಮೇಶ್ ಕುಮಾರ್ ವೈ, ಉಮ್ಮರ್ ಮಂಚಿ, ರಜನಿ ಚಿಕ್ಕಯ್ಯಮಠ, ತಾಲೂಕು ಪಂಚಾಯಿತಿ ವ್ಯವಸ್ಥಾಪಕ ಪ್ರಕಾಶ್, ಕಂದಾಯ ನಿರೀಕ್ಷಕ ಜನಾರ್ದನ್ ಜೆ, ವಿಜಯ್ ಆರ್., ತಾಲೂಕು ಕಚೇರಿ ಸಿಬ್ಬಂದಿ ಸೀತಾರಾಮ್ ಕಮ್ಮಾಜೆ, ತಾಲೂಕು ಪಂಚಾಯಿತಿ ಕಾರ್ಯದರ್ಶಿಗಳಾದ ಅಶೋಕ್ ಕುಮಾರ್ ಬರಿಮಾರ್, ರಮೇಶ್ ಮುಡಿಪು ಉಪಸ್ಥಿತರಿದ್ದರು.