ಪ್ರವಾಹ ಪೀಡಿತ ಪ್ರದೇಶದ ಶಾಶ್ವತ ಪರಿಹಾರಕ್ಕೆ ಕ್ರಮ: ಶಾಸಕ ಕಾಮತ್

ಮಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಗೆ ನಗರದ ಕೆಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿ ಜನಜೀವನ ಅಸ್ತವ್ಯಸ್ತಗೊಂಡ ಹಿನ್ನಲೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ರವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು.

ಈ ವೇಳೆ ಎಕ್ಕೂರು, ತೋಚಿಲ ಕಟ್ಟಪುಣಿ, ರಾಷ್ಟ್ರೀಯ ಹೆದ್ದಾರಿ ಬಳಿಯ ವೈದ್ಯನಾಥ ನಗರ, ಜಪ್ಪಿನಮೊಗರುವಿನ ಗಣೇಶ ನಗರ, ರಾಜಕಾಲುವೆ ಸೇರುವ ನೇತ್ರಾವತಿ ತೀರದ ಕಡೇಕಾರು ಪ್ರದೇಶ, ಮೊದಲಾದ ಪ್ರದೇಶಗಳ, ನೆರೆ ಪರಿಸ್ಥಿತಿಗೆ ಕಾರಣ, ತುರ್ತಾಗಿ ನಡೆಯಬೇಕಿರುವ ಕಾರ್ಯ, ಭವಿಷ್ಯದಲ್ಲಿ ಪ್ರವಾಹ ಮರುಕಳಿಸದಂತೆ ಪರಿಹಾರ ಕ್ರಮ ಇತ್ಯಾದಿ ವಿಷಯಗಳ ಬಗ್ಗೆ ಸ್ಥಳೀಯರ ಅಭಿಪ್ರಾಯದ ಮೇರೆಗೆ ಕೂಡಲೇ ಕ್ರಮಕೈಗೊಳ್ಳುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ವಿಶೇಷವಾಗಿ ಎಕ್ಕೂರಿನ ಧ್ರುವ ರೆಸಿಡೆನ್ಸಿ ಸಮೀಪದ ರಾಜಕಾಲುವೆ ಬಳಿ ಇರುವ ಬೃಹತ್ ಖಾಸಗಿ ಕಾಂಪೌಂಡ್ ಕುಸಿದಿದ್ದೇ ಜಪ್ಪಿನಮೊಗರು, ಗಣೇಶ ನಗರ ಪರಿಸರ, ದೊಂಪದ ಬಲಿ, ಹೊಯ್ಗೆ ರಾಶಿ, ಮುಳುಗಡೆಯಾಗಲು ಕಾರಣವಾಗಿದೆ, ಕೆಲವೆಡೆ ಇದೇ ಮೊದಲ ಬಾರಿ ನೆರೆ ಬಂದಿದ್ದರೆ, ಉಳಿದೆಡೆ ಈ ಹಿಂದೆಯೂ ಸಮಸ್ಯೆ ತಲೆದೋರಿತ್ತು, ಇಲ್ಲಿದ್ದ ಗದ್ದೆ ಪ್ರದೇಶಗಳಲ್ಲೇ ಅತೀ ಹೆಚ್ಚು ಮನೆ ನಿರ್ಮಾಣಗೊಂಡಿರುವುದರಿಂದ ನೀರು ಸರಾಗವಾಗಿ ಹರಿಯಲು ಅಡಚಣೆಯಾಗಿ ಈ ಪರಿಸ್ಥಿತಿ ಉಂಟಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡರು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಮಾರು 75 ಕೋಟಿ ವಿಶೇಷ ಅನುದಾನದ ಮೂಲಕ ಕ್ಷೇತ್ರದ ಹಲವು ರಾಜಕಾಲುವೆಗಳಿಗೆ ತಡೆಗೋಡೆ ನಿರ್ಮಾಣ ಮಾಡಿದ್ದರಿಂದ ಹೆಚ್ಚಿನ ಹಾನಿಯಾಗುವುದು ತಪ್ಪಿದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕ್ಷೇತ್ರಕ್ಕೆ ಬಿಡಿಗಾಸು ದೊರೆತಿಲ್ಲ, ಹೀಗಾಗಿ ಸಣ್ಣಪುಟ್ಟ ತುರ್ತುಕ್ರಮಕ್ಕೂ ಹಿನ್ನಡೆಯಾಗಿರುವುದು ಅತೀ ದೊಡ್ಡ ಸಮಸ್ಯೆಯಾಗಿದೆ. ಹಾಗಿದ್ದೂ ಕೂಡಲೇ ಜಿಲ್ಲಾಧಿಕಾರಿಗಳ ಸಹಿತ ಪಾಲಿಕೆ ಅಧಿಕಾರಿಗಳೊಂದಿಗೆ ತುರ್ತುಸಭೆ ನಡೆಸಿ ತಾತ್ಕಾಲಿಕ ಪರಿಹಾರ ಕೈಗೊಂಡು, ಮುಂಬರುವ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ಶಾಶ್ವತ ಪರಿಹಾರಕ್ಕೆ ಸರ್ಕಾರದ ಮೇಲೆ ಒತ್ತಡ ಹೇರುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕಾರ್ಯಪಾಲಕ ಎಂಜಿನಿಯರ್ ಹಾಗೂ ಪಾಲಿಕೆಯ ಉಪ ಆಯುಕ್ತರಾದ (ಅಭಿವೃದ್ಧಿ) ನರೇಶ್ ಶೆಣೈ, AEE ರಾಜೇಶ್, ಸಣ್ಣ ನೀರಾವರಿ ಇಲಾಖೆಯ ರಾಕೇಶ್, ಪಿಡಬ್ಲ್ಯೂ ಇಂಜಿನಿಯರ್ ಸೂರಜ್, ಗ್ರಾಮ ಲೆಕ್ಕಾಧಿಕಾರಿ ರೂಪಾ, ಸೇರಿದಂತೆ ಬಿಜೆಪಿ ಪ್ರಮುಖರಾದ ವೀಣಾ ಮಂಗಳ, ಭರತ್ ಕುಮಾರ್, ಕಿರಣ್ ರೈ, ಸುರೇಂದ್ರ ರಾವ್ ಹಾಗೂ ಕಾರ್ಯಕರ್ತರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.