ಪೊಲೀಸ್ ಅಧಿಕಾರಿಗಳ ವಿರುದ್ಧ ಆರೋಪಕ್ಕೆ ದಾಖಲೆ ಒದಗಿಸಿದ್ರೆ ಕ್ರಮ : ಎಡಿಜಿಪಿ ಆಲೋಕ್ ಕುಮಾರ್
ಪೊಲೀಸರ ಮೇಲೆ ಲೋಕಾಯುಕ್ತಕ್ಕೆ ದೂರು ನೀಡಿ ಭ್ರಷ್ಟಾಚಾರ ಆರೋಪ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆ ಮತ್ತು ನಿಖರ, ಪ್ರಾಮಾಣಿಕ ಮಾಹಿತಿಯೊಂದಿಗೆ ದೂರು ನೀಡಿದಲ್ಲಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆಲೋಕ್ ಕುಮಾರ್ ಹೇಳಿದ್ದಾರೆ.ಮಂಗಳೂರು ಪೊಲೀಸ್ ಆಯುಕ್ತರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿರುವ ಬಗ್ಗೆ ಮಾಧ್ಯಮದಿಂದ ಗಮನ ಸೆಳೆದಾಗ, ಯಾವುದೇ ಆರೋಪಗಳಿದ್ದರೂ ನಿಖರ ಮತ್ತು ನಿರ್ದಿಷ್ಟ ದೂರುಗಳನ್ನು ನೀಡಬೇಕು. ಭ್ರಷ್ಟಾಚಾರ ಆರೋಪದ ಬಗ್ಗೆ ನಿಖರ ದಾಖಲೆ ನೀಡಿದರೆ ಕ್ರಮ ಕೈಗೊಳ್ತೇವೆ ಎಂದು ಹೇಳಿದ್ದಾರೆ. ಆರೋಪಗಳನ್ನು ಅನೇಕರು ಮಾಡಿದ್ದಾರೆ, ಅದು ಪ್ರಚಾರಕ್ಕೂ ಇರಬಹುದು. ಯಾರೋ ಸಾಮಾಜಿಕ ಜಾಲತಾಣದಲ್ಲಿ ಬರೀತಾರೆ ಅಂತ ಆ ಬಗ್ಗೆ ಕ್ರಮ ಕೈಗೊಳ್ಳಲು ಆಗಲ್ಲ. ನಿಖರ ನಿರ್ದಿಷ್ಟ ದೂರು ನೀಡಲಿ. ನಿರ್ದಿಷ್ಟ ದೂರು, ನಿಖರ ಮಾಹಿತಿ, ಭ್ರಷ್ಟಾಚಾರವನ್ನು ತೋರಿಸಿ ದೂರು ನೀಡಲಿ. ಯಾರೇ ಇದ್ದರೂ ಕ್ರಮ ತಗೊತೀವಿ ಎಂದು ಹೇಳಿದ್ದಾರೆ.
ಪೊಲೀಸ್ ಆಯುಕ್ತರು ಮತ್ತು ಉಳ್ಳಾಲ ಇನ್ಸ್‍ಪೆಕ್ಟರ್ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿರುವ ಬಗ್ಗೆ ಕೇಳಿದ್ದಕ್ಕೆ, ಈ ಬಗ್ಗೆ ಲೋಕಾಯುಕ್ತ ತನಿಖೆ ಮಾಡ್ತಾ ಇದೆ. ಅವರು ಯಾವ ನಿರ್ದೇಶನ ನೀಡ್ತಾರೋ, ಆ ಪ್ರಕಾರ ನಾವು ಕ್ರಮ ಕೈಗೊಳ್ಳಲಿದ್ದೇವೆ ಎಂದರು. ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮು ಗಲಭೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅಲೋಕ್ ಕುಮಾರ್, ಈ ಬಗ್ಗೆ ಪೆÇಲೀಸ್ ಇಲಾಖೆಗೆ ಮೊಹಲ್ಲಾ ಕಮಿಟಿ ಸಭೆ ನಡೆಸಲು ಸೂಚಿಸಲಾಗಿದೆ. ಆದ್ರೆ ಆ ಕೆಲಸ ಸಮರ್ಪಕ ಜಾರಿ ಆಗ್ತಾ ಇಲ್ಲ. ಇದರಲ್ಲಿ ಸಂಪೂರ್ಣ ಪರಿಹಾರ ಆಗದಿದ್ದರೂ ಅಲ್ಪ ಪ್ರಮಾಣದ ಕ್ರಮಕ್ಕೆ ಸಹಕಾರಿ. ಈ ಬಗ್ಗೆ ಮತ್ತೆ ಸೂಚನೆ ನೀಡುತ್ತೇನೆ. ಹೆಚ್ಚಿನ ರಾತ್ರಿ ಪಾಳಿ ಕರ್ತವ್ಯ ನಡೆಸಲು ಸೂಚಿಸುತ್ತೇನೆ ಎಂದರು.