ಶಾಸಕ ಹರೀಶ್ ಪೂಂಜಾ ಮೇಲೆ ತಲವಾರು ದಾಳಿ ತಾವೇ ಹೆಣೆದ ಕಟ್ಟುಕಥೆ : ಕಾಂಗ್ರೆಸ್ ರಾಜ್ಯ ವಕ್ತಾರ ಅಮಲ ರಾಮಚಂದ್ರ ಆರೋಪ

ಪುತ್ತೂರು:ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಮಂಗಳೂರಿನಲ್ಲಿ ತನ್ನ ಮೇಲೆ ತಲವಾರು ದಾಳಿ ಆಗಿದೆ ಎಂದು ಹೇಳಿರುವುದು ಸ್ವತಃ ಶಾಸಕರ ಕಟ್ಟುಕಥೆಯಾಗಿದೆ. ಇದು ಜನರಲ್ಲಿ ಗೊಂದಲ, ಆಘಾತ ಉಂಟುಮಾಡುವ ಹುಚ್ಚಾಟವಾಗಿದ್ದು, ಈ ಘಟನೆಯನ್ನು ಪುತ್ತೂರು ಬ್ಲಾಕ್ ಕಾಂಗ್ರೆಸ್ ತೀವೃವಾಗಿ ಖಂಡಿಸುತ್ತದೆ ಎಂದು ಕಾಂಗ್ರೆಸ್ ರಾಜ್ಯ ವಕ್ತಾರ ಅಮಲ ರಾಮಚಂದ್ರ ಹೇಳಿದ್ದಾರೆ.

ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಸೋಲಿನ ಭೀತಿಯಲ್ಲಿ ಈ ಕಟ್ಟುಕಥೆಯನ್ನು ಹೆಣೆದಿದ್ದಾರೆ ಎಂದು ಅವರು ಆರೋಪಿಸಿದರು.

ನಾನು ಹಿಂದುತ್ವ, ರಾಷ್ಟ್ರೀಯವಾದಿ ಶಾಸಕರ ಎಂದು ಹೇಳಿಕೊಳ್ಳುತ್ತಿರುವ ಹರೀಶ್ ಪೂಂಜಾ ಅವರು ಈ ರೀತಿಯ ಹೇಳಿಕೆಗಳನ್ನು ಬೋರ್ಡ್ ಮೂಲಕ ತನ್ನ ಕುತ್ತಿಗೆಗೆ ಹಾಕಿಕೊಳ್ಳಬೇಕಿತ್ತು. ಅದನ್ನು ಬಿಟ್ಟು ಜನರಲ್ಲಿ ಗೊಂದಲ ಸೃಷ್ಟಿ ಮಾಡುವ ನಾಟಕ ಬೇಕಿತ್ತಾ ಎಂದು ಪ್ರಶ್ನಿಸಿದ ಅವರು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿರುವ ಈ ಘಟನೆಯ ಸಮಗ್ರ ತನಿಖೆ ನಡೆಸಿ ಶಾಸಕ ಹರೀಶ್ ಪೂಂಜಾ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಟೋಲ್‍ಗೇಟ್‍ಗಳಲ್ಲಿ ಅವೈಜ್ಞಾನಿಕವಾಗಿ ಹಣ ವಸೂಲು ನಡೆಯುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ಟೋಲ್ ಮುಕ್ತಗೊಳಿಸಬೇಕು ಎಂದು ಸುರತ್ಕಲ್ ಟೋಲ್‍ಗೇಟ್ ಬಳಿ ಮಹಿಳಾ ಹೋರಾಟಗಾರ್ತಿಯೊಬ್ಬರ ನೇತೃತ್ವದಲ್ಲಿ ನಡೆದ ಹೋರಾಟವನ್ನು ಹತ್ತಿಕ್ಕುವ ನೆಪದಲ್ಲಿ ಮಧ್ಯರಾತ್ರಿಯಲ್ಲಿ ಪೊಲೀಸರು ಅವರ ಮನೆಗೆ ದಾಳಿ ನಡೆಸಿ ನೋಟೀಸು ನೀಡಿರುವುದು ಖಂಡನೀಯವಾಗಿದೆ. ಈ ಘಟನೆಯಲ್ಲಿ ಜಿಲ್ಲೆಯ ಶಾಸಕರು, ಸಂಸದರು ಪೊಲೀಸರನ್ನು ಛೂ ಬಿಟ್ಟಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಪಕ್ಷ ಹೋರಾಟದ ಮೂಲಕ ಜನಾಂದೋಲನ ನಡೆಸುತ್ತಿರುವವರ ಬೆಂಬಲಕ್ಕೆ ಸದಾ ನಿಂತಿರುತ್ತದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ರಿಯಾಝ್ ಉಪ್ಪಳ, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಕ್ಟರ್ ಪಾಯಸ್, ಸಾಮಾಜಿಕ ಜಾಲತಾಣದ ಅಧ್ಯಕ್ಷ ಸಿದ್ದಿಕ್ ಸುಲ್ತಾನ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.