ಆ.14 ರಂದು ಸ್ವಾತಂತ್ರ್ಯದ ಸಂರಕ್ಷಣೆಗಾಗಿ ಹಾಗೂ ಕಾರ್ಮಿಕ ಹಕ್ಕುಗಳ ಉಳಿವಿಗಾಗಿ ಅಹೋರಾತ್ರಿ ಧರಣಿ ಸತ್ಯಾಗ್ರಹ
ದೇಶದ ಸ್ವಾತಂತ್ರ್ಯ ,ಸಮಗ್ರತೆ, ಸಾರ್ವಭೌಮತ್ವದ ರಕ್ಷಣೆಗಾಗಿ, ಕಾರ್ಮಿಕ ವರ್ಗದ ಹಕ್ಕುಗಳ ಉಳಿವಿಗಾಗಿ ಹಾಗೂ ಕಾರ್ಪೊರೇಟ್ ಪರ ನೀತಿಗಳನ್ನು ಹಿಮ್ಮೆಟ್ಟಿಸಲು ಆಗಸ್ಟ್ 14 ರಂದು ಸಂಜೆ 5ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ನಗರದ ಪುರಭವನದ ಮುಖ್ಯ ದ್ವಾರದ ಬಳಿಯಲ್ಲಿ ಸಾಮೂಹಿಕ ಧರಣಿ ಸತ್ಯಾಗ್ರಹವನ್ನು ನಡೆಸಲು CITU ದ.ಕ.ಜಿಲ್ಲಾ ಸಮಿತಿಯು ನಿರ್ಧರಿಸಿದ್ದು,CITU ಅಖಿಲ ಭಾರತ ತೀರ್ಮಾನದ ಮೇರೆಗೆ ದೇಶ ಉಳಿಸಿ, ಜನತೆಯ ಬದುಕನ್ನು ರಕ್ಷಿಸಿ ಎಂಬ ಘೋಷಣೆಯೊಂದಿಗೆ ಈ ಸತ್ಯಾಗ್ರಹ ನಡೆಯಲಿದೆ ಎಂದು CITU ತಿಳಿಸಿದೆ.
ಕಾರ್ಮಿಕ ವರ್ಗದ ಪ್ರಮುಖ ಕಾನೂನುಗಳನ್ನು 4 ಸಂಹಿತೆಯನ್ನಾಗಿ ಜಾರಿ ಮಾಡಲು ಹೊರಟ ಕೇಂದ್ರದ NDA ಸರಕಾರ ತನ್ನ ಮೊದಲ 100 ದಿನಗಳಲ್ಲಿ ಕಾರ್ಪೊರೇಟ್ ಕಂಪೆನಿಗಳ ಹಿತ ಕಾಯಲು ತುದಿಗಾಲಲ್ಲಿ ನಿಂತಿದೆ.ದೇಶದ ಆಸ್ತಿಗಳನ್ನು ರಾಷ್ಟ್ರೀಯ ನಗದೀಕರಣ ಪೈಪ್ ಲೈನ್ ಯೋಜನೆಯ ಹೆಸರಿನಲ್ಲಿ ಕಾರ್ಪೊರೇಟ್ ತೆಕ್ಕೆಗೆ ಒಪ್ಪಿಸಲು ಹೊರಟಿದೆ. ದೇಶದ ಅರ್ಥ ವ್ಯವಸ್ಥೆಯನ್ನೇ ಬುಡಮೇಲುಗೊಳಿಸಿದ ಕೇಂದ್ರ ಸರಕಾರ ಜನತೆಯ ಬದುಕನ್ನು ಸರ್ವನಾಶಗೊಳಿಸುತ್ತಿದೆ.ಈ ನಿಟ್ಟಿನಲ್ಲಿ ದೇಶವನ್ನು ಉಳಿಸುವ ಮೂಲಕ ಜನತೆಯ ಬದುಕನ್ನು ರಕ್ಷಿಸಲು ಕಾರ್ಮಿಕ ವರ್ಗ ಸನ್ನದ್ಧವಾಗಬೇಕೆಂದು CITU ದೇಶಕ್ಕೆ ಸಂದೇಶ ನೀಡಿದೆ.
ಸಾಮೂಹಿಕ ಧರಣಿ ಸತ್ಯಾಗ್ರಹದ ಉದ್ಘಾಟನೆಯನ್ನು CITU ದ.ಕ.ಜಿಲ್ಲಾಧ್ಯಕ್ಷರಾದ ಜೆ.ಬಾಲಕ್ರಷ್ಣ ಶೆಟ್ಟಿಯವರು ನೆರವೇರಿಸಲಿದ್ದು,ಬಳಿಕ ಜಿಲ್ಲೆಯ ರೈತ,ಕಾರ್ಮಿಕ, ವಿದ್ಯಾರ್ಥಿ ಯುವಜನ ಮಹಿಳಾ ದಲಿತ ಆದಿವಾಸಿ ಸಂಘಟನೆಗಳ ಮುಖಂಡರು ಈ ದೇಶಪ್ರೇಮಿ ಸತ್ಯಾಗ್ರಹವನ್ನು ಬೆಂಬಲಿಸಿ ಮಾತನಾಡಲಿದ್ದಾರೆ.ಹಾಗೂ ಸಾಂಸ್ಕೃತಿಕ ಸಂಘಟನೆ ಸಮುದಾಯದ ಸಂಗಾತಿಗಳು ಕ್ರಾಂತಿಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ. ಮಧ್ಯರಾತ್ರಿ 12 ಗಂಟೆಗೆ ಧ್ವಜಾರೋಹಣ ಮಾಡುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುವುದು ಎಂದು CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ತಿಳಿಸಿದ್ದಾರೆ.