ಜ.27 ರಿಂದ 29 ರ ವರೆಗೆ ಅಯೋಧ್ಯೆಯಲ್ಲಿ “ಸಾವು, ಮರುಹುಟ್ಟು ಮತ್ತು ಪುನರ್ಜನ್ಮ”ದ ಜಿಜ್ಞಾಸೆ ಕುರಿತು ಸಮ್ಮೇಳನ

ಜ.27 ರಿಂದ 29 ರ ವರೆಗೆ ಅಯೋಧ್ಯೆಯಲ್ಲಿ “ಸಾವು, ಮರುಹುಟ್ಟು ಮತ್ತು ಪುನರ್ಜನ್ಮ”ದ ಜಿಜ್ಞಾಸೆ ಕುರಿತು ಸಂತರು, ಧಾರ್ಮಿಕ ಚಿಂತಕರು, ವೈದ್ಯಕೀಯ ವಲಯದ ತಜ್ಞರ ಚಿಂತನ – ಮಂಥನ: ಕೆ.ಆರ್. ನಗರದ ಯಡತೊರೆ ಮಠದ ಮಾರ್ಗದರ್ಶನದಲ್ಲಿ ಅಂತರರಾಷ್ಟ್ರೀಯ ಸಮ್ಮೇಳನ

ಬೆಂಗಳೂರು, ಜ, 17; ಜಗದ್ಗುರು ಶಂಕರಾಚಾರ್ಯ ದಕ್ಷಿಣಾಂನಯ ಶೃಂಗೇರಿ ಶಾರಾದಾ ಪೀಠದ ಆಶೀರ್ವಾದದೊಂದಿಗೆ ಮೈಸೂರಿನ ಕೆ.ಆರ್. ನಗರದ ಯಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಶಂಕರ ಭಾರತಿ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ “ಶ್ರೀ ಶಂಕರಾಚಾರ್ಯ ವಾಂಗ್ಮಯ್ಯ” ಭಾರತೀ ಸೇವಾ ಸಂಸ್ಥೆಗಳಿಂದ ಜನವರಿ 27 ರಿಂದ 29ರ ವರೆಗೆ “ಸಾವು, ಮರು ಹುಟ್ಟು ಮತ್ತು ಪುನರ್ಜನ್ಮ” ಕುರಿತ ಅಂತರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ.

ಸಮ್ಮೇಳನದಲ್ಲಿ “ಸಾವಿನ ಸನಿಹದ ಅನುಭವ”, “ಹುಟ್ಟು ಮತ್ತು ಮರಣದ ಮಾನಸಿಕ ದೃಷ್ಟಿಕೋನ” ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ವಿವಿಧ ವಲಯಗಳ ಪ್ರಮುಖರ ಚಿಂತನ – ಮಂಥನ ನಡೆಯಲಿದೆ.

ವೈಜ್ಞಾನಿಕ, ಆಧ್ಯಾತ್ಮಿಕ ಗೋಷ್ಠಿಗಳು ಮತ್ತು ತಜ್ಞರ ಗುಂಪು ಚರ್ಚೆಗಳ ಮೂಲಕ ಮನುಕುಲದ ಒಳಿತಿಗಾಗಿ ಮತ್ತು ಕಲ್ಯಾಣಕ್ಕಾಗಿ ಸ್ಪಷ್ಟ ಸಂದೇಶ ನೀಡುವುದು ಸಮ್ಮೇಳನದ ಉದ್ದೇಶವಾಗಿದೆ. ಸಂತರು, ದಾರ್ಶನಿಕರು, ವೈದ್ಯರು, ವಿಜ್ಞಾನಿಗಳು, ಪ್ರಾಧ್ಯಾಪಕರು, ಚಿಂತಕರು ಒಳಗೊಂಡಂತೆ ದೇಶದ ಪ್ರಮುಖರು ಮನುಷ್ಯರ ಮನಸ್ಸನ್ನು ಕಾಡುತ್ತಿರುವ ಈ ವಿಚಾರದ ಬಗ್ಗೆ ಚರ್ಚಿಸಲು ಒಗ್ಗೂಡುತ್ತಿದ್ದಾರೆ.

ಅಯೋಧ್ಯೆಯಲ್ಲಿ ಆಚಾರ್ಯ ಮಹಾಮಂಡಲೇಶ್ವರ, ಮಂಡಲೇಶ್ವರರು ಮತ್ತಿತರ ಸಂತರು ಶ್ರೀ ಶಂಕರಾಚಾರ್ಯ ವಂಗಮಯ ಸೇವಾ ಪ್ರತಿಷ್ಠಾನವನ್ನು ಸ್ಥಾಪಿಸಿದ್ದಾರೆ. ಇದು ಜಾತಿ, ಮತ, ಲಿಂಗ ಭೇದವಿಲ್ಲದೇ ಎಲ್ಲರಿಗೂ ಶಂಕರಾಚಾರ್ಯರ “ಸರ್ವಾತ್ಮಭವ”ದ ಸಂದೇಶವನ್ನು ಪ್ರಚಾರ ಮಾಡುತ್ತಿದೆ. ವಾರಣಸಿ ಲಖನೌ, ನವದೆಹಲಿ, ಮುಂಬೈ, ಹರಿದ್ವಾರ, ಹೈದರಾಬಾದ್, ಬೆಂಗಳೂರು ಮುಂತಾದ ಸ್ಥಳಗಳಲ್ಲಿ ಆದಿ ಶಂಕರಾಚಾರ್ಯರು ರಚಿಸಿದ ಸ್ತೋತ್ರಗಳ ಗುಂಪು ಪಠಣ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

“ಸಾವು, ಮರು ಹುಟ್ಟು ಮತ್ತು ಪುನರ್ಜನ್ಮ” ಕುರಿತು ಈ ಭೂಮಿಯ ಮೇಲಿನ ಜೀವನವನ್ನು ಅರ್ಥಮಾಡಿಕೊಳ್ಳಲು ವಿಭಿನ್ನ ಸಂಸ್ಕೃತಿ ಮತ್ತು ನಾಗರಿಕತೆಗಳ ಬಗ್ಗೆ ಆಸಕ್ತಿದಾಯಕ ಚಿಂತಕರಿಂದ ವಿಚಾರ ಮಂಡನೆಯಾಗಲಿದೆ. ವಿಜ್ಞಾನ, ತತ್ವಜ್ಞಾನ, ಸಮಾಜ ವಿಜ್ಞಾನ ಮತ್ತು ಜ್ಞಾನದ ಹಲವಾರು ಶಾಖೆಗಳು ಈ ವಿಚಾರದ ಬಗ್ಗೆ ವ್ಯವಹರಿಸಿದೆ ಮತ್ತು ಈ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿದೆ. ಈ ಸಮ್ಮೇಳನ ವಿಜ್ಞಾನ ಮತ್ತು ವೇದಾಂತ ತಜ್ಞರು, ವೈದ್ಯಕೀಯ ವೃತ್ತಿಪರರು, ಮನೋ ವೈದ್ಯರು, ಮನೋವಿಜ್ಞಾನಿಗಳು, ಸಮಾಜ ಶಾಸ್ತ್ರಜ್ಞರು, ಆಯುರ್ವೇದ ಮತ್ತು ವೇದಾಂತ ತತ್ವಜ್ಞಾನಿಗಳನ್ನು ಒಂದೇ ವೇದಿಕೆಗೆ ತರುತ್ತಿದೆ.

ಲಖನೌದ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಮುಕ್ತಿನಾಥಾನಂದಾಜಿ ಸಮ್ಮೇಳನದ ಗೌರವಾಧ್ಯಕ್ಷರಾಗಿದ್ದು, ಮಹಾವೀರ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಆಚಾರ್ಯ ಕುನಾಲ್ ಕಿಶೋರೆಜಿ ಭಾಗವಹಿಸುತ್ತಿರುವ ಸಮ್ಮೇಳನದಲ್ಲಿ ನಿಮ್ಹಾನ್ಸ್ ನ ವಿಶ್ರಾಂತ ಕುಲಪತಿ, ಪದ್ಮಶ್ರೀ ಡಾ. ಬಿ.ಎನ್. ಗಂಗಾಧರ್, ನಿಮ್ಹಾನ್ಸ್ ನ ಔಷಧ ವಿಭಾಗದ ಪ್ರಾಧ್ಯಾಪಕರು, ದೆಹಲಿಯ ಏಮ್ಸ್ ನ ವಿವಿಧ ವಿಭಾಗದ ತಜ್ಞರು, ವೈದ್ಯಕೀಯ ಸಂಸ್ಥೆಗಳು, ಮತ್ತಿತರ ವಲಯದ ತಜ್ಞರು ಭಾಗವಹಿಸಲಿದ್ದಾರೆ.

ಜನವರಿ 27 ರಂದು ಬೆಂಗಳೂರಿನ ವ್ಯಾಸ ವಿವಿ ಕುಲಪತಿ ಡಾ. ಎಚ್.ಆರ್. ನಾಗೇಂದ್ರ ಉದ್ಘಾಟನಾ ಭಾಷಣ ಮಾಡಲಿದ್ದು, ಯಡತೊರೆ ಯೋಗಾನಂದೇಶ್ವರ ಮಠದ ಶಂಕರ ಭಾರತಿ ಮಹಾ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ.

ಜ.28 ರಂದು ವೈಜ್ಞಾನಿಕ ಗೋಷ್ಠಿಗಳು ನಡೆಯಲಿದ್ದು, ಡಾ. ಗಜಾನನ್ ಕೇಳ್ಕರ್ ಅವರ “ಗರ್ಭ ಸಂಸ್ಕಾರ್”, ಪ್ರಜ್ಞಾಪೂರ್ವಕ ಅಧ್ಯಯನ ಕೇಂದ್ರದ ಡಾ. ಪಿ.ಎನ್. ರವೀಂದ್ರ ಅವರಿಂದ “ಜೀವನ ಮತ್ತು ಪ್ರಜ್ಞೆಯ ನರ ವಿಜ್ಞಾನದ ದೃಷ್ಟಿಕೋನ, ಬೆಂಗಳೂರಿನ ನಿಮ್ಹಾನ್ಸ್ ನಿಂದ “ಜೀವನದ ಮರುಹುಟ್ಟು ಮತ್ತು ಕಲ್ಪನೆಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ. “ಹುಟ್ಟು ಮತ್ತು ಮರಣದ ಮಾನಸಿಕ ದೃಷ್ಟಿಕೋನ” ಕುರಿತು ಮುಂಬೈನ ಡಾ. ತೃಪ್ತಿ ಜೈನ್ ಮತ್ತು ಬೆಂಗಳೂರಿನ ಡಾ. ವಿಜಯ್ ಸಾಯಿ ಅವರು ಮಾತನಾಡಲಿದ್ದಾರೆ. “ಸಾವಿನ ಸನಿಹದ ಅನುಭವ” ಕುರಿತು ಹೈದ್ರಾಬಾದ್ ನ ಅಪಲೋ ಸಂಸ್ಥೆಯ ಡಾ. ನರೇಶ್ ವಡ್ಲಮನಿ ಕುತೂಹಲಕರ ಸಂಗತಿಗಳನ್ನು ಅನಾವರಣಗೊಳಿಸಲಿದ್ದಾರೆ. ಆಧ್ಯಾತ್ಮಕ ಗೋಷ್ಠಿಗಳಲ್ಲಿ ಮದ್ರಾಸ್ ಸಂಸ್ಕೃತ ಕಾಲೇಜಿನ ಡಾ. ಮಣಿ ದ್ರಾವಿಡ್ ಶಾಸ್ತ್ರಿ ಮತ್ತು ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಡಾ.ಕೆ.ಎಸ್. ಸತೀಶ್ ಅವರು “ಹುಟ್ಟಿನ ಮರಣ ಮತ್ತು ಪುನರ್ಜನ್ಮದ ಕುರಿತು ಉಪನಿಷತ್ತಿನ ದೃಷ್ಟಿಕೋನ” ಕುರಿತು ಮಾತನಾಡಲಿದ್ದಾರೆ. ಬ್ರಹ್ಮಸೂತ್ರದ ದೃಷ್ಟಿಕೋನ ಕುರಿತು ಮದ್ರಾಸ್ ಸಂಸ್ಕೃತ ಕಾಲೇಜಿನ ಡಾ. ಮಹೇಶ್ವರಂ ಮತ್ತು ಡಾ. ಎಂ.ಎಲ್.ನರಸಿಂಹ ಮೂರ್ತಿ, ಭಗವದ್ಗೀತೆಯಲ್ಲಿ ಹುಟ್ಟು, ಸಾವು ಮತ್ತು ಪುನರ್ಜನ್ಮ ಕುರಿತು ಮೈಸೂರಿನ ಶ್ರೀಪಾದ್ ಭಟ್ ಮಾತನಾಡಲಿದ್ದಾರೆ. ಇನ್ನೂ ಹಲವು ತಜ್ಞರು ವಿವಿಧ ವಿಷಯಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ.

Related Posts

Leave a Reply

Your email address will not be published.