ಬಿ.ಸಿ ರೋಡಿಗೆ ಆಗಮಿಸಿದ ಭಾವೈಕ್ಯತಾ ಜಾಥ

ಬಂಟ್ವಾಳ: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನವಿರೋಧಿ ಧೋರಣೆಯಿಂದ ರೈತರು ಹಾಗೂ ಬಡಜನರ ಬದುಕು ಸಂಕಷ್ಟದಲ್ಲಿದ್ದು, ಒಗ್ಗಟ್ಟಾಗಿ ಎದುರಿಸಲಿದ್ದು ಶಕ್ತಿ ಪ್ರದರ್ಶನ ಮಾಡಲಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಹೇಳಿದ್ದಾರೆ. ಜನಾಂದೋಲನಗಳ ಮಹಾಮೈತ್ರಿ ನೇತೃತ್ವದಲ್ಲಿ ಸಂಯುಕ್ತ ಹೋರಾಟ ಕರ್ನಾಟಕದ ಸಹಕಾರದೊಂದಿಗೆ ಮಂಗಳೂರಿನಿಂದ ಆರಂಭಗೊಂಡು ಬೆಂಗಳೂರಿಗೆ ಸಾಗುವ ಭಾವೈಕ್ಯತಾ ಜಾಥ ಶನಿವಾರ ಬೆಳಗ್ಗೆ ಬಿ.ಸಿ.ರೋಡ್ ಗೆ ಆಗಮಿಸಿತು.

ಈ ಸಂದರ್ಭ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಅಧಿಕಾರದ ಮೇಲಷ್ಟೇ ಅಲ್ಲ, ಜನರ ಸಂಪತ್ತಿನ ಮೇಲೆ ಆಸೆ ಹುಟ್ಟಿದ್ದು, ಉದ್ಯಮಪತಿಗಳಿಗೆ ಖಾಸಗಿಕರಣ ನೆಪದಲ್ಲಿ ಸರಕಾರಿ ಸ್ವಾಮ್ಯದ ವಿಮಾನ ನಿಲ್ದಾಣ, ವಿದ್ಯುತ್ ಉತ್ಪಾದನೆ, ಬಂದರುಗಳನ್ನು ವಹಿಸುವ ಮೂಲಕ ಅವರನ್ನು ಶ್ರೀಮಂತರನ್ನಾಗಿಸುತ್ತಿದ್ದಾರೆ. ಆರ್ಥಿಕವಾಗಿ ಬಲಶಾಲಿಗಳಾಗಿ ಉದ್ಯಮಪತಿಗಳಾಗುತ್ತಿದ್ದರೆ, ದೇಶದ ಜಿಡಿಪಿ ಕುಸಿಯುವ ಹಂತದಲ್ಲಿದೆ. ಅದೇ ರೀತಿ ರಾಜ್ಯದಲ್ಲಿ ಜನಪರ ಸರಕಾರ ಆಡಳಿತ ಮಾಡುತ್ತಿಲ್ಲ, ಬದಲಾಗಿ ಖರೀದಿ ಸರಕಾರ ಆಡಳಿತ ಮಾಡುತ್ತಿದ್ದು, ಜಾತಿ, ಧರ್ಮಗಳನ್ನು ಒಡೆಯುವ ಆಧಾರದಲ್ಲಿ ಕೆಲಸ ಮಾಡುತ್ತಿದೆ ಎಂದರು. ಕಳೆದ ಎಂಟು ವರ್ಷಗಳಲ್ಲಿ 1 ಲಕ್ಷ ಕೋಟಿ ರೂ ಸಾಲವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮಾಡಿದ್ದು, ಕ್ರಿಮಿನಲ್ ಗಳು, ಭ್ರಷ್ಟಾಚಾರಿಗಳು ಬಿಜೆಪಿಗೆ ಬಂದರೆ ಅವರು ಸರಿಯಾಗುತ್ತಾರೆ ಎಂಬ ಭಾವನೆ ಮೂಡುವಂತೆ ಆಡಳಿತ ನಡೆಯುತ್ತಿದೆ ಎಂದರು.

ಈ ಸಂದರ್ಭ ವಿವಿಧ ಸಂಘಟನೆಗಳ ಮುಖಂಡರಾದ ಶಿವಪ್ರಕಾಶ್, ಕೆ.ವಿ.ಭಟ್, ಓಸ್ವಾಲ್ಡ್ ಫೆರ್ನಾಂಡೀಸ್, ಅಮಾನುಲ್ಲ ಖಾನ್, ಬಿ.ಶೇಖರ್, ರಾಮಣ್ಣ ವಿಟ್ಲ, ಸೇಸಪ್ಪ ಬೆದ್ರಕಾಡು ಮೊದಲಾದವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಪ್ರೇಮನಾಥ ಶೆಟ್ಟಿ ಬಾಳ್ತಿಲ, ಪ್ರಭಾಕರ ದೈವಗುಡ್ಡೆ, ಸುರೇಶ್ ಕುಮಾರ್ ಬಂಟ್ವಾಳ, ಮೋನಪ್ಪ ಗೌಡ, ಆದಿತ್ಯನಾರಾಯಣ ಕೊಲ್ಲಾಜೆ, ಸತೀಶ್ ಅರಳ, ಸದಾನಂದ ಶೀತಲ್, ಮೋಹನ ಶೆಟ್ಟಿ ಪಂಜಿಕಲ್ಲು, ಮಾರಪ್ಪ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು. ತುಳಸೀದಾಸ್ ವಿಟ್ಲ ಕಾರ್ಯಕ್ರಮ ನಿರ್ವಹಿಸಿದರು

Related Posts

Leave a Reply

Your email address will not be published.