ಬಹರೈನ್ : ಅಗಲಿದ ವಿದುಷಿ ಅಸ್ತಿಕಾ ಸುನಿಲ್ ಶೆಟ್ಟಿ ಯವರಿಗೆ ನುಡಿ ನಮನ

ಬಹರೈನ್; ಕಳೆದ ಸುಮಾರು ಎರಡೂವರೆ ದಶಕಗಳಿಂದ ಬಹರೈನ್ ನ ಸಾಂಸ್ಕ್ರತಿಕ ರಂಗಕ್ಕೆ ಅಪಾರ ಕೊಡುಗೆ ನೀಡುತ್ತಾ ಬಂದು ಇತ್ತೀಚಿಗೆ ಅಲ್ಪ ಕಾಲದ ಅನಾರೋಗ್ಯದಿಂದ ತಾಯ್ನಾಡಿನಲ್ಲಿ ಮರಣ ಹೊಂದಿದ ಶ್ರೀಮತಿ ಅಸ್ತಿಕಾ ಸುನಿಲ್ ಶೆಟ್ಟಿ ಯವರಿಗೆ ಇಲ್ಲಿನ “ಕನ್ನಡ ಭವನ”ದ ಸಭಾಂಗಣದಲ್ಲಿ ನುಡಿ ನಮನ ಕಾರ್ಯಕ್ರಮವನ್ನು ಕನ್ನಡ ಸಂಘ ಹಾಗು ಬಂಟ್ಸ್ ಬಹರೈನ್ ಸಂಘಟನೆಯು ಜಂಟಿಯಾಗಿ ಆಯೋಜಿಸಿತ್ತು. ಮೃತರ ಬಂಧು ಮಿತ್ರರು, ಶಿಷ್ಯರ ಬಳಗ, ವಿವಿಧ ಸಂಘಟನೆಗಳ ಪಧಾದಿಕಾರಿಗಳು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ನೆರೆದು ನುಡಿ ನಮನ ಸಲ್ಲಿಸಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದರು.

ನಾಡಿನ ಖ್ಯಾತ ನ್ರತ್ಯ ಕಲಾವಿದ ,ಶಿಕ್ಷಕ, ಕುದ್ಕಾಡಿ ವಿಶ್ವನಾಥ್ ರೈ ಹಾಗು ವಿದುಷಿ ನಯನ ರೈ ಯವರ ಪುತ್ರಿಯಾದ ಶ್ರೀಮತಿ ಅಸ್ತಿಕಾ ಸುನಿಲ್ ಶೆಟ್ಟಿ ಯವರು ಶಾಸ್ತ್ರೀಯ ನ್ರತ್ಯದಲ್ಲಿ ವಿಶೇಷವಾದ ಪ್ರಾವೀಣ್ಯತೆಯನ್ನು ಪಡೆದಿದ್ದರು . ವಿವಾಹದ ನಂತರ ಪತಿ ಸುನಿಲ್ ಶೆಟ್ಟಿ ಯವರೊಂದಿಗೆ ಬಹರೈನ್ ದ್ವೀಪ ರಾಷ್ಟ್ರದಲ್ಲಿ ನೆಲೆಸಿದ್ದು ಇಲ್ಲಿ ಶಾಸ್ತ್ರೀಯ ನ್ರತ್ಯವನ್ನು ಕಲಿಸುವುದರ ಜೊತೆಗೆ ದ್ವೀಪದಾದ್ಯಂತ ನ್ರತ್ಯ ಪ್ರದರ್ಶನಗಳನ್ನು ನೀಡಿ ಭಾರತೀಯ ಸಮುದಾಯದಲ್ಲಿ ಅಪಾರ ಜನಮನ್ನಣೆ ಗಳಿಸಿದ್ದರು .ಪತಿ ಸುನಿಲ್ ಶೆಟ್ಟಿ ಯವರು ಕೂಡ ಇಲ್ಲಿನ ತುಳು ಕನ್ನಡಿಗ ಸಮುದಾಯದಲ್ಲಿ ಸಕ್ರೀಯರಾಗಿದ್ದ್ದು ,ಏಕೈಕ ಪುತ್ರ ಸಾಕ್ಷರ್ ಶೆಟ್ಟಿ ಬೆಂಗಳೂರಿನಲ್ಲಿ ಹೆಚ್ಚಿನ ವ್ಯಾಸಂಗದಲ್ಲಿ ತೊಡಗಿಸಿಕೊಂಡಿದ್ದಾನೆ .

ದಿವಂಗತ ಅಸ್ತಿಕಾರವರು ಇಲ್ಲಿನ ಕನ್ನಡ ಸಂಘ,ಬಂಟ್ಸ್ ಬಹರೈನ್ ಮುಂತಾದ ಸಂಘಟನೆಗಳಲ್ಲಿ ಸಕ್ರೀಯವಾಗಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು ನ್ರತ್ಯ ಮಾತ್ರವಲ್ಲದೆ ಯಕ್ಷಗಾನ ಮುಂತಾದ ಇತರ ಕಲಾಪ್ರಕಾರಗಳಲ್ಲಿ ಕೂಡ ನಿಪುಣರಾಗಿದ್ದರು . ಉತ್ತಮ ಕ್ರೀಡಾಪಟುವಾಗಿದ್ದ ಇವರು ಕ್ರಿಕೆಟ್ ,ಥ್ರೋ ಬಾಲ್ ,ವಾಲೀಬಾಲ್ ,ಡಾರ್ಟ್ಸ್ ಮುಂತಾದ ಕ್ರೀಡೆಗಳಲ್ಲಿ ಮುಂಚೂಣಿಯಲ್ಲಿದ್ದರು . ಬಹರೈನಲ್ಲಿ ಅಪಾರ ಶಿಷ್ಯರ ಬಳಗವನ್ನು ಹೊಂದಿದ್ದು ನೂರಾರು ಮಕ್ಕಳಿಗೆ ಶಾಸ್ತ್ರೀಯ ನ್ರತ್ಯವನ್ನು ಕಲಿಸಿದ್ದು ಮಾತ್ರವಲ್ಲದೆ ಹಲವಾರು ಮಕ್ಕಳನ್ನು ಇಲ್ಲಿ ತರಬೇತುಗೊಳಿಸಿ ತಾಯ್ನಾಡಿಗೆ ಕರೆದುಕೊಂಡು ಹೋಗಿ ಅಲ್ಲಿ ಭರತನಾಟ್ಯದ ವಿದ್ವತ್ತು ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗುವರಂತೆ ಮಾಡಿರುವ ಕೀರ್ತಿ ಇವರಿಗೆ ಸಲ್ಲುತ್ತದೆ.

ನುಡಿ ನಮನ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿ ಮಾತನಾಡಿದ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಪ್ರದೀಪ್ ಶೆಟ್ಟಿಯವರು ” ಕನ್ನಡ ಸಂಘ ಮಾತ್ರವಲ್ಲ ದ್ವೀಪದ ಇಡೀ ಭಾರತೀಯ ಸಮುದಾಯ ಒಬ್ಬ ಸಾಂಸ್ಕ್ರತಿಕ ರಾಯಭಾರಿಯನ್ನು ಕಳೆದುಕೊಂಡು ಬಡವಾಗಿದೆ . ಅನಾರೋಗ್ಯದಿಂದ ತಾಯ್ನಾಡಿನಲಿದ್ಧರೂ ಕನ್ನಡ ಭವನದ ಉದ್ಘಾಟನೆಗೆ ಕಲಾವಿದರನ್ನು ಆನ್ ಲೈನ್ ಮುಖಾಂತರ ತರಬೇತುಗೊಳಿಸಿ ನ್ರತ್ಯ ಪ್ರದರ್ಶನ ನೀಡಿಸಿರುವ ಇವರ ಬದ್ಧತೆ ಯಾವತ್ತೂ ಮರೆಯಲಾಗದು” ಎಂದರೆ ಬಂಟ್ಸ್ ಬಹರೈನ್ ಸಂಘಟನೆಯ ಪ್ರಭಾರ ಅಧ್ಯಕ್ಷರಾದ ಮಿಥುನ್ ಭಂಡಾರಿಯವರು ಮಾತನಾಡಿ ಬಂಟ್ಸ್ ಬಹರೈನ್ ಸಂಘಟನೆಗೆ ಅವರ ಅಪಾರ ಕೊಡುಗೆಯನ್ನು ಸ್ಮರಿಸಿಕೊಂಡು ಶ್ರದ್ಧಾಂಜಲಿ ಅರ್ಪಿಸಿದರು . ಅವರ ಕುಟುಂಬಕ್ಕೆ ಆತ್ಮೀಯರಾಗಿದ್ದ ಬಂಟ್ಸ್ ಬಹರೈನ್ ನ ಅಧ್ಯಕ್ಷರಾದ ಅಮರ್ ನಾಥ್ ರೈ ,ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ಆಸ್ಟಿನ್ ಸಂತೋಷ್ ,ಪಟ್ಲ ಫೌಂಡೇಶನ್ ನ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ,ರೋಯಲ್ ತುಳುಕೂಟದ ನಾಗೇಶ್ ಶೆಟ್ಟಿ,ಕಮಲಾಕ್ಷ ಅಮೀನ್, ಪೂರ್ಣಿಮಾ ಜಗದೀಶ್ ,ಸುಖಿತ ನಾಯ್ಕ್ ಮುಂತಾದವರು ಆಸ್ತಿಕರವರಿಗೆ ನುಡಿನಮನ ಸಲ್ಲಿಸಿದರು .

Related Posts

Leave a Reply

Your email address will not be published.