ಬಹರೈನ್ ಕನ್ನಡ ಸಂಘದಲ್ಲಿ ಶನಿ ಪೂಜೆ ಸತ್ಯನಾರಾಯಣ ಪೂಜೆ ಹಾಗು ಶ್ರೀ ಶನೀಶ್ವರ ಮಹಾತ್ಮೆ

ಬಹರೈನ್‌ನ ಕನ್ನಡ ಸಂಘವು ಕನ್ನಡ ಭವನದ ಸಭಾಂಗಣದಲ್ಲಿ ಜೂನ್ 14ರಂದು ಶನಿ ಪೂಜೆ ಸತ್ಯನಾರಾಯಣ ಪೂಜೆ ಹಾಗು ಯಕ್ಷಗಾನ ಪ್ರದರ್ಶನವನ್ನು ಹಮ್ಮಿಕೊಂಡಿದೆ. ಸಂಜೆ ಮೂರು ಗಂಟೆಗೆ ಸರಿಯಾಗಿ ಮಂಗಳೂರಿನ ಪ್ರಸಿದ್ಧ ಕದ್ರಿ ಕ್ಷೇತ್ರದ ಅರ್ಚಕರಾದ ವೇದಮೂರ್ತಿ ಕೃಷ್ಣ ಅಡಿಗರ ಪೌರೋಹಿತ್ಯದಲ್ಲಿ ಶನಿ ಪೂಜೆ ಹಾಗು ಸತ್ಯನಾರಾಯಣ ಪೂಜೆಯೊಂದಿಗೆ ಕಾರ್ಯಕ್ರಮವು ಆರಂಭವಾಗಲಿದೆ.

ಸಂಜೆ ಐದೂವರೆ ಘಂಟೆಗೆ ನಾಟ್ಯಗುರು ದೀಪಕ್ ರಾವ್ ಪೇಜಾವರ ಇವರ ದಿಗ್ದರ್ಶನದಲ್ಲಿ ನಾಡಿನ ಖ್ಯಾತ ಅತಿಥಿ ಕಲಾವಿದರುಗಳಾದ ಕದ್ರಿ ನವನೀತ ಶೆಟ್ಟಿ ಹಾಗು ವಿಜಯ್ ಕುಮಾರ್ ಶೆಟ್ಟಿ ಮೊಯ್ಲೊಟ್ಟು ಹಾಗು ದ್ವೀಪದ ಯಕ್ಷಗಾನ ಕಲಾವಿದರುಗಳ ಸಮಾಗಮದೊಂದಿಗೆ ಕವಿಗಳಾದ ಚಿನ್ಮಯ ದಾಸರು ಹಾಗು ಸೀತಾನದಿ ಗಣಪಯ್ಯ ಶೆಟ್ಟಿ ವಿರಚಿತ ಶ್ರೀ ಶನೀಶ್ವರ ಮಹಾತ್ಮೆ ಎಂಬ ಪುಣ್ಯ ಕಥಾನಕವನ್ನು ಆಡಿತೋರಿಸಲಿದ್ದಾರೆ.

ಯಕ್ಷಗಾನ ಪ್ರದರ್ಶನದ ನಂತರ ಸಂಜೆ ಎಂಟು ಘಂಟೆಗೆ ಸರಿಯಾಗಿ ಸಭಾ ಕಾರ್ಯಕ್ರಮವು ಜರುಗಲಿದ್ದು, ಈ ಸಭಾಕಾರ್ಯಕ್ರಮಲ್ಲಿ ಕದ್ರಿ ನವನೀತ ಶೆಟ್ಟಿ, ವಿಜಯ್ ಕುಮಾರ್ ಶೆಟ್ಟಿ ಮೊಯ್ಲೊಟ್ಟು, ವೇದಮೂರ್ತಿ ಕೃಷ್ಣ ಅಡಿಗ ಹಾಗು ಯಕ್ಷೋಪಾಸನ ಕೇಂದ್ರದ ನಾಟ್ಯಗುರು ಶ್ರೀ ದೀಪಕ್ ರಾವ್ ಪೇಜಾವರ ದಂಪತಿಗಳಿಗೆ ದ್ವೀಪದ ಕನ್ನಡಿಗರ ಪರವಾಗಿ ಸಮ್ಮಾನಿಸಲಾಗುವುದು.

ಈ ಕಾರ್ಯಕ್ರಮಕ್ಕೆ ದ್ವೀಪದ ಎಲ್ಲಾ ಕನ್ನಡಿಗರಿಗೂ ಮುಕ್ತ ಪ್ರವೇಶವಿದ್ದು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಅಧ್ಯಕ್ಷರಾದ ಅಮರನಾಥ್ ರೈ ಯವರು ಕರೆ ನೀಡಿದ್ದಾರೆ. ಅತಿಥಿ ಕಲಾವಿದರುಗಳು ಹಾಗು ಪುರೋಹಿತರು ಈಗಾಗಲೇ ದ್ವೀಪ ರಾಷ್ಟçಕ್ಕೆ ಆಗಮಿಸಿದ್ದು ಅವರನ್ನು ಸಂಘದ ಅಧ್ಯಕ್ಷರಾದ ಅಮರನಾಥ್ ರೈ ಹಾಗು ಆಡಳಿತ ಮಂಡಳಿಯ ಇತರ ಪಧಾದಿಕಾರಿಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಅತಿಥಿ ಕಲಾವಿದರುಗಳ ಬರುವಿಕೆಯೊಂದಿಗೆ ಯಕ್ಷಗಾನದ ಅಭ್ಯಾಸವು ಇನ್ನಷ್ಟು ಭರದಿಂದ ಸಾಗಿದ್ದು ದ್ವೀಪದ ಯಕ್ಷ ಪ್ರೇಮಿಗಳನ್ನು ಇದು ರಂಜಿಸುವುದರಲ್ಲಿ ಯಾವುದೇ ಸಂಶಯವಿಲ್ಲ . ಕಾರ್ಯಕ್ರಮದ ಬಗೆಗಿನ ಹೆಚ್ಚಿನ ವಿವರಗಳಿಗೆ ಶ್ರೀ ಅಮರನಾಥ್ ರೈ ಯವರನ್ನು ದೂರವಾಣಿ ಸಂಖ್ಯೆ 39468624 ಮೂಲಕ ಸಂಪರ್ಕಿಸಬಹುದು .

add - wolkwagon

Related Posts

Leave a Reply

Your email address will not be published.