ಬಂಟ ಸಮುದಾಯದವರಿಗೆ ದೇವರೇ ಗುರು : ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ

ಮೂಡುಬಿದಿರೆ: ಬಂಟ ಸಮುದಾಯವು ಪರೋಪಕಾರ ದಂತಹ ದೊಡ್ಡ ಗುಣವನ್ನು ಹೊಂದಿದೆ. ಗುರುಪೀಠವಿಲ್ಲದೇ ಬಂಟ ಸಮುದಾಯವು ಎಲ್ಲಾ ಕ್ಷೇತ್ರಗಳಲ್ಲೂ ಇಂದು ಪ್ರಗತಿ ಸಾಧಿಸಿದೆ, ಸಮುದಾಯದ ಹಿರಿಯರು ಗುರುಪೀಠಕ್ಕೆ ಹೋರಾಡದೆ ಬಂಟರ ಸಂಘ, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಿದರೆ ಸಮುದಾಯದ ಅಭಿವೃದ್ಧಿ ಸಾಧ್ಯ. ಈ ಸಮುದಾಯವು ಗುರುಪೀಠಕ್ಕೆ ಹೆಚ್ಚಿನ ಆದ್ಯತೆ ನೀಡದೆ ಹಿರಿಯರು ತೋರಿದ ಹಾದಿಯಲ್ಲೇ ಮುಂದೆ ಸಾಗಬೇಕು,ದೇವರನ್ನೇ ಗುರುವನ್ನಾಗಿ ಕಾಣಬೇಕು ಎಂದು ಕೇಮಾರು ಸಾಂದೀಪನೀ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ ನುಡಿದರು.ಅವರು ಮೂಡುಬಿದಿರೆ ಯುವ ಬಂಟರ ಸಂಘದ ವತಿಯಿಂದ ನಡೆದ ಬಂಟರ ಸಮ್ಮಿಲನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ನ್ಯಾಯವಾದಿಗಳಾದ ಚೇತನ್ ಕುಮಾರ್ ಶೆಟ್ಟಿ, ನಾಗೇಶ್ ಶೆಟ್ಟಿ, ಉದ್ಯಮಿ ತೋಡಾರು ದಿವಾಕರ ಶೆಟ್ಟಿ ,ಸುಕೇಶ್ ಶೆಟ್ಟಿ ಶಿರ್ತಾಡಿ, ಪ್ರೇಮನಾಥ ಮಾರ್ಲ, ಮಿಥುನ್ ಶೆಟ್ಟಿ, ವಂದನಾ ರೈ ಕಾರ್ಕಳ, ಭೋಜ ಶೆಟ್ಟಿ, ಕುಮಾರ್ ಶೆಟ್ಟಿ ಇರುವೈಲು, ಪದಾಧಿಕಾರಿಗಳು ಉಪಸ್ಥಿತರಿದ್ದರು.
