ಜ.5ರಂದು ಪದವು ಬಂಟರ ಭವನಕ್ಕೆ ಶಿಲಾನ್ಯಾಸ.

ಬಂಟ್ಚಾಳ: ತಾಲೂಕಿನ ವಾಮದಪದವು ವಲಯ ಬಂಟರ ಸಂಘದ ವತಿಯಿಂದ ಆಲದಪದವಿನ ನಿವೇಶನದಲ್ಲಿ ನಿರ್ಮಿಸಲು ಉದ್ಧೇಶಿಸಿರುವ “ಪದವು ಬಂಟರ ಭವನ” ದ ಶಿಲಾನ್ಯಾಸ ಸಮಾರಂಭವು ಜ.5ರಂದು ನಡೆಯಲಿದೆ ಎಂದು ಸಂಘದ ಗೌರವ ಸಲಹೆಗಾರ ಅಶೋಕ ಪಕ್ಕಳ ಶ್ರೀ ಸನ್ನಿಧಿಗುತ್ತು ತಿಳಿಸಿದ್ದಾರೆ. ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆಲದಪದವಿನಲ್ಲಿ‌ರುವ 1.61 ಎಕ್ರೆ ನಿವೇಶನದಲ್ಲಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತವಾದ ಬಂಟರ ಭವನ ನಿರ್ಮಿಸಲು ಉದ್ಧೇಶಿಸಲಾಗಿದೆ ಎಂದರು. ವಾಮದಪದವು ವಲಯಕ್ಕೊಳಪಟ್ಟ ಆರು ಗ್ರಾಮದ ಸಮಾಜದ ಬಂಧುಗಳ ಹಾಗೂ ದಾನಿಗಳ ಸಹಕಾರದಿಂದ ಪದವು ಬಂಟರ ಭವನ ನಿರ್ಮಿಸಲಾಗುತ್ತಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನಿರ್ವಹಣಾ ವೆಚ್ಚದಲ್ಲಿ ಭವನವನ್ನು ಒದಗಿಸಲು ಯೋಜನೆ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಮತ್ತು ಶಾಲೆಯನ್ನು ತೆರೆಯುವ ಯೋಜನೆಯೂ ಇದೆ ಎಂದು ಅಶೋಕ ಪಕ್ಕಳ ಹೇಳಿದರು.

ಬೆಳಿಗ್ಗೆ 11.12ಕ್ಕೆ ಪದವು ಬಂಟರ ಭವನದ ಶಿಲಾನ್ಯಾಸ ನಡೆಯಲಿದ್ದು ಮುಂಬೈ ಹೇರಂಬ ಇಂಡಸ್ಟ್ರೀಸ್ ಆಡಳಿತ ನಿರ್ದೇಶಕ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಶಿಲಾನ್ಯಾಸ ನೆರವೇರಿಸಲಿರುವರು. ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿ ಹಾಗೂ ಕೊಂಡೆವೂರು ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿಯವರು ಆಶೀರ್ವಚನ ನೀಡುವರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸುವರು. ಬೆಂಗಳೂರಿನ ಎಂ.ಆರ್.ಜಿ.ಗ್ರೂಪ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ ದೀಪ ಪ್ರಜ್ವಲಿಸುವರು. ನಗ್ರಿಗಿತ್ತು ವಿವೇಕ್ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮೋಹನ್ ಆಳ್ವ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ, ಮಾಜಿ ಸಚಿವ ಬಿ. ರಮಾನಾಥ ರೈ, ಬಂಟರ ಸಂಘ ಬಂಟ್ವಾಳದ ಅಧ್ಯಕ್ಷ ಚಂದ್ರಹಾಸ ಡಿ.ಶೆಟ್ಟಿ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು, ರಾಜ್ಯ-ಹೊರರಾಜ್ಯದ ಉದ್ಯಮಿಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಶಿಲಾನ್ಯಾಸಕ್ಕೆ ಮುನ್ನ ಭರತನಾಟ್ಯ ಕಾರ್ಯಕ್ರಮ, ಸಭಾ ಕಾರ್ಯಕ್ರಮದ ಬಳಿಕ ಯಕ್ಷಧ್ರುವ ಸತೀಶ್ ಶೆಟ್ಟಿ ಪಟ್ಲ ಮತ್ತಿತರ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಲೆ ನಡೆಯಲಿದೆ. ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ, ಗೌರವಾಧ್ಯಕ್ಷ ಅಮ್ಮರೈ ಹರ್ಕಾಡಿ, ಪದಾಧಿಕಾರಿಗಳಾದ ರಮೇಶ್ ಶೆಟ್ಟಿ ವಾಮದಪದವು, ರಾಮಚಂದ್ರ ಶೆಟ್ಟಿ ದಂಡೆ, ಯಶೋಧರ ಶೆಟ್ಟಿ ದಂಡೆ, ಪುಷ್ಪರಾಜ್ ಶೆಟ್ಟಿ, ಪ್ರಜ್ವಲ್ ಶೆಟ್ಟಿ, ಸಂತೋಷ್ ವಾಮದಪದವು, ಸೂರಜ್ ವಾಮದಪದವು ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.

Related Posts

Leave a Reply

Your email address will not be published.