ಏಕಾಂಗಿಯಾಗಿ ಬಾವಿ ತೋಡಿದ ಬಂಟ್ವಾಳದ ಸೃಜನ್ ಗೆ ಸೆಲ್ಯೂಟ್ ಟು ಸೈಲೆಂಟ್ ವರ್ಕರ್ ಪ್ರಶಸ್ತಿ
ಬಂಟ್ವಾಳ: ಏಕಾಂಗಿಯಾಗಿ ಬಾವಿ ತೋಡಿ ಅಸಾಮಾನ್ಯ ಸಾಧನೆ ತೋರಿದ ಬಾಲಕ ನರಿಕೊಂಬು ಗ್ರಾಮದ ನಾಯಿಲ ಕಾಪಿಕಾಡುವಿನ ಸೃಜನ್ ಪೂಜಾರಿಗೆ ಜೆಸಿಐ ಬಂಟ್ವಾಳ ಸೆಲ್ಯೂಟ್ ಟೂ ಸೈಲೆಂಟ್ ವರ್ಕರ್ ಪ್ರಶಸ್ತಿ ನೀಡಿ ಗೌರವಿಸಿದೆ.
ಬಾಲಕನ ಸಾಧನೆಯ ಬಗ್ಗೆ ಮಾಧ್ಯಮಗಳ ವರದಿಯನ್ನು ಆಧಾರಿಸಿ ಬುಧವಾರ ಅವರ ಮನೆಗೆ ತೆರಳಿದ ಜೆಸಿಐ ಬಂಟ್ವಾಳದ ಅಧ್ಯಕ್ಷ ರಾಜೇಂದ್ರ ಕೆ. ಹಾಗೂ ಸದಸ್ಯರು ಸೃಜನ್ ಸಾಧನೆಯನ್ನು ಶ್ಲಾಘಿಸಿ ಪ್ರಶಸ್ತಿ ನೀಡಿ ಗೌರವಿಸಿದರು. ಎಲೆ ಮರೆಯ ಕಾಯಿಯಂತೆ ಸಾಧನೆ ಮಾಡುವ ಸಾಧಕರಿಗೆ ಜೆಸಿಐ ಸಂಸ್ಥೆ ಮೌನ ಸಾಧಕ ಪ್ರಶಸ್ತಿ ನೀಡಿ ಗೌರವಿಸಿಕೊಂಡು ಬಂದಿದೆ. ಇದೀಗ ಅರ್ಹವಾಗಿಯೇ ಸೃಜನ್ ಈ ಪ್ರಶಸ್ತಿಗೆ ಪಾತ್ರನಾಗಿದ್ದಾನೆ ಎಂದು ರಾಜೇಂದ್ರ ಅಭಿನಂದಿಸಿದರು. ಈ ಸಂದರ್ಭ ಜೆಸಿಐ ಬಂಟ್ವಾಳದ ನಿಕಟ ಪೂರ್ವಾಧ್ಯಕ್ಷ ರೋಷನ್ ರೈ, ಪೂರ್ವಾಧ್ಯಕ್ಷರಾದ ಲೋಕೇಶ್ ಸುವರ್ಣ, ಸದಾನಂದ ಬಂಗೇರ, ಸದಸ್ಯರಾದ ಉಮೇಶ್, ಮನೋಜ್ ಕನಪಾಡಿ, ಪ್ರಶಾಂತ್ ಕಲ್ಲಡ್ಕ ಹಾಗೂ ಸೃಜನ್ ಪಾಲಕರು ಉಪಸ್ಥಿತರಿದ್ದರು.