ಬಂಟ್ವಾಳ: ಹೆಜ್ಜೇನು ನೊಣಗಳು ದಾಳಿ : ಒರ್ವನಿಗೆ ಗಂಭೀರ ಗಾಯ
ಬಂಟ್ವಾಳ: ಬಸ್ಸು ನಿಲ್ದಾಣಕ್ಕೆ ನಡೆದುಕೊಂಡು ಹೋಗುತ್ತಿದ್ದ ಮೂವರು ವ್ಯಕ್ತಿಗಳಿಗೆ ಹೆಜ್ಜೇನು ನೊಣಗಳು ದಾಳಿ ನಡೆಸಿ ಆಸ್ಪತ್ರೆಗೆ ದಾಖಲಾದ ಘಟನೆ ಭಾನುವಾರ ನಡೆದಿದೆ. ಘಟನೆಯಲ್ಲಿ ಒರ್ವ ಗಂಭೀರವಾಗಿ ಗಾಯಗೊಂಡಿದ್ದು, ಇನ್ನಿಬ್ಬರ ಅಲ್ಪಸ್ವಲ್ಪ ಗಾಯಗಳಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಆದಿತ್ಯವಾರ ಮಧ್ಯಾಹ್ನ ಕಲ್ಪನೆ ಎಂಬಲ್ಲಿ ನಡೆದಿದೆ.
ಕಲ್ಪನೆ ನಿವಾಸಿ ಪೂವಪ್ಪ ( 61) ಗಂಭೀರವಾಗಿ ಗಾಯವಾಗಿದ್ದು,ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ ಮಹೇಶ್ ಮತ್ತು ಗೋಪಾಲ್ ಅವರನ್ನು ತುಂಬೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರು ಅಪಾಯದಿಂದ ಪಾರಾಗಿದ್ದಾರೆ.
ಕಲ್ಪನೆಯಿಂದ ಬಿ.ಸಿ.ರೋಡಿಗೆ ಬರಲು ಕಲ್ಪನೆ ಬಸ್ ನಿಲ್ದಾಣಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಹಠಾತ್ ಆಗಿ ದಾಳಿ ಮಾಡಿದ ನೊಣಗಳು ಕಚ್ಚಿ ಗಾಯಗೊಳಿಸಿದೆ. ಪೂವಪ್ಪ ಅವರು ಲಾರಿ ಬಾಡಿ ವರ್ಕ್ ಕೆಲಸ ಮಾಡುತ್ತಿದ್ದು, ಭಾನುವಾರ ರಜೆಯಲ್ಲಿದ್ದರು.ವೈಯಕ್ತಿಕ ಕೆಲಸದ ಹಿನ್ನೆಲೆಯಲ್ಲಿ ಬಿ.ಸಿ.ರೋಡಿಗೆ ಬರುವುದಕ್ಕೆ ಬಸ್ ನಿಲ್ದಾಣದತ್ತ ನಡೆದುಕೊಂಡು ಬರುವ ವೇಳೆ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಘಟನೆ ನಡೆದ ಕೂಡಲೇ ಕಲ್ಪನೆ ರಿಕ್ಷಾ ಚಾಲಕರು ಘಟನೆಯಿಂದ ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ದಾಖಲಿಸಲು ಸಹಕರಿಸಿದ್ದಾರೆ.