ಬಂಟ್ವಾಳ: ಮತ್ತೆ ನೆರೆಯಾತಂಕ, ರಾತ್ರಿ ನಿದ್ದೆ ಬಿಟ್ಟು ಕಾರ್ಯ ನಿರ್ವಹಿಸಿದ ಪುರಸಭೆ ಸಿಬ್ಬಂದಿಗಳು
ಬಂಟ್ವಾಳ: ರಾತ್ರಿ ಮತ್ತೆ ನೆರೆ ಭೀತಿ ಎದುರಾದ ಹಿನ್ನಲೆಯಲ್ಲಿ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರು ತನ್ನ ಅಧಿಕಾರಿಗಳು ಹಾಗೂ ಪೌರಕಾರ್ಮಿಕರೊಂದಿಗೆ ಮಧ್ಯರಾತ್ರಿ 1.30 ರ ವೇಳೆಗೆ ನೆರೆಪೀಡಿತ ತಗ್ಗು ಪ್ರದೇಶಗಳಿಗೆ ದೌಡಾಯಿಸಿ ಜನರ ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿ ರಸ್ತೆಗಳಾದ ಗೂಡಿನಬಳಿ, ಕಂಚುಗಾರ ಪೇಟೆ, ಆಲಡ್ಕ, ನಂದಾವರ, ಬಡ್ಡಕಟ್ಟೆಯಲ್ಲಿ ಬ್ಯಾರಿಕೇಡ್ ಹಾಗೂ ರಿಬ್ಬನ್ ಗಳನ್ನು ಕಟ್ಟಿ ಮುಂಜಾಗೃತ ಕ್ರಮಗಳನ್ನು ಕೈಗೊಂಡರು.
ಮುಖ್ಯಾಧಿಕಾರಿಯೊಂದಿಗೆ ಮಂಜುನಾಥ್, ಶಿವಕುಮಾರ್, ರಾಮ, ತಿಮ್ಮಪ್ಪ, ಮಲ್ಲನಾಯ್ಕ್, ವಿನೋದ್, ಅಂಬರೀಷ್ ಹಾಜರಿದ್ದರು. ಗುರುವಾರ ಮುಂಜಾನೆ 4.30 ರವೆರೆಗೆ ಕಾರ್ಯನಿರ್ವಹಿಸಿ ಬೆಳಿಗ್ಗೆ ಮತ್ತೆ ಎಂದಿನಂತೆ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮಧ್ಯರಾತ್ರಿಯಿಂದ ಮುಂಜಾನೆಯವರೆಗೆ ಪುರಸಭೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ನಿದ್ದೆಬಿಟ್ಟು ಕೈಗೊಂಡ ಕಾರ್ಯ ಶ್ಲಾಘನೆಗೆ ಪಾತ್ರವಾಗಿದೆ.