ಬಂಟ್ವಾಳದ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಸಮಸ್ಯೆಗಳ ಅವಲೋಕನ ಸಮಸ್ಯೆಗಳ ಪರಿಹಾರಕ್ಕೆ ಸೂಚನೆ ನೀಡಿದ ಶಾಸಕರು

ಬಂಟ್ವಾಳ : ಕ್ಷೇತ್ರದ 39 ಗ್ರಾ.ಪಂ.ನ ಪಿಡಿಒ, ಗ್ರಾಮಕರಣಿಕರು, ಅಧ್ಯಕ್ಷ, ಉಪಾಧ್ಯಕ್ಷರೊಂದಿಗೆ ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪಾಡಿಗುತ್ತು ಅವರು ತಮ್ಮ ಬಿ.ಸಿ.ರೋಡಿನ ಕಚೇರಿಯಿಂದ ತಹಶೀಲ್ದಾರ್, ತಾ.ಪಂ.ಇಒ ಹಾಗು ಇತರೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಗೂಗೂಲ್ ಮೀಟ್ ಮೂಲಕ ಸಂವಾದ ನಡೆಸಿದರು.

ಗ್ರಾ.ಪಂ.ವ್ಯಾಪ್ತಿಯಲ್ಲಿರುವ ವಿವಿಧ ಸಮಸ್ಯೆಯನ್ನು ಆಲಿಸಿದ ಶಾಸಕರು, ತಹಶೀಲ್ದಾರ್ ಡಾ.ಸ್ಮಿತಾ ರಾಮು, ಇಒ ರಾಜಣ್ಣ ಅವರು ಪರಿಹಾರದ ನಿಟ್ಟಿನಲ್ಲಿ ಸೂಕ್ತ ಸಲಹೆ, ಸೂಚನೆಗಳನ್ನಿತ್ತರು. ಕೆಲ ಸಮಸ್ಯೆಗಳನ್ನು ಸ್ಥಳದಲ್ಲೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದ ಶಾಸಕ ರಾಜೇಶ್ ನಾಕ್ ತಕ್ಷಣ ಪರಿಹರಿಸುವಂತೆ ಸೂಚಿಸಿದರು. ಗ್ರಾ.ಪಂ.ವ್ಯಾಪ್ತಿಯಲ್ಲಿರುವ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ, ಗ್ರಾಮಕರಣಿಕರನ್ನೊಳಗೊಂಡ ಟಾಸ್ಕ್ ಪೋರ್ಸ್ ಸಮಿತಿ ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದ ಶಾಸಕರು ಗ್ರಾಪಂ.ವ್ಯಾಪ್ತಿಯಲ್ಲಿ ಮಳೆಯಿಂದ ಅಪಾಯಕಾರಿ ಸ್ಥಿತಿಯಲ್ಲಿರುವ ಕುಟುಂಬಗಳನ್ನು ಮನವೊಲಿಸಿ ಕಾಳಜಿ ಕೇಂದ್ರ ಅಥವಾ ಅವರ ಸಂಬಂಧಿಕರ ಮನೆಗೆ ಸ್ಥಳಾಂತರಿಸುವಂತೆ ಸೂಚಿಸಿದರು. ತಾಲೂಕಿನಲ್ಲಿ ಈಗಾಗಲೇ 8 ಕಾಳಜಿ ಕೇಂದ್ರವನ್ನು ತೆರೆಯಲಾಗಿದೆ. ಇಲ್ಲಿ ಎಲ್ಲಾ ರೀತಿಯ ಪೂರ್ಣಪ್ರಮಾಣದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಸಂತ್ರಸ್ಥರು ಕಾಳಜಿ ಕೇಂದ್ರಕ್ಕೆ ಬರಲು ಒಪ್ಪದಿದ್ದಲ್ಲಿ ಜನಪ್ರತಿನಿಧಿಗಳ ಮೂಲಕ ಅಥವಾ ಪೆÇಲೀಸರ ಸಹಕಾರವನ್ನು ಪಡೆದುಕೊಂಡಾದರೂ ಅಪಾಯಕಾರಿ ಸ್ಥಳದಿಂದ ಅವರನ್ನು ಸ್ಥಳಾಂತರಿಸಬೇಕು ಎಂದು ಎಲ್ಲಾ ಗ್ರಾ.ಪಂ.ನ ಗ್ರಾಮಕರುಣಿಕರು, ಪಿಡಿಒಗಳಿಗಳಿಗೆ ತಹಶೀಲ್ದಾರ್ ಸ್ಮಿತಾರಾಮು ಹಾಗೂ ಇಒ ರಾಜಣ್ಣ ಅವರು ಸ್ಪಷ್ಟ ಸೂಚನೆ ನೀಡಿದರು.

ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಮಳೆನೀರು ಚರಂಡಿಯಲ್ಲೇ ಸರಾಗವಾಗಿ ಹರಿದು ಹೋಗುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಸೂಚಿಸಿದ ಇಒ ರಾಜಣ್ಣ ಅವರು ಇದಕ್ಕೆ ಗ್ರಾಪಂ.ನಿಂದ ಐದು ಸಾವಿರ ರೂ.ಖರ್ಚುಮಾಡಲು ಪೂರ್ಣಾಧಿಕಾರವಿದ್ದು, ಇದಕ್ಕಿಂತ ಹೆಚ್ಚಾದರೆ 15ನೇ ಹಣಕಾಸು ಅಥವಾ ಇನ್ಯಾವುದೇ ಅನುದಾನ ಬಳಸಿ ಕಾರ್ಯನಿರ್ವಹಿಸಿ ಬಳಿಕ ಘಟನೋತ್ತರ ಮಂಜೂರಾತಿ ಪಡೆಯುವಂತೆ ಸೂಚಿಸಿದರು. ವಿವಿಧ ಗ್ರಾಪಂ.ನ ಅಧ್ಯಕ್ಷರು, ಪಿಡಿಒ, ಗ್ರಾಮಕರಣಿಕರು ತಮ್ಮ ತಮ್ಮ ಪಂಚಾಯತಿ ವ್ಯಾಪ್ತಿಯಲ್ಲಿ ಆಗುತ್ತಿರುವ ಗುಡ್ಡ ಜರಿತ, ಮನೆ, ರಸ್ತೆಗಳಿಗೆ ಹಾನಿ, ಶಾಲೆಗಳಿಗಾಗುತ್ತಿರುವ ಸಮಸ್ಯೆ ಹಾಗೆಯೇ ಪ್ರಮುಖವಾಗಿ ಕಲ್ಲಡ್ಕ ದಲ್ಲಾಗುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯಿಂದ ಪ್ರತಿನಿತ್ಯ ಸಂಚಾರಕ್ಕಾಗುತ್ತಿರುವ ಅಡಚಣೆ, ಅದೇ ರೀತಿ ಗೋಳ್ತಮಜಲು ಗ್ರಾ.ಪಂ.ಕಚೇರಿ, ಕುದ್ರೆಬೆಟ್ಟುವಿನಲ್ಲಿ ಅಯ್ಯಪ್ಪ ಮಂದಿರ ಹೆದ್ದಾರಿ ಕಾಮಗಾರಿಯಿಂದ ಅಪಾಯದಲ್ಲಿರುವ ಬಗ್ಗೆ ಗ್ರಾ.ಪಂ.ಅಧ್ಯಕ್ಷರು ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ರಾಜೇಶ್ ನಾಕ್ ರಾಷ್ಟ್ರೀಯ ಹೆದ್ದಾರಿ ಇಲಾಖಾಧಿಕಾರಿಗಳೊಂದಿಗೆ ಶೀಘ್ರವೇ ಸಂಸದರ ಉಪಸ್ಥಿತಿಯಲ್ಲಿ ಪರಿಶೀಲನೆ ನಡೆಸಲಾಗುವುದು, ಶನಿವಾರವೇ ಸ್ಥಳ ಪರಿಶೀಲಿಸುವಂತೆ ತಹಶೀಲ್ದಾರರಿಗೆ ಸೂಚಿಸಿದರು.

ಇಲಾಖಾಧಿಕಾರಿಗಳು ದಿನದ 24 ಗಂಟೆಯೂ ಸಾರ್ವಜನಿಕರ ಪೋನ್ ಕರೆ ಸ್ವೀಕರಿಸಿ ಪ್ರಾಕೃತಿಕ ವಿಕೋಪದ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವಂತೆ ನಿರ್ದೇಶಿಸಿದ ಶಾಸಕರು, ನಿರಂತರ ಮಳೆಯಿಂದಾಗಿ ಹಾನಿಗಳು ಸಂಭವಿಸಬಹುದಾದ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲಾ ಇಲಾಖಾಧಿಕಾರಿಗಳು ಅಯಾಯ ಗ್ರಾಮದಲ್ಲಿಯೇ ಇರಬೇಕು ಎಂದರು. ಯುವಕರ ತಂಡ ರಚಿಸಿ: ಪಂಜಿಕಲ್ಲು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 50 ಮಂದಿ ಯುವಕರ ತುರ್ತು ಸೇವಾ ತಂಡ ಅಸ್ತಿತ್ವಕ್ಕೆ ಬಂದಿದ್ದು, ಇದೇ ಮಾದರಿಯಲ್ಲಿ ತಂಡ ರಚಿಸಿ ಗ್ರಾಮದಲ್ಲಿ ಸಮಸ್ಯೆ ಗಳಿಗೆ ಸ್ಪಂದಿಸುವ ಕೆಲಸ ಮಾಡಿ ಎಂದು ಶಾಸಕರು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ರಾ. ಹೆ. ಇಲಾಖಾಧಿಕಾರಿಗಳನ್ನು ಸ್ಥಳಕ್ಕೆ ಕರೆದು ಕ್ರಮಕೈಗೊಳ್ಳುವ ಭರವಸೆ ನೀಡಿದರು. ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವದಾಸ ಶೆಟ್ಟಿ, ಮೆಸ್ಕಾಂ ಅಧಿಕಾರಿ ನಾರಾಯಣ ಭಟ್, ರವೀಶ್ ಶೆಟ್ಟಿ ಕರ್ಕಳ ಮೊದಲಾದವರಿದ್ದರು.

Related Posts

Leave a Reply

Your email address will not be published.