ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಹೆಸರನ್ನು ಕಳಚುವ ಬಗ್ಗೆ ಮಾಜಿ ಸಚಿವ ರಮನಾಥ ರೈ ನೇತೃತ್ವದಲ್ಲಿ ದೂರು

ಬಂಟ್ವಾಳ: ಮತದಾರ ಪಟ್ಟಿ ಪರಿಷ್ಕರಣೆಯ ನೆಪದಲ್ಲಿ ಮತದಾರರ ಹೆಸರನ್ನು ಕಳಚುವ ಬಗ್ಗೆ ಮಾಜಿ ಸಚಿವ ಬಿ. ರಮಾನಾಥ ರೈ ನೇತೃತ್ವದಲ್ಲಿ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ಗುರುವಾರ ಬಂಟ್ವಾಳ ತಹಸೀಲ್ದಾರರಿಗೆ ದೂರು ಸಲ್ಲಿಸಿತು.

ಬಳಿಕ ರಮನಾಥ ರೈ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಚುನಾವಣಾ ಆಯೋಗದ ಆದೇಶದಂತೆ ಸ್ಥಳೀಯ ಮಟ್ಟದ ಮತಗಟ್ಟೆಯ ಬಿಎಲ್‍ಓಗಳು ಪಾರದರ್ಶಕವಾಗಿ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ವಿಶ್ವಾಸವಿದೆ. ಆದರೆ ಕಳೆದ ಕೆಲವು ದಿನಗಳಿಂದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು ತಮ್ಮ ಪಕ್ಷಕ್ಕೆ ಮತ ಚಲಾಯಿಸದ ಮತದಾರರ ಪಟ್ಟಿ ಸಿದ್ದಪಡಿಸಿಕೊಂಡು ಬಿಎಲ್‍ಓಗಳನ್ನು ಸಂಪರ್ಕಿಸಿ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕಳಚುವಂತೆ ಒತ್ತಡ ಹೇರುತ್ತಿರುವುದು ಗಮನಕ್ಕೆ ಬಂದಿದೆ. ಚುನಾವಣಾ ಆಯೋಗದ ನಿಯಮದಂತೆ ಇದು ಸಾಧ್ಯವಿಲ್ಲ ಎಂದು ಹೇಳಿದ ಬಿಎಲ್‍ಓಗಳಲ್ಲಿ ಪಟ್ಟಿಯನ್ನು ಕೊಟ್ಟು ಸ್ವೀಕೃತಿ ನೀಡಬೇಕೆಂದು ಒತ್ತಡ ಹೇರುತ್ತಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ನಿಯಮದಂತೆ ಅರ್ಜಿ ನಮೂನೆ 7 ರಲ್ಲಿ ಸಂಬಂಧ ಪಟ್ಟವರು ಸಹಿ ಹಾಕಿ ನೀಡಿದ್ದಲ್ಲಿ ಮಾತ್ರ ಹೆಸರು ಕಳಚ ತಕ್ಕದ್ದು, ಹೊರತು ಪಡಿಸಿ ಮೂರನೆಯ ವ್ಯಕ್ತಿಯ ದೂರು ಅಥವಾ ಅರ್ಜಿಯಿಂದ ಮತ್ತು ಸ್ವಯಂ ಪ್ರೇರಿತವಾಗಿ ಬಿಎಲ್‍ಓಗಳು ಕೂಡ ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ಅವಕಾಶವಿರುವುದಿಲ್ಲ ಎಂದು ತಿಳಿಸಿದರು. ಚುನಾವಣಾ ಆಯೋಗದ ನಿಯಮವನ್ನು ಮೀರಿ ಅಧಿಕಾರಿಗಳಿಗೆ ರಾಜಕೀಯ ಒತ್ತಡ ನೀಡುತ್ತಿರುವವರ ಪ್ರಭಾವಕ್ಕೆ ಒಳಗಾಗದೆ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ತಪ್ಪನ್ನು ಮಾಡದಂತೆ ಸಂಬಂಧಪಟ್ಟ ಬಿಎಲ್‍ಓಗಳಿಗೆ ಸೂಚನೆ ನೀಡಬೇಕು ಎಂದು ಆಗ್ರಹಿಸಿರುವುದಾಗಿ ಅವರು ತಿಳಿಸಿದರು.

ಈ ಸಂದರ್ಭ ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್, ಪಕ್ಷದ ಮುಖಂಡಾರದ ಚಂದ್ರಪ್ರಕಾಶ್ ಶೆಟ್ಟಿ, ಪಿಯೂಸ್ ಎಲ್. ರೋಡ್ರಿಗಸ್, ಸುದೀಪ್ ಕುಮಾರ್ ಶೆಟ್ಟಿ, ಸಿದ್ದಿಕ್ ಗುಡ್ಡೆಯಂಗಡಿ, ಪದ್ಮನಾಭ ರೈ, ವೆಂಕಪ್ಪ ಪೂಜಾರಿ, ಸುಭಾಶ್ಚಂದ್ರ ಶೆಟ್ಟಿ, ಅಬ್ಬಾಸ್ ಅಲಿ, ರವೀಂದ್ರ ಸಪಲ್ಯ, ಮಹಮ್ಮದ್ ನಂದಾವರ ಮೊದಲಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.