ಕಡಲ್ಕೊರೆತ ಶಾಶ್ವತ ತಡೆಗೆ ಸೀವಿಯರ್ ಬ್ರೇಕರ್ ಟೆಕ್ನಾಲಜಿ ಅಳವಡಿಕೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ

ಉಳ್ಳಾಲ: ಕಡಲ್ಕೊರೆತ ಶಾಶ್ವತ ತಡೆಗಾಗಿ ಸೀವಿಯರ್ ಬ್ರೇಕರ್ ಟೆಕ್ನಾಲಜಿ ಅಳವಡಿಸುವ ಯೋಜನೆ ರೂಪಿಸಲಾಗಿದೆ. ಉಳ್ಳಾಲದ ಬಟ್ಟಪ್ಪಾಡಿಯಲ್ಲಿ ಹೊಸ ವಿಧಾನದ ಶಾಶ್ವತ ತಡೆಯನ್ನು ನಿರ್ಮಿಸಲು ಅನುಮತಿಯನ್ನು ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಅವರು ಕಡಲ್ಕೊರೆತಕ್ಕೀಡಾದ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಉಚ್ಚಿಲ ಬಟ್ಟಪ್ಪಾಡಿ ಪ್ರದೇಶಕ್ಕೆ ಭೇಟಿ ನೀಡಿ ಮಾಧ್ಯಮದ ಜತೆಗೆ ಮಾತನಾಡಿದರು.
ಕಳೆದ ಬಾರಿ 800 ಮೀ ದೂರ ಕಡಲ್ಕೊರೆತ ಸಂಭವಿಸಿದ್ದರೆ ಈ ಬಾರಿ 600 ಮೀ ಕಡಲ್ಕೊರೆತ ಉಂಟಾಗಿದೆ. ದ.ಕ, ಉಡುಪಿ, ಉತ್ತರಕನ್ನಡದಲ್ಲಿ ನಿರಂತರವಾಗಿ ಕಡಲ್ಕೊರೆತ ಉಂಟಾಗುತ್ತಿದೆ ಆದರೆ ತಾತ್ಕಾಲಿಕ ಪರಿಹಾರವಾಗಿ ಮಾಡುವ ಕಲ್ಲು ಹಾಕುವುದು, ಎಡಿಬಿ ಕಾಮಗಾರಿ ಸರಿಯಾಗಿಲ್ಲ ಅನ್ನುವ ದೂರುಗಳು ಬಂದಿವೆ. ಆದರೆ 200-300 ಕೋಟಿ ಖರ್ಚು ಮಾಡಿರುವ ಯೋಜನೆಗಳನ್ನು ಉಳಿಸಿಕೊಂಡು ಅದನ್ನು ಇನ್ನಷ್ಟು ಬಲವರ್ಧನೆಗೊಳಿಸುವ ಪ್ರಯತ್ನಕ್ಕೆ ಸರಕಾರ ಕೈಹಾಕುತ್ತದೆ. ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರ ಒದಗಿಸುವ ಸಲುವಾಗಿ ಹೊಸ ವಿಧಾನವನ್ನು ಕಳೆದ ತಿಂಗಳು ಪವರ್ ಪಾಯಿಂಟ್ ಮುಖೇನ ತೋರಿಸಿದ್ದಾರೆ. ಅದನ್ನು ಉಳ್ಳಾಲದಲ್ಲಿ ನಡೆಸುವಂತೆ ಅನುಮತಿಯನ್ನು ನೀಡಲಾಗಿದೆ. ಸೀವಿಯರ್ ಬ್ರೇಕರ್ ಟೆಕ್ನಾಲಜಿ ಅಳವಡಿಸುವ ಚಿಂತನೆ ನಡೆಸಲಾಗಿದೆ. ಅದರ ನಡುವೆ ಈಗಾಗಲೇ ಹಾನಿಯಾಗಿರುವ ಬಟ್ಟಪ್ಪಾಡಿ ರಸ್ತೆಯನ್ನು ಜನರಿಗೆ ಹೋಗಲು ಅನುಕೂಲವಾಗುವಂತೆ ಕಲ್ಲುಗಳನ್ನು ಹಾಕಿ ಪರಿಹಾರ ಓದಗಿಸಲು ಸೂಚಿಸಿದ್ದೇನೆ. ಕಡಲ್ಕೊರೆತದ ಕುರಿತು ದೀರ್ಘಕಾಲದ ಯೋಜನೆ ಬಗ್ಗೆ ಹಿರಿಯ ಅಧಿಕಾರಿಗಳ ಜತೆಗೆ ಬೆಂಗಳೂರಿನಲ್ಲಿ ಮಾತನಾಡಿ ಕನಿಷ್ಟ ಗಟ್ಟಿಯಾದಂತಹ ಪರಿಹಾರ ಕಂಡುಕೊಳ್ಳುವ ಯೋಜನೆಯಾಗಲಿದೆ. ಜೊತೆಗೆ ನಿರ್ದಿಷ್ಟ ವಲಯಗಳಲ್ಲಿ ಪ್ರಾಕೃತಿಕ ವಿಕೋಪಗಳು ಇತ್ತೀಚೆಗೆ ಹೆಚ್ಚಾಗಿ ಸಂಭವಿಸುತ್ತಿದ್ದು, ಇದನ್ನು ತಡೆಗಟ್ಟಲು ಸುದೀರ್ಘ ಕಾಲದ ಅಧ್ಯಯನವೂ ಅಗತ್ಯ. ಮಳೆಗಾಲ ಆರಂಭದಲ್ಲೇ ಬಹಳಷ್ಟು ಹಾನಿ ಸಂಭವಿಸುವ ಹಿನ್ನೆಲೆಯಲ್ಲಿ ಮುಂದಿನ ಮಳೆಯ ಸಂದರ್ಭ ಯಾವುದೇ ರೀತಿಯ ಅವಘಢಗಳು ಸಂಭವಿಸದಂತೆ ಅಪಾಯದಲ್ಲಿರುವ ಮನೆಮಂದಿಯನ್ನು ಸ್ಥಳಾಂತರಿಸಲು ಆದೇಶಿಸಲಾಗಿದೆ.
ಈ ಸಂದರ್ಭ ಕಂದಾಯ ಸಚಿವ ಆರ್. ಅಶೋಕ್, ಸಮಾಜಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಂದರು ಹಾಗೂ ಮೀನುಗಾರಿಕಾ ಇಲಾಖೆ ಸಚಿವ ಎಸ್.ಅಂಗಾರ, ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ, ಬಿಜೆಪಿ ಮುಖಂಡರುಗಳಾದ ಸಂತೋಷ್ ರೈ ಬೋಳಿಯಾರ್, ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಸತೀಶ್ ಕುಂಪಲ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಸುರೇಶ್ ಭಟ್ನಗರ ಮುಂತಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.