ಬೆಳ್ಳಾರೆ: ಬೀಡು-ಪಾಟಾಜೆ ದುರಸ್ಥಿಗೆ ಆಗ್ರಹ: ಪ್ರತಿಭಟನೆ ನಡೆಸಲು ನಿರ್ಧರಿಸಿದ ಗ್ರಾಮಸ್ಥರು

ಕಳೆದ 16 ವರುಷಗಳಿಂದ ಹದೆಗೆಟ್ಟಿರುವ ಬೆಳ್ಳಾರೆ ಗ್ರಾಮದ ಬೀಡು-ಪಾಟಾಜೆ ರಸ್ತೆ ಯನ್ನು ಡಾಮರೀಕರಣಗೊಳಿಸುವಂತೆ ಆಗ್ರಹಿಸಿ ಬೆಳ್ಳಾರೆಯ ಮುಖ್ಯ ಪೇಟೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.

ಶೀಘ್ರದಲ್ಲೇ ನಮ್ಮ ಬೀಡು, ಪಾಟಾಜೆ ರಸ್ತೆ ದುರಸ್ತಿಗೊಳಿಸುವ ಭರವಸೆಯನ್ನು ಸರಕಾರ ಹಾಗೂ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಕೊಡದೇ ಹೋದಲ್ಲಿ ಇಲ್ಲಿನ ಎಲ್ಲಾ ನಿವಾಸಿಗಳು ರಸ್ತೆಗೆ ಇಳಿದು ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಈ ರಸ್ತೆಯಿಂದ ಹಾದು ಹೋಗುವಾಗ ನೂತನವಾಗಿ ನಿರ್ಮಿಸಲಾಗಿರುವ ಪೋಲೀಸ್ ಹೆಡ್ ಕ್ವಾಟರ್ಸ್, ಧಾರ್ಮಿಕ ಕೇಂದ್ರಗಳಾದ ಮಸೀದಿ, ಕೊರಗಜ್ಜ ದೇವಸ್ಥಾನ, ಹಾಗೂ ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು ಈ ರಸ್ತೆಯಲ್ಲಿ ನಿತ್ಯ ನೂರಾರು ಸಾರ್ವಜನಿಕರು ಓಡಾಡುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿಗಳು, ನಮ್ಮ ಸರಕಾರ ಹಾಗೂ ಸಂಬಂಧಪಟ್ಟ ಅಧಿಕಾಗಳು ಇದರ ಬಗ್ಗೆ ಹೆಚ್ಚು ಗಮನಹರಿಸುವಂತೆ ವಿನಂತಿಸಿದ್ದಾರೆ.


ಈ ಗ್ರಾಮಸ್ಥರ ಸಮಸ್ಯೆ ಇಂದು ನಿನ್ನೆಯದಲ್ಲ, ಕಳೆದ 16 ವರುಷಗಳಿಂದ ಈ ರಸ್ತೆ ಸಂಪೂರ್ಣ ಹದೆಗೆಟ್ಟು ಹೋಗಿದೆ. ಇದುವರೆಗೆ ಡಾಮರೀಕರಣ ಕಂಡಿಲ್ಲ. ತಕ್ಷಣವೇ ದುರಸ್ಥಿಗೊಳಿಸದೇ ಇದ್ದಲ್ಲಿ ಇಲ್ಲಿನ ನಿವಾಸಿಗಳು ತಾಳ್ಮೆಯನ್ನು ಬದಿಗಿಟ್ಟು ಉಗ್ರ ಹೋರಾಟ ನಡೆಸಲು ಕೈ ಜೋಡಿಸಿದ್ದಾರೆ.
