ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ದಿವಾಳಿ ಅಂಚಿಗೆ : ಭ್ರಷ್ಟಾಚಾರ, ಸೋರಿಕೆ ತಡೆಗಟ್ಟಿ, ಮಂಡಳಿ ಉಳಿಸಿ ಎಂದು ಬೃಹತ್ ಪ್ರತಿಭಟನೆ

ಬೆಂಗಳೂರು, ಸೆ, 21; ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಪ್ರತಿ ವರ್ಷ 2000 ಸಾವಿರ ಕೋಟಿ ರೂಗಿಂತ ಹೆಚ್ಚು ಹಣ ಖರ್ಚು ಮಾಡಲು ಅನುಮೋದನೆ ನೀಡಿದ್ದು, ಇದರಿಂದ ಭಾರೀ ಸೋರಿಕೆ, ಕಮೀಷನ್ ವ್ಯವಹಾರ ಹೆಚ್ಚಾಗಲು ಕಾರಣವಾಗಿದೆ. ಮಂಡಳಿಯನ್ನು ದಿವಾಳಿ ಅಂಚಿಗೆ ಕೊಂಡೊಯ್ಯುವ ಪ್ರಯತ್ನವನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ ಸಂಘ ಕಟ್ಟಡ ಕಾರ್ಮಿಕ ಮಂಡಳಿ ಎದುರು ಬೃಹತ್ ಪ್ರತಿಭಟನೆ ನಡೆಸಿತು. ಫ್ರೀಡಂ ಪಾರ್ಕ್ ಮುಂದೆ ಪ್ರತಿಭಟನಾಕಾರರು ಮಂಡಳಿಯ ಧೋರಣೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅನಾವಶ್ಯಕ ಯೋಜನೆಗಳನ್ನುಜಾರಿಮಾಡಿರುವುದರಿಂದ ಭಾರಿ ಭ್ರಷ್ಟಾಚಾರಕ್ಕೆ ಕಾರಣವಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ 3-4 ವರ್ಷಗಳಲ್ಲಿ ಮಂಡಳಿ ಹಣ ಖಾಲಿಯಾಗಿ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದೇ ರೀತಿ ಭಾರಿ ಪ್ರಮಾಣದಲ್ಲಿ ಹಣ ವೆಚ್ಚ ಮಾಡಿ ಈಗಾಗಲೇ ದೇಶದ ಹಲವಾರು ರಾಜ್ಯಗಳಲ್ಲಿ ಮಂಡಳಿಗಳು ಮುಚ್ಚಿ ಹೋಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ ಸಂಘ ಅಧ್ಯಕ್ಷ ಚಿಂತಾಮನಿ .ಜೋ. ಕೊಡಳ್ಳಿ, ಮಂಡಳಿಯಲ್ಲಿ ವಾರ್ಷಿಕ ಕ್ಯಾಲೆಂಡ್, ಕರಪತ್ರ ಮುದ್ರಣ, ಕಳಪೆ ದರ್ಜೆ ಟೂಲ್ ಕಿಟ್‍ಗಳು, ಸುರಕ್ಷಾ ಕಿಟ್ ಗಳು, ಐ.ಇ.ಆ ಸ್ಕ್ರೀನ್ ಟಿ.ವಿ.ಗಳು, ತರಬೇತಿ ಶಿಬಿರಗಳು, ದುಂದು ವೆಚ್ಚದ ಯೋಜನೆಗಳಲ್ಲಿ ಭಾರಿ ಅಕ್ರಮ ನಡೆಯುತ್ತಿದೆ. ಮಂಡಳಿಯಿಂದ ಸರಕಾರದ ಇತರೆ ಅಂಗ ಸಂಸ್ಥೆಗಳಿಗೆ ನೆರವು ನೀಡಲಾಗುತ್ತಿದೆ. ಹೀಗಾಗಿ ಇಂದಿರಾ ಕ್ಯಾಟೀನ್, ಅಂಬೇಡ್ಕರ್ ಸಹಾಯ ಹಸ್ತ, ನರೇಗಾ ಕಾರ್ಮಿಕರಿಗೆ ಧನಸಹಾಯ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು. ಮುಂಗಡವಾಗಿ ಕೋಟಿ, ಕೋಟಿ, ರೂಪಾಯಿ ಕೊಡುವುದು ತರವಲ್ಲ ಎಂದರು. ಕೋವಿಡ್-19 ಎರಡನೇ ಅಲೆ ಸಂದರ್ಭದಲ್ಲಿ ಕಾರ್ಮಿಕರಿಗೆ ಧನ ಸಹಾಯ ದೊರೆತಿಲ್ಲ. ಜನಪ್ರಿಯ ಯೋಜನೆಗಳು ಚುನಾಯಿತ ರಾಜಕೀಯ ಜನಪ್ರತಿನಿಧಿಗಳ ಯೋಜನೆಗಳಾಗಿ ಮಾರ್ಪಟ್ಟಿವೆ. ರೇಷನ್ ಕಿಟ್‍ಗಳು ಜನಪ್ರತಿನಿಧಿಗಳ ಗೋದಾಮಿನಿಂದ ಹಂಚಿಕೆಯಾಗುತ್ತಿವೆ. ಕಾರ್ಮಿಕ ಇಲಾಖೆಯಲ್ಲಿ ಜನಪ್ರತಿನಿಧಿಗಳು ಬಾರಿ ಹಸ್ತಕ್ಷೇಪ ಮಾಡುತ್ತಿದ್ದು, ಇದಕ್ಕೆ ತಕ್ಷಣವೇ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಕಟ್ಟಡ ಕಾರ್ಮಿಕರಲ್ಲದವರನ್ನು ನೋಂದಣಿ ಮಾಡುವುದು, ಕಾರ್ಡ್ ವಿತರಿಸುವುದನ್ನು ನಿಲ್ಲಿಸಬೇಕು. ಬೇರೆ ಬೇರೆ ರಾಜ್ಯಗಳಲ್ಲಿ ಮಂಡಳಿಯಿಂದ ಶುಲ್ಕ ತೆಗೆದುಕೊಳ್ಳುವ ವ್ಯವಸ್ಥೆಯಿದೆ. ಇಂತಹ ವ್ಯವಸ್ಥೆ ರಾಜ್ಯದಲ್ಲೂ ಜಾರಿಯಾಗಬೇಕು. ಫಲಾನುಭವಿಗಳಿಗೆ ಕೊಡುವ ಗೃಹ ಸಾಲದ ಮುಂಗಡ ಹಣ ಎರಡು ಲಕ್ಷ ಇದ್ದು, ಇದಕ್ಕೆ 14 ಕಠಿಣ ಷರತ್ತುಗಳು ಹಾಕಿರುವುದು ಸರಿಯಲ್ಲ. ಗೃಹ ಕಟ್ಟಡ ನಿರ್ಮಾಣದ ಸಾಮಾಗ್ರಿ ಐದು ಪಟ್ಟು ಹೆಚ್ಚಾಗಿದ್ದು, ಮನೆ, ಜಾಗ ಖರೀದಿಸಲು ಹಾಗೂ ಸೂರು ನಿರ್ಮಿಸಿಕೊಳ್ಳಲು ಹತ್ತು ಲಕ್ಷ ರೂ ಸಾಲ ಕೊಡಬೇಕು ಎಂದರು. ಎಲ್ಲಾ ಕಟ್ಟಡ ಕಾರ್ಮಿಕ ಫಲಾನುಭವಿಗಳಿಗೆ ಶುಲ್ಕ ರಹಿತ ಆರೋಗ್ಯ ಕಾರ್ಡ್ ಕೊಡಬೇಕು. ಇಲ್ಲವಾದಲ್ಲಿ ಎಲ್ಲಾ ಅಸಂಘಟಿತ ಕಟ್ಟಡ ಕಾರ್ಮಿಕರನ್ನು ಇ.ಎಸ್.ಐ ಹಾಗೂ ಪಿ.ಎಫ್ ವ್ಯಾಪ್ತಿಗೆ ತರಬೇಕು. ನಿವೃತ್ತಿ ಪಿಂಚಣಿ ಪ್ರತಿ ತಿಂಗಳು ನಿಗದಿತ ದಿನಾಂಕದಂದು ದೊರೆಯುವಂತಾಬೇಕು. ಕಟ್ಟಡ ಕಾರ್ಮಿಕರಿಗಾಗಿ ಹೊಸ ಸಾಪ್ಟ್ ವೇರ್ ಸೇವೆ ಪ್ರಾರಂಭ ಮಾಡುವುದಾಗಿ 2 ವರ್ಷದಿಂದ ಹುಸಿ ಆಶ್ವಾಸನೆಗಳನ್ನು ನೀಡಲಾಗುತ್ತಿದೆ. ಫಲಾನುಭವಿ ಮಕ್ಕಳ ಶೈಕ್ಷಣಿಕ ಧನಸಹಾಯ ವ್ಯವಸ್ಥೆಯಲ್ಲೂ ಭಾರೀ ಸುಧಾರಣೆಯಾಗಬೇಕಿದೆ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ .ಎಸ್. ನಾಡಿಗೇರ ಮಾತನಾಡಿ, ಬೆಂಗಳೂರಿನಲ್ಲಿ ಕೆಲಸ ಮಾಡುವ ಕಟ್ಟಡ ಕಾರ್ಮಿಕ ಫಲಾನುಭವಿಗಳಿಗೆ ಬಸ್ ಪಾಸ್ ಕೊಡುತ್ತಿದ್ದು, ಇದನ್ನು ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಬೇಕು. “ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ” ಧೋರಣೆ ಕೈಬಿಡಬೇಕು. ಕೇಂದ್ರದಿಂದ ರಾಜ್ಯದ ಕಟ್ಟಡ ಕಾರ್ಮಿಕ ಫಲಾನುಭವಿಗಳಿಗೆ ಇದುವರೆಗೂ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಈ ಕುರಿತು ಮಂಡಳಿ ಗಮನಹರಿಸಬೇಕು.

ಅವೈಜ್ಞಾನಿಕ ನಿಯಮಗಳನ್ನು ಜಾರಿಗೆ ತರುವುದನ್ನು ಕೂಡಲೇ ನಿಲ್ಲಿಸಬೇಕು. “ಪಾರದರ್ಶಕತೆಗೆ ಹೆಚ್ಚಿನ ಆದ್ಯತೆ ಕೊಡಲೇಬೇಕು“ ಕಾರ್ಮಿಕ ಇಲಾಖೆಯಲ್ಲಿ ಕೆಲಸ ಮಾಡುವ ಎಲ್ಲ ಗುತ್ತಿಗೆ ನೌಕರರಿಗೆ ಸೇವೆಯ ಹಿರಿತನದ ಆದಾರದ ಮೇಲೆ ವೇತನ ಹೆಚ್ಚಳ ಮಾಡಬೇಕು. ನೌಕಕರರನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು. ಈ ಹೋರಾಟದ ಸಂದರ್ಭದಲ್ಲಿ ಭಾರತೀಯ ಮಜ್ದೂರ್ ಸಂಘದ ರಾಜ್ಯಾಧ್ಯಕ್ಷರಾದ ಶಂಕರ್ ಸುಲೆಗಾವ, ಅಖಿಲ ಭಾರತೀಯ ಕನ್ ಸ್ಟ್ರಕ್ಷನ್ ಮಜ್ದೂರ್ ಸಂಘದ ಹಿರಿಯ ಮುಖಂಡರಾದ ಬಸವಂತ್ ಸಾಹು ಹಾಗು ಸಿ.ಟಿ.ಪಾಟಿಲ್, ಬಿ.ಎಮ್.ಎಸ್’ನ ನಿಕಟಪೂರ್ವ ರಾಜ್ಯಾಧ್ಯಕ್ಷರಾದ ವಿಶ್ವನಾಥ್ ಶೆಟ್ಟಿ, ಹಿರಿಯ ನಾಯಕರಾದ ಬಿ.ಎಸ್.ದೇಶಪಾಂಡೆ, ರಾಮಕೃಷ್ಣ ಪೂಂಜಾ, ಪುರುಷೋತ್ತಮ, ಡಿ.ವಿ. ರಾಮ ಮೂರ್ತಿ, ಕಟ್ಟಡ ಕಾರ್ಮಿಕರ ಮಜ್ದೂರ್ ಸಂಘದ ಪ್ರಮುಖ ಪದಾಧಿಕಾರಿಗಳಾದ ಜಯರಾಜ್ ಸಾಲ್ಯಾನ್, ಹರಿಶ್ಚಂದ್ರ, ಕಲಿಮ, ಪ್ರಶಾಂತ, ಕುಮಾರ, ಗಿತಾ, ತಾಹಿರಾ ಮುಲ್ಲಾ, ಲಕ್ಷಣ, ಗಂಗಾಧರ್, ಹೆಮಾ, ರಾಜಲಕ್ಷ್ಮಿ ಹಾಗೂ ಇತರೆ ಪ್ರಮುಖರು ಹಾಜರಿದ್ದರು.

Related Posts

Leave a Reply

Your email address will not be published.