ಅಧಿಕಾರದ ಮದ ನೆತ್ತಿಗೇರಿದರೆ ಆತನ ಅವನತಿ ನಿಶ್ಚಿತ : ಶ್ರೀರಾಮ ಕ್ಷೇತ್ರ ಕನ್ಯಾಡಿಯ ಮಠಾಧೀಶರಾದ ಶ್ರೀ ಬ್ರಹ್ಮಾನಂದ ಸರಸ್ವತಿ ನುಡಿ

ಮಠಾಧೀಶರೇ ಆಗಲೀ..ಮಂತ್ರಿ ಮಾಗದರೇ ಆಗಲೀ ಅಧಿಕಾರದ ಪಿತ್ತ ನೆತ್ತಿಗೇರಿ ಎಲ್ಲವೂ ನಾನೇ, ಎಲ್ಲವೂ ನಾನು ನನ್ನಿಂದಲೇ ನಡೆಯಬೇಕು ಎಂಬ ಸರ್ವಾಧಿಕಾರ ಧೋರಣೆ ತಾಳಿದರೆ ಅವರ ಅವನತಿ ಆರಂಭವಾದಂತೆ ಎಂಬುದಾಗಿ ಶ್ರೀರಾಮ ಕ್ಷೇತ್ರ ಕನ್ಯಾಡಿಯ ಮಠಾಧೀಶರಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.

ಅವರು ಕಾಪು ಬಿಲ್ಲವರ ಸಹಾಯಕ ಸಂಘದ ಅಧೀನದಲ್ಲಿ ನೂತನವಾಗಿ ನಿರ್ಮಿಣಗೊಳ್ಳಲಿರುವ ಬ್ರಹ್ಮಶ್ರೀ ನಾರಾಯಣಗುರು ಜ್ಞಾನ ಮಂದಿರದ ಶಿಲಾನ್ಯಾಸ ಕಾರ್ಯದಲ್ಲಿ ಭಾಗವಹಿಸಿ, ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ್ದಾರೆ. ಕೇವಲ ನಾರಾಯಣ ಗುರುಗಳ ಬಗ್ಗೆ ಮಾತನಾಡಿದರೆ ಸಾಲದು, ನಾರಾಯಣ ಗುರುಗಳ ತತ್ವ ಆದರ್ಶವನ್ನು ನೂರಕ್ಕೆ ನೂರು ಅಸಾಧ್ಯವಾದರೂ ಒಂದಿಷ್ಟನ್ನದರೂ ಮೈಗೂಡಿಸಿಕೊಳ್ಳಬೇಕು, ಮಕ್ಕಳಿಗೆ ವಿಧ್ಯೆಯೊಂದಿಗೆ ಸಂಸ್ಕಾರ ನೀಡಿದರೆ ಅನಾಥಾಶ್ರಮ ಸೇರುವ ತಂದೆ ತಾಯಂದಿರ ಸಂಖ್ಯೆಯಾದರೂ ಇಳಿಮುಖವಾದೀತು ಎಂದರು.

ಈ ಸಂದರ್ಭ ಸಂಘದ ಅಧ್ಯಕ್ಷ ವಿಕ್ರಂ ಕಾಪು, ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಅಧ್ಯಕ್ಷ ಡಾ| ರಾಜಶೇಖರ್ ಕೋಟ್ಯಾನ್, ಶಾಸಕ ಲಾಲಾಜಿ ಮೆಂಡನ್, ಮುಂಬೈ ಬಿಲ್ಲವ ಅಸೋಸಿಯೇಶನ್ ಅಧ್ಯಕ್ಷ ಹರೀಶ್ ಜಿ. ಅಮೀನ್, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಸ್.ಎಸ್. ಸಾಯಿರಾಮ್, ಕಟಪಾಡಿ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ ಮುಂತಾದವರಿದ್ದರು.