ದಡಕ್ಕೆ ಅಪ್ಪಳಿಸುತ್ತಿರುವ ಬಾರಿ ಗಾತ್ರದ ಅಲೆಗಳು : ಉಡುಪಿಯಲ್ಲಿ ಪ್ರವಾಸಿಗರಿಗೆ ನಿರಾಶೆ

ಉಡುಪಿ : ಅರಬ್ಬಿ ಸಮುದ್ರದಲ್ಲಿ ಚಂಡಮಾರುತದ ಅಬ್ಬರದಿಂದ ರಾಜ್ಯದ ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಬೇಸಿಗೆಯ ಧಗೆ ಮತ್ತು ಕುಡಿಯುವ ನೀರಿನ ಕೊರತೆಯಿಂದ ಬೇಸತ್ತ ಕರಾವಳಿ ಜನತೆಗೆ ನಿಟ್ಟುಸಿರು ಬಿಡುವಂತಾಗಿದೆ. ಉಡುಪಿ ಜಿಲ್ಲೆಯಾದ್ಯಂತ ತುಂತುರು ಮಳೆ ಮುಂದುವರಿದು ಮೋಡ ಕವಿದ ವಾತಾವರಣ ಮನೆಮಾಡಿದೆ. ಆದರೆ ಕಡಲತೀರದ ಸೌಂದರ್ಯವನ್ನು ಸವಿಯಲು ದೂರದೂರಿನಿಂದ ಬಂದ ಪ್ರವಾಸಿಗರಿಗೆ ಮಾತ್ರ ಮಳೆಯ ದಿಢೀರ್ ಆಗಮನ ಸಂತೋಷವನ್ನುಂಟು ಮಾಡಲಿಲ್ಲ. ಬಿಪರ್ ಜೋಯ್ ಚಂಡಮಾರುತದ ಅಬ್ಬರ ಉಡುಪಿಯಲ್ಲಿ ಜೋರಾಗಿದೆ. ಉಡುಪಿಯಲ್ಲಿ ಒಂದೇ ಒಂದು ಬೋಟುಗಳು ಸಮುದ್ರಕ್ಕೆ ಇಳಿದಿಲ್ಲ. ಬಾರಿ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿರುವುದರಿಂದ ಜಿಲ್ಲೆಯಲ್ಲಿ ಪ್ರವಾಸಿಗರಿಗೆ ನೀರಿಗಿಳಿಯಲು ನಿರ್ಬಂಧ ಹೇರಲಾಗಿದೆ. ಸಮುದ್ರಕ್ಕೆ ಇಳಿಯದಂತೆ ಸಿಬ್ಬಂದಿಗಳಿಗೆ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಉಡುಪಿಯ ಮಲ್ಪೆ, ಕಾಪು ಬೀಚ್ ನಲ್ಲಿ ಬೆಂಗಳೂರು-ಮೈಸೂರು ಕಡೆಯಿಂದ ಬಂದ ಪ್ರವಾಸಿಗರಿಗೆ ನೀರಾಟವಾಡಲು ಅನುಮತಿ ನೀಡದೆ ಭಾರಿ ನಿರಾಶೆ ತರಿಸಿದೆ. ಆದ್ದರಿಂದ ಬಿಪರ್ ಜೋಯ್ ಮೇಲೆ ಪ್ರವಾಸಿಗರಿಗೆ ಅತೀವ ಬೇಸರ ಉಂಟಾಗಿದೆ. ಪ್ರವಾಸಿಗರು ನೀರಾಟವಾಡದೆ ತಮ್ಮ ಊರುಗಳತ್ತ ವಾಪಾಸಾಗುತ್ತಿದ್ದಾರೆ. ಇನ್ನು ಮೂರು ತಿಂಗಳು ಸಮುದ್ರದ ಕಡೆ ಮುಖ ಮಾಡದಿರಲು ಸೂಚನೆಯನ್ನು ಕೂಡ ರವಾನಿಸಲಾಗಿದೆ.
