ಅಪ್ಪಳಿಸಲಿದೆ ‘ಬಿಪರ್ ಜಾಯ್’ : ಉಡುಪಿಗೆ ತಟ್ಟಿದೆ ಚಂಡಮಾರುತ ಭೀತಿ

ಉಡುಪಿ : ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಅರಬ್ಬಿ ಸಮುದ್ರದಲ್ಲಿ ವಾಯಭಾರ ಕುಸಿತದಿಂದ ‘ಬಿಪರ್ ಜಾಯ್’ ಚಂಡಮಾರುತ ಉಂಟಾಗುವ ಸಂಭವವಿದೆ. ರಾಜ್ಯದ ಕರಾವಳಿ ಭಾಗಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಮುಂದಿನ ನಾಲ್ಕು ದಿನಗಳಲ್ಲಿ ಸಮುದ್ರದ ಅಲೆಗಳಲ್ಲಿ ಏರಿಳಿತ ಉಂಟಾಗಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಇದರಿಂದ ಮುಂಗಾರು ಮಳೆ ವಿಳಂಬವಾಗುವಂತಹ ಸಾಧ್ಯತೆಗಳು ಕೂಡ ಇವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಚಂಡಮಾರುತದ ತೀವ್ರ ಪ್ರಭಾವದಿಂದ, ಪ್ರತೀ ಗಂಟೆಗೆ 50-60 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಂಭವವಿದ್ದು, ಕರ್ನಾಟಕ ಸೇರಿ ಮೂರು ರಾಜ್ಯಗಳಿಗೆ ಎಚ್ಚರಿಕೆಯನ್ನು ರವಾನಿಸಲಾಗಿದೆ. ಪ್ರಮುಖವಾಗಿ ಕರಾವಳಿ ಭಾಗದಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯಬಾರದೆಂದು ಸೂಚಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತದಿಂದ ಮುಂಜಾಗೃತಾ ಕ್ರಮವಾಗಿ ಸಾರ್ವಜನಿಕರಿಗೆ ಸೂಚನೆಗಳನ್ನು ನೀಡಲಾಗಿದೆ. ಮೀನುಗಾರರಿಗೆ ಸಮುದ್ರಕ್ಕೆ ತೆರಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಸಾರ್ವಜನಿಕರು ಅಥವಾ ಪ್ರವಾಸಿಗರು ಸಮುದ್ರ ಅಥವಾ ನದಿ ತೀರ ಪ್ರದೇಶಗಳಲ್ಲಿ ಇಳಿಯದಂತೆ ಕಟ್ಟೆಚ್ಚರ ವಹಿಸಬೇಕು. ಸಮುದ್ರ ತೀರ, ಅಪಾಯಕಾರಿ ವಿದ್ಯುತ್ ಕಂಬ ಅಥವಾ ಕಟ್ಟಡ, ಮರಗಳ ಸಮೀಪ ಹಾಗೂ ಮರದಡಿ ನಿಲ್ಲಬಾರದು. ನೆರೆ ಪೀಡಿತ ತಗ್ಗು ಪ್ರದೇಶದಲ್ಲಿ ವಾಸಿಸುವವರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

Related Posts

Leave a Reply

Your email address will not be published.