ದ.ಕ. ಜಿಲ್ಲೆಯಲ್ಲಿ ಬಿಜೆಪಿಯಿಂದ ವಿಜಯ ಸಂಕಲ್ಪ ಯಾತ್ರೆ

ಮಂಗಳೂರು: ರಾಜ್ಯದಿಂದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯು ನಾಲ್ಕು ತಂಡಗಳ ನೇತೃತ್ವದಲ್ಲಿ ವಿವಿಧ ವಿಧಾನಸಭಾ ಕ್ಷೇತ್ರಗಳನ್ನು ಪ್ರವೇಶಿಸಿ ರೋಡ್ ಶೋ, ಸಭೆಗಳನ್ನು ನಡೆಸುತ್ತಿದೆ. ಆರ್.ಅಶೋಕ್ ಹಾಗೂ ಕೆ.ಎಸ್.ಈಶ್ವರಪ್ಪ ನೇತೃತ್ವದ ತಂಡವು ಮುನ್ನಡೆಸುತ್ತಿರುವ ವಿಜಯ ಸಂಕಲ್ಪ ಯಾತ್ರೆಯು ಮಾ.11-13ರವರೆಗೆ ದ.ಕ.ಜಿಲ್ಲೆಯಲ್ಲಿದ್ದು ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ರೋಡ್ ಶೋ, ಸಾರ್ವಜನಿಕ ಸಭೆ ನಡೆಸಲಿದೆ ಎಂದು ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಹೇಳಿದರು.
ನಗರದ ಕೊಡಿಯಾಲಬೈಲ್ ನಲ್ಲಿರುವ ಅಟಲ್ ಕೇಂದ್ರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು. ಮಾ.11ರಂದು ದ.ಕ.ಜಿಲ್ಲೆಯ ಸುಳ್ಯವನ್ನು ಪ್ರವೇಶಿಸಲಿರುವ ವಿಜಯ ಸಂಕಲ್ಪ ಯಾತ್ರೆಯು ಮಧ್ಯಾಹ್ನ 3ಗಂಟೆಗೆ ಅಲ್ಲಿ ರೋಡ್ ಶೋ ನಡೆಸಲಿದೆ. ಸಂಜೆ 5ಗಂಟೆಗೆ ಪುತ್ತೂರು ಪ್ರವೇಶಿಸಿ ಸಾರ್ವಜನಿಕ ಸಭೆ ನಡೆಸಲಿದೆ. ಮಾ.12ರಂದು ಬೆಳಗ್ಗೆ 10.30ಗೆ ಬೆಳ್ತಂಗಡಿ ಪ್ರವೇಶಿಸುವ ವಿಜಯ ಸಂಕಲ್ಪ ಯಾತ್ರೆ ಅಲ್ಲಿ ರೋಡ್ ಶೋ ನಡೆಸಿ, ಮಧ್ಯಾಹ್ನ 3ಗಂಟೆಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರ ಪ್ರವೇಶಿಸಿ ಅಲ್ಲಿಯೂ ರೋಡ್ ಶೋ ನಡೆಸಲಿದೆ. ಸಂಜೆ 5ಗಂಟೆಗೆ ಉತ್ತರ ವಿಧಾನಸಭಾ ಕ್ಷೇತ್ರವನ್ನು ಪ್ರವೇಶಿಸುವ ಯಾತ್ರೆಯು ಅಲ್ಲಿ ಸಾರ್ವಜನಿಕ ಸಭೆಯನ್ನು ನಡೆಸಲಿದೆ.
ಮಾ.13ರಂದು ಬೆಳಗ್ಗೆ 10.30ಗೆ ಮಂಗಳೂರು ವಿಧಾನಸಭಾ ಕ್ಷೇತ್ರವನ್ನು ಪ್ರವೇಶಿಸುವ ವಿಜಯ ಸಂಕಲ್ಪಯಾತ್ರೆಯು ಅಲ್ಲಿ ರೋಡ್ ಶೋ ನಡೆಸಿ, ಮಧ್ಯಾಹ್ನ 3ಕ್ಕೆ ಮೂಡುಬಿದಿರೆಯಲ್ಲಿ ರೋಡ್ ಶೋ ನಡೆಸಲಿದೆ. ಅಲ್ಲಿಂದ ಸಂಜೆ ಕಾರ್ಕಳ ವಿಧಾನಸಭಾ ಕ್ಷೇತ್ರವನ್ನು ಪ್ರವೇಶಿಸಲಿದೆ. ಮಾ.16ರಂದು ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸರಕಾರಿ ಮಟ್ಟದ ಫಲಾನುಭವಿಗಳ ಬೃಹತ್ ಸಮಾವೇಶವು ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿದೆ. ಮೂರುದಿನಗಳ ಈ ವಿಜಯ ಸಂಕಲ್ಪಯಾತ್ರೆಯಲ್ಲಿ ಕಾರ್ಯಕರ್ತರನ್ನು, ಮತದಾರರನ್ನು ಜಾಗೃತಿಗೊಳಿಸುವ ಕಾರ್ಯ ನಡೆಯಲಿದೆ ಎಂದು ಸುದರ್ಶನ ಮೂಡುಬಿದಿರೆ ಹೇಳಿದರು.
ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ಕಸ್ತೂರಿ ಪಂಜ, ಸುಧೀರ್ ಶೆಟ್ಟಿ, ರವಿಶಂಕರ್ ಮಿಜಾರ್, ದೇವದಾಸ್ ಶೆಟ್ಟಿ, ಸಂದೇಶ ಶೆಟ್ಟಿ ಉಪಸ್ಥಿತರಿದ್ದರು.