ಬೈಂದೂರು: ಬಿಜೂರಿನಲ್ಲಿ ಗಮನ ಸೆಳೆದ ಗ್ರಾಮ ಸಂವಾದ

ಬೈಂದೂರು: ಶಾಸಕ ಗುರುರಾಜ್ ಗಂಟಿಹೊಳೆಯವರ ಗ್ರಾಮ ಸಂವಾದ ಕಾರ್ಯಕ್ರಮ ಮುಂದುವರೆಯುತ್ತಿದ್ದು ವ್ಯಾಪಕ ಸ್ಪಂದನೆ ದೊರೆಯುತ್ತಿದೆ. ಬಿಜೂರು ಗ್ರಾಮದಲ್ಲಿ ಗ್ರಾಮ ಸಂವಾದ ನಡೆಸಿದ ಶಾಸಕ ಗುರುರಾಜ್ ಗಂಟಿಹೊಳೆಯವರಿಗೆ ತಮ್ಮ ಸ್ವಕ್ಷೇತ್ರದ ಮತದಾರರು ಸಮಸ್ಯೆಗಳ ಮಹಾಪೂರವನ್ನೇ ಕಣ್ಮುಂದೆ ವಿವರಿಸಿದರು. ಜೆಜೆಎಂ ಪೈಪ್ ಲೈನ್ ಅವ್ಯವಸ್ಥೆ, ಶಾಲಾ ಮಕ್ಕಳಿಗೆ ಕಾಲುಸಂಕಗಳು, ತೆರೆದ ಅಪಾಯಕಾರಿ ಚರಂಡಿ, ದಾರಿದೀಪದ ಸಮಸ್ಯೆ, ಗ್ರಾಮಕರಣಿಕರ ಅಲಭ್ಯತೆ, ಹೀಗೇ ಹಲವು ಸಮಸ್ಯೆಗಳನ್ನು ಶಾಸಕರಿಗೆ ಮನವರಿಕೆ ಮಾಡಿದರು.

ಬಿಜೂರು ಗ್ರಾಮದಲ್ಲಿ ಜೆಜೆಎಂ ಪೈಪ್ ಲೈನ್ ಕಾಮಗಾರಿ ಪೂರ್ಣವಾಗಿಲ್ಲ ಎನ್ನುವುದನ್ನು ಬಿಜೂರು ಗ್ರಾಮಸ್ಥರು ಹೇಳಿದರು. ಶಾಲಿಮಕ್ಕಿ ಪ್ರದೇಶದಲ್ಲಿ ನಿರ್ಮಿಸಲಾದ ಚರಂಡಿಗೆ ಮುಚ್ಚಳ ಅಳವಡಿಸಿಲ್ಲದ ಕಾರಣ ಶಾಲಾ ಮಕ್ಕಳಿಗೆ, ರಾತ್ರಿ ಸಂಚಾರಕ್ಕೆ, ಎದುರಿನಿಂದ ವಾಹನಗಳು ಬಂದರೆ ಅಪಾಯ ಎದುರಿಸುವಂತಾಗಿದೆ ಎಂದು ಗ್ರಾಮಸ್ಥರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ತಕ್ಷಣ ಮುಖ್ಯ ಇಂಜಿನಿಯರ್ ರಾಜ್ ಕುಮಾರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಶೀಘ್ರದಲ್ಲಿ ಕಾಮಗಾರಿ ಆರಂಭಿಸುವಂತೆ ಸೂಚಿಸಿದರು. ಕೋಟ್ಯಾಡಿಯಿಂದ ಶಾಲೆಮಕ್ಕಿಗೆ ಹೋಗುವ ದಾರಿಯಲ್ಲಿ ಕಾಲುಸಂಕದ ಅಗತ್ಯವಿದ್ದು ಮಳೆ ಬಿಟ್ಟಕೂಡಲೇ ಕಾಮಗಾರಿ ಆರಂಭಿಸುವಂತೆ ಗ್ರಾಮಸ್ಥರು ಸಮಸ್ಯೆಗಳನ್ನು ತೋಡಿಕೊಂಡಾಗ ಶಾಸಕರು, ಬೆಂಗಳೂರಿನ ಅರುಣಾಚಲಂ ಟ್ರಸ್ಟ್ ಮೂಲಕ ಮುಂದಿನ ಮಳೆಗಾಲದ ಒಳಗಾಗಿ ಕಾಲು ಸಂಕ ನಿರ್ಮಿಸುವ ಭರವಸೆ ನೀಡಿದರು. ಗಂಟಿಹೊಳೆ ಪ್ರದೇಶದಲ್ಲಿ ದಾರಿ ದೀಪ ಇಲ್ಲದೇ ರಾತ್ರಿ ಸಂಚಾರಕ್ಕೆ ಸಮಸ್ಯೆಯಾಗುತ್ತಿರುವುದು ಗಮನಕ್ಕೆ ಬಂದಾಗ ಶಾಸಕರ ನಿಧಿ ಅಥವಾ ಇನ್ನಾವುದೇ ಅನುದಾನ ಬಳಕೆಗೆ ಅವಕಾಶವಿದ್ದಲ್ಲಿ ತಕ್ಷಣ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

ಶಾಲೆಮಕ್ಕಿ ಹೊಳೆತೋಟ ರಸ್ತೆಗೆ 10 ಲಕ್ಷ ಹಣ ಮಂಜೂರು ಆಗಿದ್ದರೂ ಕಾಮಗಾರಿ ಆರಂಭವಾಗಿಲ್ಲ. ಇನ್ನಾದರೂ ಕಾಮಗಾರಿ ಆರಂಭಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಆದೇಶಿಸುವಂತೆ ಶಾಸಕರಿಗೆ ಗ್ರಾಮಸ್ಥರು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಶಾಸಕ ಗಂಟಿಹೊಳೆ ಮಳೆಗಾಲ ಮುಗಿದ ತಕ್ಷಣ ಕಾಮಗಾರಿ ಆರಂಭಿಸುವ ಭರವಸೆ ನೀಡಿದರು. ಬಿಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈಗ ಗ್ರಾಮ ಅಭಿವೃದ್ಧಿ ಅಧಿಕಾರಿ (ವಿ.ಎ) ಲಭ್ಯರಿಲ್ಲದ ಕಾರಣ ತಕ್ಷಣ ವಾರದಲ್ಲಿ ಕನಿಷ್ಟ ಎರಡು ದಿನಗಳಾದರೂ ಗ್ರಾಮಕರಣಿಕರ ಕಚೇರಿಯಲ್ಲಿ ಲಭ್ಯರಾಗುವಂತೆ ಬೇಡಿಕೆ ಇಟ್ಟರು. ಈ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡಿ ತಪಕ್ಷಣ ಪರಿಹರಿಸುವಂತೆ ಸೂಚಿಸಿದರು.

ಈ ಸಂದರ್ಭ ಗ್ರಾಮ ಪಂಚಾಯತ್ ಅಧ್ಯಕ್ಷ ಚೆಣ್ಣಮ್ಮ, ಉಪಾಧ್ಯಕ್ಷ ರಂಜಿತ್ ಪೂಜಾರಿ ಹಾಗೂ ಎಲ್ಲ ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಇದೇ ಸಂದರ್ಭ ಗ್ರಾಮದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

add - Anchan ayurvedic

Related Posts

Leave a Reply

Your email address will not be published.