1-100ರ ಮಗ್ಗಿಬಾಯಿಪಾಠ ; ಶ್ರೀ ಚೈತನ್ಯ ಟೆಕ್ನೋ ಶಾಲಾ 31 ಮಕ್ಕಳ ದಾಖಲೆ

ಮಂಗಳೂರು: ಈ ಹಿಂದೆ ಮಗ್ಗಿಯನ್ನು ಭಾಯಿಪಾಠ ಮಾಡೋದು ಒಂದು ಸಾಧನೆಯಾಗಿತ್ತು ಹಾಗೂ ವಿದ್ಯಾರ್ಥಿಗಳಿಗೆ ಸವಾಲು ಕೂಡ ಆಗಿತ್ತು. ಆದರೆ ಇದೀಗ ಬದಲಾದ ಶಿಕ್ಷಣ ಕಲಿಕೆಯಲ್ಲಿ ಸರಳವಾಗಿ ಮಗ್ಗಿ ಅಥವಾ ಟೇಬಲ್ ಗಳನ್ನು ಮಕ್ಕಳು ಲೀಲಾಜಾಲವಾಗಿ ಕಂಠ ಪಾಠದಿಂದ ಹೇಳುತ್ತಾ ಇದೀಗ ದಾಖಲೆಯ ಮೇಲೆ ದಾಖಲೆ ನಿರ್ಮಿಸುತ್ತಿದ್ದಾರೆ. ಅಂತಹ ಒಂದು ದಾಖಲೆಯನ್ನು ಶ್ರೀ ಚೈತನ್ಯ ಟೆಕ್ನೋ ಶಾಲೆಯ ಮಕ್ಕಳು ಮಾಡಿದ್ದಾರೆ. ನಗರದ ಶ್ರೀ ಚೈತನ್ಯ ಟೆಕ್ನೋ ಶಾಲೆಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಅಧಿಕೃತವಾಗಿ ಲಂಡನ್‍ನ ‘ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್’ ನಲ್ಲಿ ಭಾಗವಹಿಸಿ ಸಾಧನೆಗೈದಿದ್ದಾರೆ. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು 1-100 ರಿಂದ ಗುಣಾಕಾರ ಟೇಬಲ್ ಗಳನ್ಬು ಯಶಸ್ವಿಯಾಗಿ ಓದಿದರು. ಕಳೆದ ವಾರ ಗುರುವಾರ ಕೊಟ್ಟಾರಚೌಕಿ ಟೆಕ್ನೋ ಚೈತನ್ಯ ಶಾಲಾ ಆವರಣದಲ್ಲಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಇಲ್ಲಿನ 31 ಮಕ್ಕಳು ಭಾಗವಹಿಸಿ ದಾಖಲೆಯಲ್ಲಿ ಸೇರ್ಪಡೆಗೊಂಡರು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸೇರಿದಂತೆ 10 ರಾಜ್ಯಗಳ ಮಕ್ಕಳು, 73 ಶಾಖೆಗಳು ಮತ್ತು 2,000 ಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಸ್ಥೆಯ ಎಜಿಎಂ ರಾಮಕೃಷ್ಣ ಭೋಗ್ಯಂ ಮಾತನಾಡಿ, ಮಂಗಳೂರು ಶಾಲೆಯ ಒಟ್ಟು 31 ವಿದ್ಯಾರ್ಥಿಗಳು ದಾಖಲೆ ನಿರ್ಮಿಸುವ ಯತ್ನದಲ್ಲಿ ಭಾಗವಹಿಸಿದ್ದು, 1-100 ರಿಂದ 100 ನಿಮಿಷಗಳಲ್ಲಿ ಗಣಿತದ ಟೇಬಲ್ ಪೂರ್ಣಗೊಳಿಸಿದ್ದಾರೆ. “ದಾಖಲೆಯನ್ನು ರಚಿಸಲು ಸಿದ್ಧರಾಗಲು, ಆಯ್ಕೆಯಾದ ವಿದ್ಯಾರ್ಥಿಗಳು 100 ದಿನಗಳ ತರಬೇತಿಯನ್ನು ಶಾಲೆಯ ಶಿಕ್ಷಕರ ತಂಡದಿಂದ ಪಡೆದಿದ್ದರು.ಈ ಹಿಂದೆಯೂ ಇಲ್ಲಿನ ಶಾಲಾ ಮಕ್ಕಳು ಜಾಗತಿಕ ದಾಖಲೆಯ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನಾರ್ಹ ಸಾಧನೆ ಮಾಡಿ ಹೆಸರು,ಕೀರ್ತಿ ತಂದು ಕೊಟ್ಟಿದ್ದಾರೆ ಎಂದು ಸಂಸ್ಥೆಯ ಎಜಿಎಂ ಆಗಿರುವ ರಾಮಕೃಷ್ಣ ಬೋಗ್ಯಂ ಹೇಳಿದರು. ಮಕ್ಕಳನ್ನು ಈ ದಾಖಲೆಯ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಲು ಕೈಗೊಂಡ ಕ್ರಮದ ಬಗ್ಗೆ ಪ್ರಾಂಶುಪಾಲೆ ವನಜ ನಾರಾಯಣ ಸ್ವಾಮಿ ವಿವರಿಸಿದರು. ಉಪಪ್ರಾಂಶುಪಾಲೆ ಕಲಾ ನಾಯರ್ ಹಾಗೂ ಸಾಧನೆಗೆ ಸಹಕರಿಸಿದ ಶಾಲಾ ಶಿಕ್ಷಕರು ಈ ಸಂದರ್ಭ ಉಪಸ್ಥಿತರಿದ್ದರು.
