ಚಿತ್ರಾಪುರದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ

ಚಿತ್ರಾಪುರದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಾರ್ಚ್ 13ರಂದು ಬ್ರಹ್ಮಕಲಶೋತ್ಸವ ನಡೆಯಲಿದ್ದು, ಈ ಪ್ರಯುಕ್ತ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಹಾಗೂ ವಿವಿಧ ದಾನಿಗಳಿಂದ ದೇವಸ್ಥಾನಕ್ಕೆ ನೀಡಲಾದ ಕೊಡುಗೆಗಳ ಉದ್ಘಾಟನೆ ಹಾಗೂ ಮೆರವಣಿಗೆ ಜರುಗಿತು. ದಾನಿ ಕೃಷ್ಣ ಶೆಟ್ಟಿ ಶ್ರೀದ್ವಾರ ಅವರು ನಿರ್ಮಿಸಿದ ಹೆದ್ದಾರಿ ಬದಿಯ ರಾಜಗೋಪುರದ ಉದ್ಘಾಟನೆಯನ್ನು ಕಟೀಲು ಕ್ಷೇತ್ರದ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ, ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ಚಿತ್ರಾಪುರ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು.

ದಾನಿ ದಿವಾಕರ ಉದ್ಯಾವರ ಡಾ. ರವಿರಾಜ್ ಉದ್ಯಾವರ ಅವರಿಂದ ಮುಖ್ಯ ದ್ವಾರಕ್ಕೆ ಬೆಳ್ಳಿ ಕವಚ, ಕಲ್ಬಾವಿ ರಮೇಶ್ ರಾವ್ ಅವರಿಂದ ಒಳಭಾಗದ ಮುಖ್ಯದ್ವಾರಕ್ಕೆ ಬೆಳ್ಳಿ ಕವಚ, ಡಾ. ದರ್ಶನ್ ಉದ್ಯಾವರ ಅವರಿಂದ ಗಣಪತಿ ದೇವರಿಗೆ ಬೆಳ್ಳಿ ಕವಚ, ಶಾಸ್ತ್ರಾ ದೇವರಿಗೆ ಸಂಕೇತ್ ಡೊ ಉದ್ಯಾವರ ಅವರಿಂದ ಬೆಳ್ಳಿ ಕವಚ ಹಸ್ತಾಂತರ ನಡೆಯಿತು.

ಭಕ್ತರಾದ ಸುರೇಶ್ ಕುಮಾರ್ ಅವರು ದೇವಿಗೆ ಚಿನ್ನದ ಮಲ್ಲಿಗೆ ಸರವನ್ನು ಸಮರ್ಪಿಸಿದರು. ಬೆಳ್ಳಿ ಕಲಶವನ್ನು ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು ದೇವರಿಗೆ ಸಮರ್ಪಿಸಿದರು.ಭಕ್ತರು ಕೊಡುಗೆಯಾಗಿ ನೀಡಿದ ಬಂಗಾರದ ಮುಗಿಳಿಯನ್ನು ಮೆರವಣಿಗೆಯಲ್ಲಿ ಕ್ಷೇತ್ರಕ್ಕೆ ತರಲಾಯಿತು. ಪೂರ್ವಭಾವಿಯಾಗಿ ಕ್ಷೇತ್ರದಲ್ಲಿ ಕುಡುಪು ವೇದಮೂರ್ತಿ ನರಸಿಂಹ ತಂತ್ರಿ ಅವರ ಮುಂದಾಳತ್ವದಲ್ಲಿ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಉಗ್ರಾಣದಲ್ಲಿ ಹೊರೆಕಾಣಿಕೆ ಪೂರಣ ಮತ್ತಿತರರ ಕಾರ್ಯಕ್ರಮಗಳು ನೆರವೇರಿದವು. ಸಾವಿರಾರು ಭಕ್ತರು ಆಗಮಿಸಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಕ್ಷೇತ್ರದ ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ, ವಿವಿಧ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published.